ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ: ಪಿ. ಗಾದೆಪ್ಪ

ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ: ಪಿ. ಗಾದೆಪ್ಪ Cultural programs provide peace of mind: P. Gadeppa

ಬಳ್ಳಾರಿ 17:  ಇಂದಿನ ಯಾಂತ್ರಿಕ ಜೀವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರ ಪಿ. ಗಾದೆಪ್ಪ ಹೇಳಿದರು.ನಗರದ ರಾಘವ ಕಲಾಮಂದಿರದಲ್ಲಿ ಆಲಾಪ್ ಸಂಗೀತ ಕಲಾಟ್ರಸ್ಟ್‌ ಬಳ್ಳಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ವಿಶೇಷ ಘಟಕ ಯೋಜನೆಯಡಿ ಆಯೋಜಿಸಿದ್ದ “ಸಾಂಸ್ಕೃತಿಕ ಕಲಾ ವೈಭವ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಬಳ್ಳಾರಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ವಿಷಾದನೀಯ. ಟಿವಿ ಮತ್ತು ಮೊಬೈಲ್ಗಳ ಹಾವಳಿಯಿಂದ ಜನರು ಸಾಂಸ್ಕೃತಿಕ ಚಟುವಟಿಕೆಗಳಿಂದ ದೂರವಾಗುತ್ತಿದ್ದಾರೆ. ಆದರೂ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿರುವುದು ಸಂತೋಷ ತಂದಿದೆ ಎಂದು ಹೇಳಿದರು. ಕಾರ್ಯಕ್ರಮ ಆಯೋಜಿಸಿದ ಆಲಾಪ್ ಸಂಗೀತ ಕಲಾಟ್ರಸ್ಟ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಅಭಿನಂದಿಸಿದರು.ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿವಲಿಂಗಪ್ಪ ಹಂದಿಹಾಳ, ಲೇಖಕರಾದ ಬಿ. ಕುಬೇರ​‍್ಪ, ತಾರಾನಾಥ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಅಧೀಕ್ಷಕ ಡಾ. ಕೆ. ಹನುಮಂತಪ್ಪ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಗೌರವಾಧ್ಯಕ್ಷ ಸಿದ್ದರಾಮ ಕಲ್ಮಠ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಶ್ರೀಮತಿ ನೇತ್ರಾವತಿ, ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಕಾರ್ಯದರ್ಶಿ ಮುದ್ದಟನೂರು ತಿಪ್ಪೇಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಆಲಾಪ್ ಸಂಗೀತ ಕಲಾಟ್ರಸ್ಟ್‌ ಅಧ್ಯಕ್ಷ ರಮಣಪ್ಪ ಭಜಂತ್ರಿ ಸ್ವಾಗತಿಸಿ, ಕಳೆದ ಹತ್ತು ವರ್ಷಗಳಿಂದ ಸಂಸ್ಥೆ ಬಳ್ಳಾರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ ಎಂದು ಪ್ರಾಸ್ತಾವಿಕವಾಗಿ ತಿಳಿಸಿದರು.

ವೇದಿಕೆ ಕಾರ್ಯಕ್ರಮದ ಬಳಿಕ ಜಡೇಶ ಎಮ್ಮಿಗನೂರು ಅವರ ತಂಡದಿಂದ ಸುಗಮ ಸಂಗೀತ, ಅಭಿನಯ ಮತ್ತು ತಂಡದಿಂದ ಜಾನಪದ ನೃತ್ಯ, ಶ್ರೀಮತಿ ಹುಲಿಗೆಮ್ಮ ಮತ್ತು ತಂಡದಿಂದ ತೊಗಲುಗೊಂಬೆ ಪ್ರದರ್ಶನ, ಭೀಮೇಶ್ ಸಿರಿಗೇರಿ ತಂಡದಿಂದ ಬಯಲಾಟ ಪ್ರದರ್ಶನಗಳು ನಡೆಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು.ಕಾರ್ಯಕ್ರಮವನ್ನು ಕೂಡ್ಲಿಗಿಯ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಜಿ. ಆಂಜನೇಯ ನಿರೂಪಿಸಿ, ವಂದಿಸಿದರು.