ಸೈದಾಪುರ-ಸಮೀರವಾಡಿಯಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ

ಸೈದಾಪುರ-ಸಮೀರವಾಡಿಯಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ  Joyous 80th Independence Day celebration in Saidapura-Sameerawadi


ರಬಕವಿ-ಬನಹಟ್ಟಿ  16 : ಸೈದಾಪುರ ಸಮೀರವಾಡಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ವಿವಿಧ ಸರ್ಕಾರಿ ಕಚೇರಿಗಳು, ಶಾಲೆಗಳು, ಕಾರ್ಖಾನೆಗಳು ಹಾಗೂ ಸಂಘ-ಸಂಸ್ಥೆಗಳ ವತಿಯಿಂದ ಸಂಭ್ರಮದಿಂದ ಆಚರಿಸಲಾಯಿತು. ಸೈದಾಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಭಿವೃದ್ಧಿ ಅಧಿಕಾರಿ ಚಿನ್ನಪ್ಪ ಹಿರೇಕುರುಬರ್ ಧ್ವಜಾರೋಹಣ ನೆರವೇರಿಸಿದರು. ಸಮೀರವಾಡಿ ಮಜದೂರ ಯೂನಿಯನ್ ಕಚೇರಿ, ಸೋಮಯ್ಯ ಶಿಶುನಿಕೇತನ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೈದಾಪುರ ಹಾಗೂ ಸಮೀರವಾಡಿ ಗೋದಾವರಿ ಬಯೋರಿಫೈನರೀಸ್ ಆವರಣದಲ್ಲೂ ಧ್ವಜಾರೋಹಣ ನಡೆಯಿತು. ವಿವಿಧ ಕಾರ್ಯಕ್ರಮಗಳಲ್ಲಿ ಗ್ರಾಮಸ್ಥರು, ಗಣ್ಯರು, ಅಧಿಕಾರಿಗಳು, ಶಿಕ್ಷಕರು, ಕಾರ್ಮಿಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಜೈ ಬಬಲಾದಿ ಫ್ರೆಂಡ್ಸ್‌ ಕ್ರಿಕೆಟ್ ಕ್ಲಬ್ ವತಿಯಿಂದ ನೋಟ್ಬುಕ್ ಹಾಗೂ ಪೆನ್ ವಿತರಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನದಿಂದ ದೊರೆತ ಸ್ವಾತಂತ್ರ್ಯದ ಮೌಲ್ಯವನ್ನು ಗೌರವಿಸಿ, ದೇಶದ ಏಕತೆ, ಶಾಂತಿ ಹಾಗೂ ಪ್ರಗತಿಗಾಗಿ ಎಲ್ಲರೂ ಶ್ರಮಿಸಬೇಕು ಎಂಬ ಸಂದೇಶ ಕಾರ್ಯಕ್ರಮಗಳಲ್ಲಿ ಮೂಡಿಬಂತು.