ಕೊವಿಡ್ ಸೋಂಕಿತರ ನಿಯಂತ್ರಣದಲ್ಲಿ ಜಿಲ್ಲೆಯ ಕ್ರಮ ರಾಜ್ಯಕ್ಕೆ ಮಾದರಿ: ಜಿಲ್ಲಾಧಿಕಾರಿ
ಕಾರವಾರ: ಆಗಸ್ಟ, ೧೮; ಕೊವಿಡ್ ಸೋಂಕಿತರ ನಿಯಂತ್ರಣದಲ್ಲಿ ಜಿಲ್ಲೆಯ ಕ್ರಮ ರಾಜ್ಯಕ್ಕೆ ಮಾದರಿ ಎಂದೂ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಹೇಳಿದರು.
ಕೊವಿಡ್ ಸ್ಥಿತಿಗತಿ ಬಗ್ಗೆ ಜಿಲ್ಲಾಡಳಿತ ಸಮಗ್ರ ಮಾಹಿತಿಯನ್ನು ಮಾಧ್ಯಮಗಳಿಗೆ ಅವರು ಮಂಗಳವಾರ ಬಿಡುಗಡೆ ಮಾಡಿದ್ದಾರೆ.
ಕಳೆದ ತಿಂಗಳುಗಳಿಂದ ಇಡೀ ವಿಶ್ವ ಕೊವಿಡ್-19 ಮಹಾ ಮಾರಿಯ ವಿರುದ್ದ ಹೊರಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆ ಕೂಡಾ ಈ ಮಹಾ ಮಾರಿಯ ವಿರುದ್ದ ನಿರಂತರ ಹೋರಾಟ ನಡೆಸುತ್ತಿದ್ದು, ಜಿಲ್ಲೆಯ ಪ್ರಜ್ಞಾವಂತ ನಾಗರೀಕರು ಲಾಕ್ ಡೌನ್ ನಿಯಮಗಳನ್ನು ಹಾಗೂ ಅನ್ ಲಾಕ್ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿರುವದರಿಂದ , ಜಿಲ್ಲೆಯಲ್ಲಿ ಸೋಂಕು ವ್ಯಾಪಿಸುವದನ್ನು ಬಹುತೇಕ ನಿಯಂತ್ರಣ ಸಾಧಿಸುವಲ್ಲಿ ಯಶಸ್ಸು ಕಾಣುತ್ತಿದೆ. ಜಿಲ್ಲಾಡಳಿತವು ಪ್ರಮುಖವಾಗಿ ಕೊವಿಡ್-19 ಸಮುದಾಯಕ್ಕೆ ಹರಡದಂತೆ ನೋಡಿಕೊಳ್ಳಲಾಗಿದೆ. ಹಾಗೂ ಸೋಂಕಿತರ ಮರಣ ಸಂಭವಿಸದಂತೆ ಚಿಕಿತ್ಸೆ ನೀಡುವ ಬಗ್ಗೆ ಹೆಚ್ಚಿನ ಗಮನವನ್ನು ನೀಡಿದ್ದೇವೆ. ನಿರಂತರವಾಗಿ ಸೋಂಕು ಪತ್ತೆ ಪರೀಕ್ಷೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸುತ್ತಿದ್ದು, ರಾಜ್ಯದಲ್ಲೇ ಅತ್ಯಂತ ಕಡಿಮೆ ಅಂದರೆ ಸರಿ ಸುಮಾರು 5.6% ರಷ್ಟು ಸೋಂಕು ಪತ್ತೆಯಾಗುತ್ತಿದೆ. ಇದುವರೆಗೂ ಜಿಲ್ಲೆಯಲ್ಲಿ ಒಟ್ಟೂ 46406 ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದ್ದು, ಕೇವಲ 3368 ಪಾಸಿಟೀವ್ ಪ್ರಕರಣಗಳು ಪತ್ತೆಯಾಗಿರುತ್ತದೆ. ಈ ಪೈಕಿ 2420 ಜನರು ಸಂಪೂರ್ಣ ಗುಣಮುಖರಾಗಿದ್ದು, ಕೇವಲ 33 ಜನ ಕೊವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇತರೇ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಯು ಕೊವಿಡ್-19 ಸೋಂಕನ್ನು ಸಮರ್ಥವಾಗಿ ನಿಭಾಯಿಸಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್.ಕೆ ರವರು ತಿಳಿಸಿದರು.
