ಶಾಲಾ ವಿದ್ಯಾರ್ಥಿಗಳಿಗೆ ಬಾಯಿ ಆರೋಗ್ಯದ ಕುರಿತು ಜಾಗೃತಿ

ಶಾಲಾ ವಿದ್ಯಾರ್ಥಿಗಳಿಗೆ ಬಾಯಿ ಆರೋಗ್ಯದ ಕುರಿತು ಜಾಗೃತಿ  Creating awareness about oral health among school students

ಬಳ್ಳಾರಿ 14 : ವಿಶ್ವ ಬಾಯಿ ಆರೋಗ್ಯ ಸ್ವಚ್ಛತಾ ದಿನದ ಅಂಗವಾಗಿ ಬಳ್ಳಾರಿ ಪಶ್ಚಿಮ ವಲಯದ ಬೊಬ್ರಕುಂಟಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಓರಲ್ ರೋಗಗಳು ಮತ್ತು ಬಾಯಿಯ ಆರೋಗ್ಯ ನಿರ್ವಹಣೆ’ ಕುರಿತು ಜಾಗೃತಿ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಗಿತ್ತು.  

ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಬಾಯಿಯ ನೈರ್ಮಲ್ಯ ಹಾಗೂ ಓರಲ್ ಆರೋಗ್ಯದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ನಡೆದ ಕಾರ್ಯಕ್ರಮದಲ್ಲಿ ಸುಮಾರು 90 ವಿದ್ಯಾರ್ಥಿಗಳು ಹಾಗೂ 10ಕ್ಕೂ ಹೆಚ್ಚು ಶಿಕ್ಷಕರು ಸಕ್ರಿಯವಾಗಿ ಭಾಗವಹಿಸಿದರು.  

ಬಳ್ಳಾರಿಯ ಬಿಎಂಸಿಆರ್ಸಿ ಸಂಸ್ಥೆಯ ಸರ್ಕಾರಿ ದಂತ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಪೆರಿಯೊಡಾಂಟಿಕ್ಸ್‌ ವಿಭಾಗದ ವೈದ್ಯರ ತಂಡವು ಬಾಯಿಯ ನೈರ್ಮಲ್ಯ ಕಾಪಾಡಿಕೊಳ್ಳುವ ಸೂಕ್ತ ವಿಧಾನಗಳು, ಓರಲ್ ರೋಗಗಳಿಂದ ಉಂಟಾಗಬಹುದಾದ ತೊಂದರೆಗಳು ಹಾಗೂ ಅವುಗಳ ತಡೆಗಟ್ಟುವ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿತು.  

ಕಾರ್ಯಕ್ರಮದಲ್ಲಿ ಪೆರಿಯೊಡಾಂಟಿಕ್ಸ್‌ ವಿಭಾಗದ ಮುಖ್ಯಸ್ಥೆ ಹಾಗೂ ಪ್ರಾಧ್ಯಾಪಕಿ ಡಾ. ಭಾರತಿ ಎಸ್‌.ಎಚ್‌., ಸಹಾಯಕ ಪ್ರಾಧ್ಯಾಪಕರಾದ ಡಾ. ರಾಧಿಕಾ ಕೆ.ಬಿ. ಹಾಗೂ ಡಾ. ಶ್ವೇತಾ ವಿ. ಜಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.  

ಹೈಜಿನಿಸ್ಟ್‌ ದೀಪಾ ಹಾಗೂ ಇಂಟರ್ನ್ಗಳಾದ ದೇವಿಕಾ, ಜ್ಯೋತಿ ಮತ್ತು ಅಂಜಲಿಪ್ರಿಯಾ ಅವರು ಬ್ರಶಿಂಗ್ ತಂತ್ರಗಳು ಹಾಗೂ ಪ್ರತಿದಿನದ ಬಾಯಿ ಆರೈಕೆಯ ಕುರಿತು ಪ್ರಾಯೋಗಿಕ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.