ನೀಲಣ್ಣವರ್ 10 ದಿನ ಸಿಐಡಿ ವಶಕ್ಕೆ ನೀಡಿದ ನ್ಯಾಯಾಲಯ

ನೀಲಣ್ಣವರ್ 10 ದಿನ ಸಿಐಡಿ ವಶಕ್ಕೆ ನೀಡಿದ ನ್ಯಾಯಾಲಯ Court remands Nilannavar to CID custody for 10 days

ಲೋಕದರ್ಶನ ವರದಿ 

ಬೆಳಗಾವಿ 18: ಶಿವಂ ಅಸೋಸಿಯೇಟ್‌ನಲ್ಲಿ ನಡೆದಿರುವ ಬಹುಕೋಟಿ ಹಣದ ದುರಪಯೋಗ ಪ್ರಕರಣವು ಸೋಮವಾರ ನ್ಯಾಯಾಲಯದ ಮುಂದೆ ಬಂದಿದೆ. ಕಳೆದ 5 ದಿನಗಳಿಂದ ವಿಚಾರಣೆ ನಡೆಸುತ್ತಿರುವ ಪೊಲೀಸರು, ಸೋಮವಾರ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಮಾಡಿದರು, ಬಳಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆದು 10 ದಿನಗಳ ವರೆಗೆ ಶಿವಾನಂದ ನೀಲಣ್ಣವರ ಅವರನ್ನು ಸಿಐಡಿ ವಶಕ್ಕೆ ನೀಡಲಾಗಿದೆ. ಇನ್ನೂ ಸಿಐಡಿ ಅಧಿಕಾರಿಗಳು ಎರಡು ದಿನ ಬೆಳಗಾವಿಯಲ್ಲಿ ವಿಚಾರಣೆ ನಡೆಸಿ ಬಳಿಕ ಬೆಂಗಳೂರಿಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ.  

ಬಂಧಿತ ಶಿವಾನಂದ ನೀಲಣ್ಣವರನನ್ನು ಕಳೆದ ಮೂರು ದಿನಗಳಿಂದ ಮಾಳಮಾರುತಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು. ಸೋಮವಾರ ಶಿವಾನಂದ ನೀಲಣ್ಣವರ ಅವರನ್ನು ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡೆಸಿದರು. ಈ ಪ್ರಕರಣದ ಸಂಬಂಧ ರವಿವಾರ ಸಿಐಡಿ ಎಂಟ್ರಿಯಾಗಿದೆ. ಸಿಐಡಿ ಡಿಜಿಪಿ ಭೀಮಾಶಂಕರ ಗುಳೇದ್ ಅವರು ರವಿವಾರ ಠಾಣೆಗೆ ಭೇಟಿ ನೀಡಿ, ಆರೋಪಿಯಿಂದ ಕೆಲ ಮಾಹಿತಿಯನ್ನು ಪಡೆದರು. ಸೋಮವಾರ ಬೆಳಗ್ಗೆ ಪೊಲೀಸರು ಆರೋಪಿಯನ್ನು 2ನೇ ಜಿಲ್ಲಾ ಸತ್ರ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು. ಈ ವೇಳೆಯಲ್ಲಿ 10 ದಿನ ವಿಚಾರಣೆಗೆ ನೀಲಣ್ಣವರ ಅವರನ್ನು ಪೊಲೀಸರು ಕೇಳಿದರು. ಇದಕ್ಕೆ ನ್ಯಾಯಾಧೀಶರಾದ ಗಂಗಾಧರ ಕೆ ಎನ್ ಅವರು ಒಪ್ಪಿಗೆ ನೀಡಿ, ಸಿಐಡಿಗೆ ವಶಕ್ಕೆ ನೀಡಿದ್ದಾರೆ.  

ಈ ವೇಳೆಯಲ್ಲಿ ನ್ಯಾಯಾಧೀಶರ ಮುಂದೆ ನೀಲಣ್ಣವರ್ 35 ಸಾವಿರ ಜನರು ಹಣ ಬೇಕಿಲ್ಲ ನಾನು ಬೇಕು ಎನ್ನುತ್ತಿದ್ದಾರೆ ಎಂದು ಶಿವಾನಂದ ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಧೀಶರು ಅಮಾಯಕರಿಗೆ ಅನ್ಯಾಯ ಆಗಬಾರದು. ಸರ್ಕಾರ ಜನರ ತಂದೆ, ತಾಯಿ ಇದ್ದಂತೆ, ಅವರ ರಕ್ಷಣೆಯೂ ಮುಖ್ಯ. ನೀವು ಜನರಿಗೆ ಬೇಕಾಗಿರಬಹುದು, ಒಳ್ಳೆಯದು ಮಾಡಿರಬಹುದು ನನಗೆ ಗೊತ್ತಿಲ್ಲ. ಈ ಹಿಂದೆ ಜನರಿಗೆ ಸಾಕಷ್ಟು ಮೋಸಗಳು ಆಗಿವೆ. ಈ ಆಧಾರದ ಮೇಲೆ ಸರ್ಕಾರ ಕಾನೂನು ರೂಪಿಸಿದೆ. ಕಾನೂನಿನ ಪ್ರಕಾರ ನೀವು ಇದ್ದರೆ ಉಳುತ್ತಿರೀ. ಧರ್ಮೋ ರಕ್ಷತಿ ರಕ್ಷಿತಃ ಎಂದು ನ್ಯಾಯಾದೀಶರು ಅಭಿಪ್ರಾಯ ಪಟ್ಟರು.  

