ಕೋವಿದ್ - 19; ಅರ್ಜೆಂಟೈನಾದಲ್ಲಿ ಮಾರ್ಚ್ 31ರ ವರೆಗೆ ನಾಗರಿಕರ ಮೇಲೆ ಕಡ್ಡಾಯ ನಿರ್ಬಂಧ

ಐರಿಸ್, ಮಾರ್ಚ್ 20, ಕೋವಿದ್-19ರ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರವಹಿಸಲು ಮಾರ್ಚ್ 31ರ ವರೆಗೆ ಅರ್ಜೆಂಟೀನಾದ ಅಧಿಕಾರಿಗಳು ದೇಶದ ಎಲ್ಲಾ ನಾಗರಿಕರ ಮೇಲೆ ಕಡ್ಡಾಯ ನಿರ್ಬಂಧವನ್ನು ವಿಧಿಸಿದ್ದಾರೆ ಎಂದು ಅಧ್ಯಕ್ಷ ಆಲ್ಬರ್ಟೊ ಫರ್ನಾಂಡೀಸ್ ಹೇಳಿದ್ದಾರೆ.ಅಲ್ಲಿನ ನಾಗರೀಕರೆಲ್ಲರೂ ಮಹಾಮಾರಿ ತಡೆಗಟ್ಟುವ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಯಾರೂ ಗುಂಪುಕಟ್ಟದಂತೆ  ಆದಷ್ಟು ಪ್ರತ್ಯೇಕವಾಗಿರುವಂತೆ ಕಳೆದ ರಾತ್ರಿಯಿಂದಲೇ ನಿರ್ಬಂಧ ಹೇರಲಾಗಿದೆ. ಯಾರೂ ಮನೆಯಿಂದ ಹೊರ ಹೋಗದಂತೆಯೂ ಸೂಚಿಸಲಾಗಿದೆ. ಈ ಕ್ರಮವು ಮಾರ್ಚ್ 31ರ ವರೆಗೆ ಇರುತ್ತದೆ ಎಂದು ಅಧ್ಯಕ್ಷರು ಗುರುವಾರ ತಡರಾತ್ರಿ ಹೇಳಿದರು.ಫರ್ನಾಂಡೀಸ್ ಪ್ರಕಾರ, ಅರ್ಜೆಂಟೀನಾದ ನಾಗರಿಕರಿಗೆ ಅಂಗಡಿಗಳು ಮತ್ತು ಔಷಧಾಲಯಗಳಿಗೆ ಭೇಟಿ ಮಾಡಲು ಅವಕಾಶವಿರುತ್ತದೆ. ಸೋಂಕು ಹರಡುವ ಹಿನ್ನೆಲೆಯಲ್ಲಿ ಯಾರೂ ಅನಗತ್ಯವಾಗಿ ಹೊರಗೆ ಸುತ್ತಾಡದಂತೆ ಸೂಚಿಸಲಾಗಿದೆ. ಅರ್ಜೆಂಟೀನಾದಲ್ಲಿ 97 ಸೋಂಕಿನ ಪ್ರಕರಣಗಳು ದೃಢಪಟ್ಟಿದ್ದು, ಮೂರು ಜನ ಮರಣ ಹೊಂದಿದ್ದಾರೆ.  ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೋವಿದ್-19 ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿತು. ವಿಶ್ವದಾದ್ಯಂತ 243,000 ಕ್ಕೂ ಹೆಚ್ಚು ಜನರು ಕರೋನವೈರಸ್ ಸೋಂಕಿಗೆ ಒಳಗಾಗಿದ್ದಾರೆ ಮತ್ತು 9,800 ಕ್ಕೂ ಹೆಚ್ಚು ಸಾವುನೋವುಗಳು ಸಂಭವಿಸಿವೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.