ಕೋವಿಡ್-೧೯ ಎರಡನೇ ಅಲೆಯ ಬಗ್ಗೆ ರಾಜ್ಯದ ಜನರು ಜಾಗೃತರಾಗಿರಬೇಕು - ಸಚಿವ ಸುಧಾಕರ್
ಕಾರವಾರ ಮಾ. ೧: ಕೋವಿಡ್-೧೯ ೨ನೇ ಅಲೆ ಹೆಚ್ಚಾಗಿ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಮಾಡುವಂತ ಪರಿಸ್ಥಿತಿ ಸೃಷ್ಟಯಾಗಿಲ್ಲ. ಹೀಗಾಗಿ ಪ್ರತಿಯೊಬ್ಬ ನಾಗರಿಕರೂ ಕೋವಿಡ್-೧೯ ೨ನೇ ಅಲೆ ಬಗ್ಗೆ ಜಾಗೃತರಾಗಿರಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ. ಕೆ. ಸುಧಾಕರ ಅವರು ಹೇಳಿದರು.
ಶಿರಸಿಯ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ *೪೫ ರಿಂದ ೫೯ ವಯೋಮಾನದ Co-Morbidity ಇರುವ ನಾಗರಿಕರಿಗೆ ಹಾಗೂ ೬೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆಯೋಜಿಸಿರುವ ಕೋವಿಡ್-೧೯ ರಾಜ್ಯ ಮಟ್ಟದ ಲಸಿಕಾ* ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಈಗಾಗಲೇ ಮೂರನೇ ಹಂತದ ಲಸಿಕೆ ನೀಡಲು ಚಾಲನೆ ನೀಡಲಾಗಿದೆ. ಲಸಿಕೆ ಪಡಿಯಲು 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ 45 ವರ್ಷ ಮೇಲ್ಪಟ್ಟ ಜನರು ಸ್ವಯಂ ಪ್ರೇರಿತರಾಗಿ ಬರುತ್ತಿದ್ದಾರೆ. ಇದಕ್ಕಾಗಿ 270ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ.50 ಲಕ್ಷ ಜನರು ಹಿರಿಯ ನಾಗರೀಕರಿದ್ದು, 16 ಲಕ್ಷ ಜನರು ಇತರ ರೋಗದ ಸಮಸ್ಯೆಯಿರುವವರು ಇದ್ದಾರೆ ಎಂದರು.
ಏಮ್ಸ್ ಸಂಸ್ಥೆಗೆ ಸೋಮವಾರ ಭೇಟಿ ನೀಡಿದ ಪ್ರಧಾನಿ ಅವರೇ ಖುದ್ದಾಗಿ ಲಸಿಕೆ ತೆಗೆದುಕೊಂಡಿದ್ದು, ದೇಶದ ಜನರಿಗೆ ಪ್ರೇರಣೆಯಾಗಿದ್ದಾರೆ. ಜೊತೆಗೆ ರಾಜ್ಯದ ಮುಖ್ಯಮಂತ್ರಿಗಳು ಕೂಡಾ ಎರಡು ಹಂತದ ಲಸಿಕೆ ವಿತರಣೆಗೆ ಚಾಲನೆ ನೀಡಿದ್ದಾರೆ ಎಂದರು.
ಲಸಿಕೆ ವಿತರಣೆ ಹಾಗೂ ತೆಗೆದುಕೊಳ್ಳುವ ಹಂತದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲ. ಜನರು ಆನ್‌ಲೈನ್ ಮೂಲಕ ಹೆಸರು ದಾಖಲು ಮಾಡಿಕೊಳ್ಳಬಹುದು. ಅನಕ್ಷರಸ್ಥರು ಸಹ ನೇರವಾಗಿ ಹತ್ತಿರದ ಪ್ರಾಥಮಿಕ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ಪಡೆಯಬಹುದು. ಸೋಂಕು ಇರೋ ರಾಜ್ಯದಿಂದ ಬರುವವರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಂಡು ಬರಲು ಸೂಚಿಸಲಾಗಿದೆ. ಹೀಗಾಗಿ ರಾಜ್ಯದಲ್ಲಿ ಲಾಕ್ ಡೌನ್ ಆಗೋ ಸ್ಥಿತಿ ಇನ್ನೂ ಬಂದಿಲ್ಲ. ಜನರು ಜವಾಬ್ದಾರಿಯುತವಾಗಿ ಈ ಸ್ಥಿತಿ ಬರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ್, ತಾಲ್ಲೂಕು ಪಂಚಾಯತ ಅಧ್ಯಕ್ಷೆ ಲಲಿತಾ ತಾಳೇರಮನೆ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಬೆಳಗಾವಿ ವಿಭಾಗೀಯ ನಿರ್ದೇಶಕ ಡಾ. ವಿಜಯಕುಮಾರ್ ಬಿರಾದಾರ, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ., ಜಿಲ್ಲಾ ಪಂಚಾಯತ್ ಸಿಇಒ ಪ್ರಿಯಾಂಗಾ ಎಂ., ಶಿರಸಿ ಎಸಿ ಆಕೃತಿ ಬನ್ಸಾಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರದ್ ನಾಯಕ, ಶಿರಸಿ ತಾಲೂಕಾ ಆರೋಗ್ಯಾಧಿಕಾರಿ ಡಾ. ವಿನಾಯಕ ಭಟ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.