ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಬಸವರಾಜ ದೊಡ್ಡಮನಿ

ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಬಸವರಾಜ ದೊಡ್ಡಮನಿ Cultivate the habit of reading books: Basavaraja Doddamani

ಲೋಕದರ್ಶನ ವರದಿ  

ಹಾವೇರಿ 18:  ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವುದು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ. ಸಮಕಾಲೀನ ವಿಷಯಗಳ ಅರಿವು ಮತ್ತು ಜ್ಞಾನ ವೃದ್ಧಿಗೆ ಗ್ರಂಥಾಲಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಗ್ರಂಥಾಲಯಗಳಿಗೆ ಭೇಟಿ ನೀಡಿ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಿವೃತ್ತ ಪ್ರಾಂಶುಪಾಲ ಬಸವರಾಜ ದೊಡ್ಡಮನಿ ಹೇಳಿದರು.  

ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದ ಮಂಜುನಾಥ ನಗರ ಶಾಖಾ ಗ್ರಂಥಾಲಯದಲ್ಲಿ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ‘ಓದುವ ಸಪ್ತಾಹ’ ಕಾರ್ಯಕ್ರಮ ಹಾಗೂ ಈಜರಿಲಕಮಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ‘ಗ್ರಂಥಾಲಯ ಮತ್ತು ಪುಸ್ತಕ ವೀಕ್ಷಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಗ್ರಂಥಪಾಲಕ ಎಂ. ಹೆಚ್‌. ದೊಡ್ಡದೇವರ ಮಾತನಾಡಿ, ಗ್ರಂಥಾಲಯದಲ್ಲಿ ಉತ್ತಮ ಓದುವ ವಾತಾವರಣ ಹಾಗೂ ವಿವಿಧ ರೀತಿಯ ಪುಸ್ತಕಗಳ ಸೌಲಭ್ಯ ಲಭ್ಯವಿದ್ದು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಗ್ರಂಥಾಲಯವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.  ಕಾರ್ಯಕ್ರಮದಲ್ಲಿ ಶಿಕ್ಷಕಿ ಶ್ರೀಮತಿ ಆರ್‌. ಎಸ್‌. ಡಬ್ಬನವರ ಸ್ವಾಗತಿಸಿದರು. ಹರೀಶ್, ಶಂಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.