ವಿಜಯಪುರ 07: ಅಕ್ಕನ ಅಂಗಳದಲ್ಲಿ ಸಾಂಸ್ಕೃತಿಕ ಮೆರುಗು ಹೆಚ್ಚಿದ್ದು, ಇದೇ. ಮಾ.8ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡ ಮಹಿಳಾ ಸಾಂಸ್ಕೃತಿಕ ಹಬ್ಬ ಎಲ್ಲರ ತನು-ಮನಸೆಳೆಯಿತು. ವಿದ್ಯಾರ್ಥಿನಿಯರು ಅತ್ಯಂತ ಹುಮ್ಮುಸ್ಸಿನಿಂದ ಸಾಂಸ್ಕೃತಿಕ ಕಾರ್ಯಕ್ರಮ, ಆಹಾರಮೇಳ, ಸ್ಪರ್ಧೆ ಹೀಗೆ ಹಲವಾರು ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಕಾರ್ಯಕ್ರಮಗಳಿಗೆ ಮೆರಗು ತುಂಬಿದರು.
ಜುಂಬಾ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮುಂಜಾನೆ 6 ಗಂಟೆಗೆ ಜುಂಬಾ ನೃತ್ಯವನ್ನು ಆಯೋಜಿಸಲಾಗಿತ್ತು. ಈ ಜುಂಬಾ ನೃತ್ಯದಲ್ಲಿ ಭಾಗಿಯಾದ ಸಾವಿರಾರು ವಿದ್ಯಾರ್ಥಿನಿಯರು ಜುಂಬಾ ನೃತ್ಯದ ಮೂಲಕ ಎಲ್ಲರ ಗಮನ ಸೆಳೆದರು.
ಸಾಂಸ್ಕೃತಿಕ ಸಂಭ್ರಮ: ವಿವಿಯಿಂದ ಹಮ್ಮಿಕೊಂಡ ಮಹಿಳಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾದ ವಿದ್ಯಾರ್ಥಿನಿಯರು ಜಾನಪದ, ದೇಶಭಕ್ತ ಸೇರಿದಂತೆ ಹಲವಾರು ನೃತ್ಯಗಳನ್ನು ಪ್ರದರ್ಶಿಸಿದರು. ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಭರತ್ಯನಾಟ್ಯ, ಯೋಗನೃತ್ಯ, ಲಾವಣಿ, ಹಾಸ್ಯನೃತ್ಯಗಳು ವಿವಿಧ ಬಗೆಯ ನೃತ್ಯಗಳಲ್ಲಿ ಹಲವಾರು ವಿಭಾಗಗಳ ವಿದ್ಯಾರ್ಥಿನಿಯರು ಭಾಗಿಯಾಗಿ ಸಾಂಸ್ಕೃತಿಕ ಹಬ್ಬಕ್ಕೆ ಮೆರಗು ತಂದರು.
ಸುಚಿ-ರುಚಿ ಆಹಾರ ಮೇಳ: ಪ್ರತಿ ಸಾರಿಯಂತೆ ಈ ಬಾರಿಯೂ ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಯ ಅಂಗಳದಲ್ಲಿ ಆಹಾರ ಮೇಳಕ್ಕೆ ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ ಚಾಲನೆ ನೀಡಿದರು. ಈ ಆಹಾರ ಮೇಳದಲ್ಲಿ ವಿವಿಧ ವಿಭಾಗದ ವಿದ್ಯಾರ್ಥಿನಿಯರು ತಮ್ಮ ಮಳಿಗೆಗಳನ್ನು ಹಾಕಿಕೊಂಡು ಬಿಸಿಲಿನ ಬೆಗೆ ಇಳಿಸುವ ತಂಪು ಲಿಂಬು ಪಾನಿಯ, ಮಸಾಲಾ ಮಜ್ಜಿಗೆ, ರಾಗಿ ಅಂಬಲಿ, ಫ್ರೂಟ್ ಸಲಾಡ್, ಸೇರಿದಂತೆ ವಿವಿಧ ಬಗೆಯ ಖ್ಯಾಧ್ಯಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಹಲವಾರು ಜನರು ಆಹಾರ ಮಳಿಗೆಗಳಿಗೆ ಭೇಟಿ ನೀಡಿ ವಿವಿಧ ಬಗೆಯ ತಿಂಡಿ ಸವಿದು ಆನಂದಿಸಿದರು. ವಿಶೇಷವಾಗಿ ಆಹಾರ ಮೇಳದಲ್ಲಿ ಹಲವು ಬಗೆಯ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡಿ ಭೋಜನ ಪ್ರೀಯರನ್ನು ತಮ್ಮತ್ತ ಸೆಳೆಯುತ್ತಿರುವ ವಿದ್ಯಾರ್ಥಿನಿಯರ ಈ ನಡೆಯು ಆಹಾ..ಜನುಮವೇ ದೊರೆತಿದೆ ರುಚಿ ಸವಿಯಲು ಎನ್ನುವ ಹಾಡನ್ನು ನೆನಪಿಸುವಂತಿತ್ತು.