ಈ ಯಶಸ್ಸಿಗೆ ಕಾರಣೀಕರ್ತರಾದ ಜಿಲ್ಲೆಯ ಜನರನ್ನು ಅವರು ಅಭಿನಂದಿಸಿದ್ದಾರೆ.
ಜನ ಪ್ರತಿನಿಧಿಗಳಿಗೆ , ಕರೋನಾ ವಾರಿಯರ್ಸ ಗಳಾಗಿ ಕಾರ್ಯ ನಿರ್ವಹಿಸಿದ ವೈದ್ಯರು, ದಾದಿಯರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿ , ಸಿಬ್ಬಂದಿಗಳು ಮತ್ತು ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಪಂಚಾಯತರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ನಗರಸ್ಥಳಿಯ ಸಂಸ್ಥೆಗಳ ಅಧಿಕಾರಿ , ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಮಾಧ್ಯಮಗಳು ಕೂಡಾ ಹಗಳಿರುಳೆನ್ನದೆ ಕೊವಿಡ್ ಗೆ ಸಂಬಂದಿಸಿದಂತೆ ಮಾಹಿತಿಯನ್ನು ಸಂಗ್ರಹಿಸಿ ಜಿಲ್ಲೆಯ ಜನರಿಗೆ ತಲುಪಿಸಿವೆ. ಹಾಗೂ ಜನರಲ್ಲಿ ಜಾಗೃತಿಯನ್ನು ಮೂಡಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದ್ದು, ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳು ಕರೋನಾ ವಾರಿಯರ್ಸಗಳಂತೆ ಜಿಲ್ಲಾಡಳಿತದೊಂದಿಗೆ ಕೈಜೊಡಿಸಿ ಕೆಲಸ ನಿರ್ವಹಿಸಿದ್ದು ಅವರಗೂ ಕೂಡಾ ಧನ್ಯವಾದಗಳನ್ನು ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣದಲ್ಲಿದೆಯೆಂದು ನಾವು ಈ ಹಂತದಲ್ಲಿ ಮೈಮರೆಯುವ ಹಾಗಿಲ್ಲ. ಕೊವಿಡ್-19 ಇದು ಬಹುಬೇಗ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವದರಿಂದ ಇದರ ನಿಯಂತ್ರಣ ಸಾರ್ವಜನಿಕರ ಸಹಕಾರವಿಲ್ಲದೇ ಸಾಧ್ಯವಾಗುವದಿಲ್ಲ. ಮುಂದಿನ ದಿನಗಳಲ್ಲಿ ಗಣೇಶ ಚತುರ್ಥಿ ಹಾಗೂ ಇತರೇ ಸಾಲು ಸಾಲು ಹಬ್ಬಗಳು ಬಂದಿವೆ. ಜಿಲ್ಲೆಯ ನಾಗರೀಕರು ಈ ಹಿಂದಿನಂತೆಯೇ ಸಮಾಜಿಕ ಅಂತರ , ವೈಯುಕ್ತಿಕ ಸ್ವಚ್ಚತೆ ಹಾಗೂ ಉತ್ತಮ ಆರೋಗ್ಯವನ್ನು ಕಾಯ್ದುಕೊಂಡು, ಕೊವಿಡ್-19 ಅನ್ ಲಾಕ್ ಮಾರ್ಗಸೂಚಿಯ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಉತ್ತರ ಕನ್ನಡ ಜಿಲ್ಲೆಯನ್ನು ಕರೋನಾ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.