ಕರ್ನಾಟಕ ಲಾಡ್ ಸಮುದಾಯದ ಸಾಂಸ್ಕೃತಿಕ ನೆಲೆಗಳು ಲಾಡ್ ಎನ್ನುವುದು ಒಂದು ಸಮುದಾಯದ ಹೆಸರಲ್ಲ : ರಾಹುಲ್ ಎಸ್.ಎಂ ಸಂಶೋಧನಾರ್ಥಿ
ಹಂಪಿ 20: ಲಾಡ್ ಎನ್ನುವುದು ಒಂದು ಪ್ರದೇಶದ ಹೆಸರು ಹೊರತು, ಅದು ಜಾತಿ ಮತ್ತು ಸಮುದಾಯದ ಹೆಸರಲ್ಲ. ಈ ಸಮುದಾಯದಲ್ಲಿ ಎಲ್ಲ ಜಾತಿಯ ಜನಸಾಮಾನ್ಯರನ್ನು ಕಾಣಬಹುದು ಎಂದು ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಸಂಶೋಧನಾರ್ಥಿಯಾದ ರಾಹುಲ್ ಎಸ್.ಎಂ ಪ್ರತಿಪಾದಿಸಿದರು.
ಕನ್ನಡ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಆಯೋಜಿಸಿದ ಸಮಾಜಮುಖಿ ತಿಂಗಳ ಮಾತು-4ರ ಕಾರ್ಯಕ್ರಮದಲ್ಲಿ ಕರ್ನಾಟಕ ಲಾಡ್ ಸಮುದಾಯದ ಸಾಂಸ್ಕೃತಿಕ ನೆಲೆಗಳು ಎಂಬ ವಿಷಯ ಮಂಡಿಸಿ ಮಾತನಾಡುತ್ತಾ, ಲಾಡ್ ಪದವು ಗುಜರಾತಿನ ಲಾಟ್ ಪ್ರವೇಶದಿಂದ ಬಂದಿರುವ ಶಬ್ದವಾಗಿದೆ. ಲಾಟ್ ಪ್ರದೇಶದ ಜನರು ಹೆಚ್ಚಾಗಿ ಕುದುರೆ, ಅರಿಸಿಣ ಕುಂಕುಮ ಹಾಗೂ ಸುಗಂಧ ದ್ರವ್ಯಗಳ ವ್ಯಾಪಾರಗಳು ತಮ್ಮ ಮೂಲ ವೃತ್ತಿಯಾಗಿಸಿಕೊಂಡಿದ್ದರು ಎಂದು ಪಂಪನು ತಮ್ಮ ಕಾವ್ಯ ಹಾಗೂ ನಿಘಂಟಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನೂ ಲಾಡ್ ಸಮುದಾಯದ ಚಾರಿತ್ರಿಕ ಹಿನ್ನೆಲೆಯನ್ನು ಗಮನಿಸುವುದಾದರೆ ಬಾದಾಮಿ ಚಾಲುಕ್ಯರ ಕಾಲಘಟ್ಟದಲ್ಲಿ ಇವರ ಕುರುಹುಗಳು ದೊರಕಿವೆ ಎಂದು ತಿಳಿಸಿದರು. ಪ್ರಸ್ತುತ ಕರ್ನಾಟಕದಲ್ಲಿ 8 ರಿಂದ 10 ಸಾವಿರ ಜನಸಂಖ್ಯೆ ಜನರನ್ನು ಕಾಣಬಹುದು. ಲಾಡ್ ಸಮುದಾಯಕ್ಕೆ ತನ್ನದೇ ಚೌರಾಸಿ ಎನ್ನುವ ಭಾಷೆಯಿದ್ದು ಅದಕ್ಕೆ ಲಿಪಿ ಇಲ್ಲ. ಚೌರಾಸಿ ಎಂದರೆ 84 ಎಂದು ಅರ್ಥ, ಲಾಟರ್ ಪ್ರದೇಶವೂ ಬಂದರು ಪ್ರದೇಶವಾಗಿದ್ದು ಅಲ್ಲಿ ದೇಶ ವಿದೇಶಗಳ ವ್ಯಾಪಾರಸ್ಥರು ವ್ಯಾಪಾರದ ದೃಷ್ಟಿಕೋನದಿಂದ ಈ ಭಾಷೆಯನ್ನು ಬಳಕೆ ಮಾಡುತ್ತಿದ್ದರು ಎಂದು ನುಡಿದರು. ಆದರೆ ಮರಾಠಿ ಸಮುದಾಯಕ್ಕೂ ಲಾಡ್ ಸಮುದಾಯಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಮರಾಠಿ ಸಮುದಾಯದಲ್ಲಿ 96 ಕುಳಿಗಳಿದ್ದು, ಅದರಲ್ಲಿ 80 ಕುಳಿ ಲಾಟ್ ಸಮುದಾಯದಾಗಿದೆ. ಮುಖ್ಯವಾಗಿ ಕರ್ನಾಟಕದಲ್ಲಿ ಲಾಡ್ ಸಮುದಾಯವು ಜಾತಿಯಾಗಿ ಪರಿಗಣಿಸಲಾಗಿದೆ. ಆದರೆ ಲಾಡ್ ಸಮುದಾಯ ಕೇವಲ ರಾಜಕೀಯ ಹಿನ್ನೆಲೆಯಲ್ಲಿ ನೋಡಲಾರದೆ ಅದರಲ್ಲಿರುವ ಸಾಂಸ್ಕೃತಿಕ ನೆಲೆಗಳಲ್ಲಿ ಕಾಣಬೇಕು ಎಂದು ತಿಳಿಸಿದರು.
ಸಮಾಜಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಡಾ. ಯರಿ್ರಸ್ವಾಮಿ ಈ., ಅವರು ಮಾತನಾಡುತ್ತಾ, ನಮ್ಮ ಅಧ್ಯಯನವು ಹೆಚ್ಚು ಸಮೀಕ್ಷೆಗಳಿಂದ ಕೂಡಿರಬೇಕು. ಹಾಗಾದರೆ ಮಾತ್ರ ನಮ್ಮ ಸಂಶೋಧನೆಯು ಹೆಚ್ಚು ಗುಣಮಟ್ಟದಿಂದ ಕೂಡಿರುತ್ತದೆ. ಮುಖ್ಯವಾಗಿ ಒಂದು ಜಾತಿಯನ್ನು ನೋಡುವ ಸಂದರ್ಭದಲ್ಲಿ ಹುಟ್ಟು, ವಿವಾಹ ಹಾಗೂ ಸಾವಿನ ಅಂಶಗಳಿಂದ ಅವರ ಜಾತಿಯನ್ನು ನಿರ್ಧಾರ ಮಾಡಬೇಕಾಗುತ್ತದೆ. ಇನ್ನೂ ಹೆಣ್ಣು ಮತ್ತು ಗಂಡು ಸಮಬಲ ಸಾಧಿಸಬೇಕಾದರೆ ಅವರ ಗೋತ್ರ ಬಹಳ ಮುಖ್ಯವಾಗುತ್ತದೆ. ಗೋತ್ರ ಇಲ್ಲದೆ ಜಾತಿಯನ್ನು ಪರಿಗಣಿಸಲು ಸಾಧ್ಯವೇ ಇಲ್ಲ. ಒಂದು ಸಮುದಾಯದ ಸಾಂಸ್ಕೃತಿಕ ನೆಲೆಗಟ್ಟನ್ನು ನೋಡುವ ಸಂದರ್ಭದಲ್ಲಿ ಗೋತ್ರ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ವೆಂಕಟಗಿರಿ ದಳವಾಯಿ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಲೆಮಾರಿನ ಪ್ರೀತಿ ಇರುವ ವ್ಯಕ್ತಿ ಇಂತಹ ವಿಚಾರ ಮಂಥನ ಮಾಡುತ್ತಾನೆ. ಬಹಳ ಮುಖ್ಯವಾಗಿ ಸಮುದಾಯಗಳ ಅಧ್ಯಯನಗಳನ್ನು ಮಾಡುವ ಸಂದರ್ಭದಲ್ಲಿ ಸಮುದಾಯಗಳ ಆರಂಭ ಎಲ್ಲಿಂದ ಅದರ ಅಂತ್ಯ ಬಹಳ ಮುಖ್ಯವಾಗಿದ್ದು, ವರ್ತಮಾನವನ್ನು ಸರಿಯಾದ ದೃಷ್ಟಿಕೋನದಿಂದ ಅರ್ಥೈಸಿಕೊಂಡು ಅಧ್ಯಯನ ಕೈಗೊಳ್ಳಬೇಕು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಮ್ಮನ್ನು ನಾವೇ ಶೋಷಿಸಿಕೊಳ್ಳುವುದು ವಿಪರ್ಯಾಸವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಸಮಾಜಮುಖಿ ತಿಂಗಳ ಮಾತು-4ರ ಸಂಚಾಲಕರಾದ ತಿಪ್ಪೇಶ್ ಬಿ, ವಿವಿಧ ನಿಕಾಯಗಳ ಡೀನರು ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಅಧಿಕಾರಿಗಳು, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.