ಟೋಕಿಯೊ, ಮಾ 27,ಟೋಕಿಯೊ
ನಗರದಲ್ಲಿ ಜು. 24ರಿಂದ ಚಾಲನೆ ಪಡೆಯಬೇಕಾಗಿದ್ದ ಒಲಿಂಪಿಕ್ ಕ್ರೀಡಾಕೂಟ ಕೊರೊನಾ
ವೈರಸ್ ಹಡುವಿಕೆಯ ಭೀತಿಯ ಹಿನ್ನೆಲೆಯಲ್ಲಿ ಬರೊಬ್ಬರಿ ಒಂದು ವರ್ಷ ಕಾಲ ಮುಂದಕ್ಕೆ
ಹೋಗಿದೆ. ಜಪಾನ್ ಪ್ರಧಾನಿ ಶಿಂಜೊ ಅಬೆ ಈ ಸುದ್ದಿಯನ್ನು ಮೊದಲ ಪ್ರಕಟಿಸಿದ್ದರೆ,
ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ತನ್ನ ಹೇಳಿಕೆಯನ್ನು ಹೊರಡಿಸಿ ಮುಂದೂಡಿಕೆಗೆ
ಅನುಮತಿ ನೀಡಿರುವುದನ್ನು ಖಚಿತಪಡಿಸಿದೆ. ಆದರೆ, ಸತತ ಏಳು ವರ್ಷಗಳಿಂದ ಸಿದ್ಧತೆ
ನಡೆಸಿದ್ದ ಕ್ರೀಡಾಕೂಟವನ್ನು ಮುಂದೂಡಿದಷ್ಟಕ್ಕೇ ಎಲ್ಲ ಸಮಸ್ಯೆ ಪರಿಹಾರವಾಯಿತು ಎಂದು
ಅಂದುಕೊಳ್ಳುವಂತಿಲ್ಲ. ಏಕೆಂದರೆ, ಮುಂದಿನ ವರ್ಷ ಕ್ರೀಡಾಕೂಟಕ್ಕೆ ಮಂಗಳ ಹಾಡುವ ತನಕ
ನಾನಾ ಸವಾಲುಗಳು ಎದುರಾಗುತ್ತವೆ. ಅಂಥ ಪ್ರಮುಖ ಸವಾಲುಗಳು ಇಲ್ಲಿವೆ.
1) ಯಾವಾಗ ಒಲಿಂಪಿಕ್ಸ್?
2021ರಲ್ಲಿ
ಯಾವಾಗ ಒಲಿಂಪಿಕ್ಸ್ ನಡೆಯಲಿದೆ ಎಂಬುದು ಮುಂದೂಡಿಕೆಯಾದಾಗ ತಕ್ಷಣ ಮೂಡಿದ ಪ್ರಶ್ನೆ.
ಇದಕ್ಕಿನ್ನು ಸಮರ್ಪಕ ಜವಾಬು ದೊರಕಿಲ್ಲ. ಐಒಸಿ ಈ ಕುರಿತು ನಿಶ್ಚಿತ ಹೇಳಿಕೆಯನ್ನೂ
ನೀಡಿಲ್ಲ. ಆದರೆ, ಟೋಕಿಯೊ ಒಲಿಂಪಿಕ್ ಸಮಿತಿ ಹಾಗೂ ಅಂತಾರಾಷ್ಟ್ರಿಯ ಒಲಿಂಪಿಕ್
ಸಮಿತಿಯ ನಡುವೆ ಕಾರ್ಯನಿರ್ವಹಿಸುವ ಸಮನ್ವಯ ಸಮಿತಿಯ ಅಧ್ಯಕ್ಷ ಜಾನ್ ಕೋಟ್ಸ್ ಜುಲೈ
ಹಾಗೂ ಆಗಸ್ಟ್ ಮಧ್ಯವೇ ನಡೆಯಬಹುದು ಎಂದು ಹೇಳಿದ್ದಾರೆ. ಇನ್ನೊಂದು ಪ್ರಮುಖ
ವಿಚಾರವನ್ನು ಇಲ್ಲಿ ಉಲ್ಲೇಖಿಸಬೇಕಾಗಿದೆ. ಈ ಒಲಿಂಪಿಕ್ ಅನ್ನು "ಬೇಸಿಗೆ
ಒಲಿಂಪಿಕ್ಸ್' ಎಂದೇ ಕರೆಯಲಾಗುತ್ತದೆ. ಹೀಗಾಗಿ ಆ ಋತುವಿನೊಳಗೆ ಮುಕ್ತಾಯಮಾಡಬೇಕಾಗಿದೆ.