ಜ್ಞಾನದಾಸೋಹ ಬಡಿಸಿದ ಕಾರ್ಯಾಗಾರಗಳು: ವಿವಿಧ ವಿಭಾಗಗಳಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸುವ ಸಲುವಾಗಿ ಹಲವಾರು ವಿಷಯಗಳ ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಗಾರದಲ್ಲಿ ಆಸಕ್ತಿಯನ್ನು ತೋರಿ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕೌಶಲ್ಯಭಿವೃದ್ಧಿ ಮಾಡಿಕೊಂಡರು.
ಮನಸೆಳೆದ ಮಳಿಗೆಗಳು: ಇದಷ್ಟೇ ಅಲ್ಲದೆ ಪುಸ್ತಕ ಮಳಿಗೆ, ಬಟ್ಟೆ ಮಳಿಗೆ, ಮತ್ತು ಮಹಿಳೆಯರ ಅಂದವನ್ನು ಹೆಚ್ಚಿಸುವ ವಿವಿಧ ಬಗೆಯ ಆಭರಣ, ಬಟ್ಟೆಗಳು ಮಹಿಳೆಯರ ಕಣ್ಮನ ಸೆಳೆಯುವಂತಿದ್ದವು. ಮನೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಾಯಕಾರಿಯಾಗುವಂತಹ ಸಸಿಗಳನ್ನು ಕೂಡ ಈ ಮೇಳದಲ್ಲಿ ಇಡಲಾಗಿದ್ದು ವಿಶೇಷ.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಅಕ್ಕನ ಅಂಗಳದಲ್ಲಿ ಮಹಿಳಾ ಸಾಂಸ್ಕೃತಿಕ ಹಬ್ಬವನ್ನು ಹಮ್ಮಿಕೊಳ್ಳಲಾಗಿದ್ದು, ಕಾಲ ಸಾಂಸ್ಕೃತಿಕ ಹಬ್ಬವು ಅತ್ಯಂತ ಸಡಗರ ಸಂಭ್ರಮದಿಂದ ಜರಗುತ್ತಿದೆ. ಸಂಗೀತ, ನೃತ್ಯ, ನಾಟಕ, ಪ್ರಬಂಧ ಸ್ಪರ್ಧೆ, ವಸ್ತು ಪ್ರದರ್ಶನ, ಜುಂಬಾ ತರಬೇತಿ, ಆಶು ಭಾಷಣ ಸ್ಪರ್ಧೆ, ಆಹಾರ ಮೇಳ ಮುಂತಾದ ವಿಶೇಷ ಕಾರ್ಯಕ್ರಮಗಳನ್ನು ವಿವಿಧ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರತಿನಿತ್ಯ ತಮ್ಮದೇ ಆದಂತಹ ಪಠ್ಯಚಟುವಟಿಕೆಗಳಲ್ಲಿ ಬೇಸತ್ತ ವಿದ್ಯಾರ್ಥಿನಿಯರಿಗೆ ಮಹಿಳಾ ಹಬ್ಬವೆಂದರೆ ಎಲ್ಲಿಲದ ಸಡಗರ ಸಂಭ್ರಮ ವಿವಿಧ ರೀತಿಯ ಕಾರ್ಯಕ್ರಮಗಳಲ್ಲಿ ತಮ್ಮನು ತಾವು ತೊಡಗಿಸಿಕೊಂಡು ಈ ಮೂರು ದಿನಗಳನ್ನು ಹಬ್ಬದ ತರಹ ಆಚರಣೆ ಮಾಡುತ್ತಿದ್ದಾರೆ.
ಮಹಿಳಾ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಸಂಘಟಿಸುತ್ತಿರುವ ಸಮಿತಿಯ ಸದಸ್ಯೆ ಸಂಚಾಲಕಿ ಪ್ರೊ. ಲಕ್ಷ್ಮೀದೇವಿ ವೈ, ಮತ್ತು ಮಹಿಳಾ ಅಧ್ಯಯನ ವಿಭಾಗದ ತಂಡ ಹಾಗೂ ವಿವಿಧ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರನ್ನು ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ, ಕುಲಸಚಿವ ಶಂಕರಗೌಡ ಸೋಮನಾಳ ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಮ್. ಚಂದ್ರಶೇಖರ ಅವರು ಅಭಿನಂದಿಸಿದ್ದಾರೆ.