ಶಿವಾನಂದ ನೀಲಣ್ಣವರ್‌ನನ್ನು ಹತ್ತು ದಿನ ವಶಕ್ಕೆ ಪಡೆದಿರೋ ಸಿಐಡಿ ಮತ್ತಷ್ಟು ತನಿಖೆಯನ್ನು ಚುರುಕುಗೊಳಿಸಿದೆ. ಎರಡು ದಿನ ಬೆಳಗಾವಿಯಲ್ಲಿಯೇ ವಿಚಾರಣೆ ಮಾಡುವ ಸಾಧ್ಯತೆ ಇದೆ. ಬಳಿಕ ಬೆಂಗಳೂರಿಗೆ ಕರೆದುಕೊಂಡು ಹೋಗಿ ತನಿಖೆ ನಡೆಸಲಿದ್ದಾರೆ. ಇನ್ನೂ 35 ಸಾವಿರ ಹೂಡಿಕೆದಾರರ ಸಂಬಂಧ ಪಟ್ಟ ಹಲವು ಮಾಹಿತಿಗಳನ್ನು ಈಗಾಗಲೇ ಪೊಲೀಸರು ಸಂಗ್ರಹಿಸಿದ್ದು, ಎಲ್ಲಾ ಮಾಹಿತಿ ಈಗ ಸಿಐಡಿಗೆ ಹಸ್ತಾಂತರ ಮಾಡಲಾಗುವುದು.  

ಇನ್ನೂ ಸೋಮವಾರ ಬೆಳಗಾವಿ 2ನೇ ಹೆಚ್ಚುವರಿ ಸತ್ರ ನ್ಯಾಯಾಲಯ ಶಿವಾನಂದನನ್ನು ಹತ್ತು ದಿನ ಸಿಐಡಿ ವಶಕ್ಕೆ ನೀಡಿದ ಬಗ್ಗೆ ಶಿವಾನಂದ ಪರ ನ್ಯಾಯವಾದಿಗಳು ಮಾದ್ಯಮಗಳ ಜೊತೆಗೆ ಮಾತನಾಡಿ, ಪ್ರಕರಣದಲ್ಲಿ 35 ಸಾವಿರ ಜನ ಠೇವಣಿದಾರರು ಇದ್ದಾರೆ, ಕಾಗದದಲ್ಲಿ ಎಲ್ಲಿಯೂ ಹೆಚ್ಚಿನ ಬಡ್ಡಿ ಎಂದು ಉಲ್ಲೇಖ ಮಾಡಿಲ್ಲ. ಶೀಘ್ರದಲ್ಲಿಯೇ ಜಾಮಿನಿಗೆ ಅರ್ಜಿ ಹಾಕುತ್ತೇವೆ. ಆರ್‌ಬಿಐ ರೂಲ್ಸ್‌ ಪಾಲನೆಯಾಗಿಲ್ಲ ಎನ್ನುವುದು ಪೊಲೀಸರ ವಾದ. ಆದರೇ ಯಾರೊಬ್ಬರು ದೂರು ಕೊಟ್ಟಿಲ್ಲ ಎಂದರು  

ಹತ್ತು ದಿನ ಸಿಐಡಿ ವಶಕ್ಕೆ ನೀಡಿದ ಕೂಡಲೇ ನ್ಯಾಯಾಲಯದ ಆವರಣದಲ್ಲಿ ಸಹೋದರನ್ನು ನೋಡಿ ಶಿವಾನಂದ ನೀಲಣ್ಣವರ್ ಕಣ್ಣಿರು ಹಾಕಿದರು. ಬಹುಕೋಟಿ ರೂಪಾಯಿ ಹಣ ದುರುಪಯೋಗ ಆರೋಪ ಪ್ರಕರಣ, ಈಗ ಸಿಐಡಿ ತನಿಖೆಯನ್ನು ಆರಂಭಿಸಿದೆ. 35 ಸಾವಿರ ಜನರ ಮಾಹಿತಿ ಸಂಗ್ರಹ, ತನಿಖೆಯನ್ನು ನಡೆಸಲು ತಂಡ ಎಲ್ಲಾ ರೀತಿಯ ಸಿದ್ದತೆಯನ್ನು ಮಾಡಿಕೊಂಡಿದೆ. ಬೆಳಗಾವಿ ಬಳಿಕ ಇನ್ನೇರಡು ದಿನದಲ್ಲಿ ಬೆಂಗಳೂರಿಗೆ ತಂಡ ಹೋಗಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಿದೆ.