ಬೆಂಗಳೂರು, ಅ 11: ರಾಜ್ಯ ಸರ್ಕಾರ ತನ್ನ ಹೊಣೆಗೇಡಿ ಮತ್ತು ಅವಿವೇಕತನದ ಕ್ರಮದಿಂದ ರಾಜ್ಯದ ರೈತರಿಗೆ ಐದು ಸಾವಿರ ಕೋಟಿ ರೂ ಗಳಷ್ಟು ನಷ್ಟವಾಗಿದೆ ಎಂದು ಕಾಂಗ್ರೆಸ್ ಶಾಸಕ ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿಂದು ಆಕ್ರೋಶ, ಅಸಮಾಧಾನ ಹೊರಹಾಕಿದರು.
ಅತಿವೃಷ್ಟಿ ಕುರಿತ ಚರ್ಚೆಯಲ್ಲಿ ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡುವಾಗ ಮಧ್ಯಪ್ರವೇಶ ಮಾಡಿ ಮಾತನಾಡಿದ ಅವರು, ಭೀಕರ ಪ್ರವಾಹ ತಲೆದೋರಿದ ಸನ್ನಿವೇಶದಲ್ಲಿ ರಾಜ್ಯ ಸಕರ್ಾರ 15 ದಿನಗಳೊಳಗೆ ಪ್ರವಾಹ ಪರಿಸ್ಥಿತಿಯ ಬಗ್ಗೆ ಅಧಿಸೂಚನೆ ಪ್ರಕಟ ಮಾಡಿದ್ದರೆ, ರಾಜ್ಯದ 25 ಲಕ್ಷ ರೈತರಿಗೆ ಕೇವಲ 15 - 20 ದಿನಗಳ ಅವಧಿಯಲ್ಲಿ ಸುಮಾರು 4 - 5 ಸಾವಿರ ಕೋಟಿ ರೂ ಪರಿಹಾರ ದೊರಕುತ್ತಿತ್ತು ಎಂದರು.
ಆದರೆ ರಾಜ್ಯ ಸರ್ಕಾರ ಈ ಕೆಲಸ ಮಾಡದೇ ತಾನೂ ರೈತರಿಗೆ ಪರಿಹಾರ ಕೊಡದೇ, ರೈತರು ಕಡುಕಷ್ಟದಲ್ಲಿ ನರಳುವಂತೆ ಮಾಡಿದೆ. ಒಂದು ಕಡೆ ಕೇಂದ್ರ ಸರ್ಕಾರವೂ ರೈತರ ನೆರವಿಗೆ ಬರುತ್ತಿಲ್ಲ. ರಾಜ್ಯ ಸರ್ಕಾರವೂ ಸಹ ಒಂದು ರೂಪಾಯಿ ಕೊಡುತ್ತಿಲ್ಲ. ವಿಮಾ ಕಂಪೆನಿಗಳು ರೈತರಿಗೆ ಕೇವಲ 15 ದಿನದಲ್ಲಿ ಕಡ್ಡಾಯವಾಗಿ ಹಣ ಪಾವತಿ ಮಾಡುವಂತಹ ಅವಕಾಶವನ್ನೂ ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ. ಇದು ರಾಜ್ಯ ಸರ್ಕಾರದ ಮೂರ್ಖತನದ ಪರಮಾವಧಿ ಎಂದರು.
ಇದರ ಪರಿಣಾಮವಾಗಿ ರೈತರು ಕಡುಕಷ್ಟದಲ್ಲೇ ಜೀವನ ಮಾಡುತ್ತಿದ್ದಾರೆ. ಆದರೆ ಯಾವುದೇ ರೀತಿಯಿಂದಲೂ ಕಷ್ಟಪಡದೇ ಇರುವ ವಿಮಾ ಕಂಪೆನಿಗಳಿಗೆ ಇದರಿಂದ ಸುಮಾರು 12 ಸಾವಿರ ಕೋಟಿ ರೂ ಲಾಭವಾಗಿದೆ. ಈಗಲಾದರೂ ಸರ್ಕಾರ ರಾಜ್ಯದ ರೈತರಿಗೆ ಬೆಳೆ ಪರಿಹಾರ ಕೊಡಿಸಲು ಮುಂದಾಗಬೇಕು ಎಂದು ಸಲಹೆ ಮಾಡಿದರು.
ಈ ಸನ್ನಿವೇಶದಲ್ಲೂ ಸಹ ಕಾಂಗ್ರೆಸ್ - ಜೆಡಿಎಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.