ಖಾದಿ, ಗ್ರಾಮೋದ್ಯೋಗದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ

ಖಾದಿ, ಗ್ರಾಮೋದ್ಯೋಗದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ  Create awareness among students about Khadi and village industries


 ಹೂವಿನಹಡಗಲಿ, ಸೆ.18: ಖಾದಿ, ಗ್ರಾಮೋದ್ಯೋಗ ಹಾಗೂ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಖಾದಿ ಆಧಾರಿತ ಸಮವಸ್ತ್ರಗಳನ್ನು ವಿತರಿಸುವ ಮೂಲಕ ಖಾದಿ, ಗ್ರಾಮೋದ್ಯೋಗ ಮತ್ತು ಸ್ವದೇಶಿ ಉತ್ಪನ್ನಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದು ಪತ್ರಕರ್ತ ಎಂ. ದಯಾನಂದ ಪಟ್ಟರ್ ಹೇಳಿದರು.  

ತಾಲೂಕಿನ ಅಡವಿಮಲ್ಲನಕೇರಿ ಗ್ರಾಮದ ಎಂ.ಪಿ.ಎಂ. ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಎಂ.ಎಂ. ಪಾಟೀಲ್, ಎಂ.ಪಿ. ಪ್ರಕಾಶ್ ಹಾಗೂ ಎ.ಎಂ. ಹೊಳಲಯ್ಯ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಖಾದಿ ಗ್ರಾಮೋದ್ಯೋಗ’ ಹಾಗೂ ‘ಎಂ.ಪಿ. ಪ್ರಕಾಶ್ ವಿಷಯಗಳ ಕುರಿತು ಅವರು ಮಾತನಾಡಿದರು.  

ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಖಾದಿ ಮತ್ತು ಗ್ರಾಮೋದ್ಯೋಗಗಳು ಉದ್ಯೋಗ ಹಾಗೂ ಆರ್ಥಿಕ ಸ್ವಾವಲಂಬನೆಗೆ ಆಧಾರವಾಗಿವೆ. ಇವುಗಳನ್ನು ಉತ್ತೇಜಿಸುವ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಬಹುದು ಎಂದು ಹೇಳಿದರು.  

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಶಿಕ್ಷಕ ದಾವಲ್ಸಾಹೇಬ್ ನೀಲಗುಂದ, ವಿದ್ಯಾರ್ಥಿಗಳು ಸ್ವದೇಶಿ ಉತ್ಪನ್ನ, ಸಾಹಿತ್ಯ, ಪರಿಸರ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಪ್ರೇರಣೆಯಾಗುತ್ತವೆ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಕಸಾಪ ಅಧ್ಯಕ್ಷ ಎಚ್‌.ಜಿ. ಪಾಟೀಲ್ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಟಿ.ಎಂ. ನಾಗಭೂಷಣ, ಎಸ್ಡಿಎಂಸಿ ಅಧ್ಯಕ್ಷ ಗಂಗಣ್ಣ ಹುರುಳಿಹಾಳ, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  

ಕುಮಾರಿ ಭೂಮಿಕಾ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಕೆ.ಎಂ. ಸಿದ್ದೇಶ್ವರಯ್ಯ ಸ್ವಾಗತಿಸಿದರು. ಕನ್ನಡ ಶಿಕ್ಷಕಿ ಮಮ್ತಾಜ್ ಬೇಗಂ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ವಿಜಯಕುಮಾರ, ಮಲ್ಲಿಕಾರ್ಜುನ ಹಾಗೂ ವರ್ಷಿಣಿ ಕವನ ವಾಚಿಸಿದರು. ದೈಹಿಕ ಶಿಕ್ಷಕ ರಾಮಪ್ಪ ವಂದಿಸಿದರು. ಕಸಾಪ ಗೌರವ ಕಾರ್ಯದರ್ಶಿ ಎ.ಎಂ. ಚನ್ನವೀರಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.