ಬೆಳಗಾವಿ 28 : ಜೀವನದ ಒಂದಿಲ್ಲೊಂದು ಹಂತದಲ್ಲಿ ಕಷ್ಟಗಳು ಬರುವುದು ಸಹಜ. ಆದರೆ ಭಗವಂತ ವ್ಯಕ್ತಿಗಳ ರೂಪದಲ್ಲಿ ಬಂದು ಆ ಕಷ್ಟಗಳನ್ನು ಪರಿಹರಿಸುತ್ತಾನೆ. ನಮ್ಮ ಶಕ್ತಿಯ ಅರಿವು ಸ್ವತಃ ನಮಗೆ ಮಾಡಿಸಲು ಭಗವಂತ ಕಷ್ಟ ನೀಡುತ್ತಾನೆ. ಕಷ್ಟಕ್ಕೆ ಹೆದರಿ ಧೃತಿಗೆಟ್ಟು ತಪ್ಪು ನಿರ್ಧಾರ ತೆಗೆದುಕೊಳ್ಳದೇ ಧೈರ್ಯದಿಂದ ಜೀವನ ಸಾಗಿಸಬೇಕು. ಏಕೆಂದರೆ ಧೈರ್ಯ ಮನುಷ್ಯನ ಸದ್ಗುಣಗಳ ರಕ್ಷಾ ಕವಚವಾಗಿದೆ ಎಂದು ಖ್ಯಾತ ಹಿನ್ನೆಲೆ ಗಾಯಕ ರಘು ದೀಕ್ಷಿತ್ ಅಭಿಪ್ರಾಯ ಪಟ್ಟರು.
ಗುರುವಾರ ಇಲ್ಲಿನ ಶಿವಬಸವ ನಗರದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ಹಾಗೂ ರಾಷ್ಟ್ರಮಟ್ಟದ ತಾಂತ್ರಿಕ ಉತ್ಸವ "ಬ್ಲಿಸ್ 2025"ರ ಅಂಗವಾಗಿ ಕಾಲೇಜಿನ ಮೈದಾನದಲ್ಲಿ ಆಯೋಜಿಸಿದ್ದ ನೇರ ಸಂಗೀತ ಸುಧೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ರಘು ದೀಕ್ಷಿತ್ ಸುಪ್ರಸಿದ್ಧ ಗೀತೆಗಳಾದ ಕಂಡೆ ಕಂಡೆ ಪರಶಿವನ ಸಂತ ಶಿಶುನಾಳ ಶರೀಫರು ರಚಿಸಿದ ಕೋಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ ಗುಡುಗುಡಿಯಾ ಸೇದಿ ನೋಡೊ ಮುಂತಾದ ಹಾಡುಗಳಿಗೆ ಜನ ಚಪ್ಪಾಳೆ ಶಿಳ್ಳೆ ಹೊಡೆಯುತ್ತಾ ಸಂಗೀತ ಆಸ್ವಾದಿಸಿದರು.
ರಘು ದೀಕ್ಷಿತ್ ಹಾಗು ತಂಡದವರ ವಯಲಿನ್ ಮತ್ತು ಗಿಟಾರ್‌ವಾದನದ ಜುಗಲ್ ಬಂದಿಗೆ ಹಾಗು "ಲೋಕದ ಚಿಂತೆ ಯಾತಕ ಮಾಡತಿ" ಹಾಡಿಗಂತೂ ಇಡೀ ಯುವಸಮುದಾಯ ಕುಣಿದು ಕುಪ್ಪಳಿಸಿದರು. ನಿನ್ನಾ ಪೂಜೆಗೆ ಬಂದೆ ಮಾದೇಶ್ವರ ಹಾಡನ್ನು ರಘು ದೀಕ್ಷಿತ್ ಧ್ವನಿಯಲ್ಲಿ ಕೇಳಿ ಜನ ಭಕ್ತಿ ಪರವಷರಾದರು. ರಘು ದೀಕ್ಷಿತ್ ಸನ್ಮಾನಿಸಿ ಮಾತನಾಡಿದ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಸಂಗೀತಕ್ಕೆ ಬುದ್ಧಿ ಶಕ್ತಿ ಉತ್ತೇಜಿಸುವ ಹಾಗೂ ಸೃಜನಶೀಲತೆಯನ್ನು ಬೆಳೆಸುವ ವಿಶಿಷ್ಟ ಗುಣವಿದೆ. ವ್ಯಕ್ತಿಯ ವ್ಯಕ್ತಿತ್ವ ವಿಕಾಸದಲ್ಲೂ ಸಂಗೀತ ಅಪಾರ ಪ್ರಭಾವ ಬೀರುತ್ತದೆ. ದೇಶಿ ಶೈಲಿಯ ಹಾಡುಗಳನ್ನು ವಿದೇಶಿ ಶೈಲಿಯಲ್ಲಿ ರಘು ದೀಕ್ಷಿತ್ ಕಂಠದಲ್ಲಿ ಕೇಳುವುದು ವಿಶಿಷ್ಟ ಅನುಭವ ಎಂದರು. ಕಾರ್ಯಕ್ರಮದಲ್ಲಿ ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು ತಾಂತ್ರಿಕ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಚೇರಮನ್ ಎಫ್. ವ್ಹಿ. ಮಾನ್ವಿ ಕಾಲೇಜಿನ ಪ್ರಾಚಾರ್ಯ ಡಾ. ಬಿ. ಆರ್. ಪಟಗುಂದಿ ಸೇರಿದಂತೆ ವಿವಿಧ ಗಣ್ಯರು ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.