ಅದಕ್ಕಿಂತ ಮುಂದಕ್ಕೆ ಕೊಂಡೊಯ್ದರೆ ಈಗಾಗಲೇ ನಿಗದಿಯಾಗಿರುವ ಬೇರೆ ಕ್ರೀಡಾಕೂಟಗಳಿಗೆ
ಅಡಚಣೆಯಾಗಬಹುದು. ಇದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಹಾಗೂ ಆಯೋಜಕರ ಮುಂದಿನ
ಪ್ರಮುಖ ಸವಾಲು.
2) ಮಾರಾಟ ಮಾಡಿರುವ ಟಿಕೆಟ್‌ಗಳ ಕತೆ?
ಈಗಾಗಲೇ ಲಕ್ಷಾಂತರ
ಟಿಕೆಟ್‌ಗಳು ಮಾರಾಟವಾಗಿವೆ. ಅವುಗಳ ಮೊತ್ತವನ್ನು ವಾಪಸ್ ಕೊಡುವುದು ಅನಿವಾರ್ಯ. ಅದೇ
ರೀತಿ ಒಟ್ಟು 78 ಲಕ್ಷ ಟಿಕೆಟ್‌ಗಳ ಮಾರಾಟ ಮಾಡಲು ಅವಕಾಶಗಳಿವೆ. ಆದರೆ, ಬೇಡಿಕೆಗಿಂತ
ಪೂರೈಕೆ ಸಾಮರ್ಥ್ಯ ಕಡಿಮೆಯಿದೆ. ಹೀಗಾಗಿ ಮುಂದಿನ ಬಾರಿ ಟಿಕೆಟ್ ನೀಡುವಾಗ ಯಾರಿಗೆ
ಆದ್ಯತೆ ನೀಡಬೇಕು ಎನ್ನುವ ಪ್ರಶ್ನೆಯಿದೆ. ಟೋಕಿಯೊ ಒಲಿಂಪಿಕ್ ಸಮಿತಿಯ ಸಿಇಒ ಪ್ರಕಾರ,
ಪ್ರಸ್ತುತ ಯಾರು ಟಿಕೆಟ್ ಪಡೆದುಕೊಂಡಿದ್ದಾರೋ, ಅವರಿಗೆ ಮುಂದಿನ ಬಾರಿ ಟಿಕೆಟ್
ವಿತರಣೆಯಲ್ಲಿ ಆದ್ಯತೆ ನೀಡಲಾಗುತ್ತದೆ.
3) ವೆಚ್ಚ ಅಧಿಕವಾಗುವುದೇ ?
ವರ್ಷಗಳು
ಜಾಸ್ತಿಯಾಗುತ್ತಿದ್ದಂತೆ ಆಯೋಜನಾ ವೆಚ್ಚ ಏರಿಕೆಯಾಗುವುದು ಸಾಮಾನ್ಯ. ಜತೆಗೆ
ಮುಂದೂಡಿಕೆಯಿಂದ ಸಾಕಷ್ಟು ನಷ್ಟವಾಗಲಿದೆ. ಹೀಗಾಗಿ 22,500 ಕೋಟಿ ರೂ. ಹೆಚ್ಚುವರಿ
ಖರ್ಚು ಆಗಬಹುದು ಎಂದು ಈಗಾಗಲೇ ಅಂದಾಜು ಮಾಡಲಾಗಿದೆ. ಇದನ್ನು ಜಪಾನ್ ಸರಕಾರವೇ
ಭರಿಸಬೇಕಾಗಿದ್ದು, ನಾಗರಿಕರಿಗೆ ಟ್ಯಾಕ್ಸ್ ಬೀಳಲಿದೆ. 2013ರಲ್ಲಿ ಬಿಡ್
ಸಲ್ಲಿಸುವಾಗ 54,800 ಕೋಟಿ ರೂ. ಅಂದಾಜು ಮಾಡಲಾಗಿತ್ತು. ಆದರೆ, 2019ರ
ಡಿಸೆಂಬರ್‌ನಲ್ಲಿ ಒಟ್ಟು ಯೋಜನಾ ವೆಚ್ಚ 94,600 ಕೋಟಿ ರೂ. ಎಂದು ಸರಕಾರ ಹೇಳಿತ್ತು.
ಹೀಗಾಗಿ ಎರಡು ಪಟ್ಟು ಹೆಚ್ಚಾಗಿರುವುದು ಸಾಬೀತಾಗಿದೆ.