ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರ ಸಲ್ಲದು; ಯಡಿಯೂರಪ್ಪ

ಬೆಂಗಳೂರು, ಸೆ 8      ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸುವುದನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಡಕ್ ಎಚ್ಚರಕೆ ನೀಡಿದ್ದಾರೆ. ಭಾನುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 100 ರೂಪಾಯಿ ಕೊಟ್ಟರೆ 50 ರೂ.ನಷ್ಟು ಕೆಲಸಗಳು ಆಗುತ್ತವೆ ಎಂಬ ದೂರುಗಳು ಕೇಳಿಬಂದಿವೆ. ಅಭಿವೃದ್ಧಿ ಯೋಜನೆಯಲ್ಲಿ ಭ್ರಷ್ಟಾಚಾರ ಕಂಡುಬಂದಲ್ಲಿ ಸಾರ್ವಜನಿಕರು ತಮ್ಮ ಗಮನಕ್ಕೆ ತಂದರೆ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.  ಬೆಂಗಳೂರು ವಿಶ್ವ ದರ್ಜೆಯ ನಗರ ಮಾಡುವ ಗುರಿ ತಮಗಿದ್ದು, ಕುಂದಲಹಳ್ಳಿಯ ಅಂಡರ್ ಪಾಸ್ ಪರಿಶೀಲನೆ ನಡೆಸಲಾಗಿದೆ. ಕೆ.ಆರ್ ಪುರಂ, ಸಿಲ್ಕ್ ಬೋರ್ಡ್ ಟ್ರಾಫಿಕ್ ಸಮಸ್ಯೆಯಿಂದ ಸ್ಥಳೀಯ ಕಂಪನಿಗಳಿಗೆ ತೊಂದರೆ ಬಗ್ಗೆ ಮನವಿ ಬಂದಿದ್ದು . ಇದನ್ನು ಪರಿಹರಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು. ಬೆಳ್ಳಂದೂರು ಕೆರೆ ಅಭಿವೃದ್ಧಿಗೆ 200 ಕೋಟಿ ರೂ.ಒದಗಿಸಲಾಗಿದೆ. ಒಮ್ಮೆ ಬೆಳ್ಳಂದೂರು ಕೆರೆಗೆ ಭೇಟಿ ನೀಡಿ ವೀಕ್ಷಣೆ ಮಾಡಲಾಗುವುದು. ನಗರದ ಅಭಿವೃದ್ಧಿಗೆ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ. ಬೆಂಗಳೂರು ಅಭಿವೃದ್ಧಿ ಗೆ ಹಣಕಾಸಿನ ಕೊರತೆ ಆಗಬಾರದು. ಅಭಿವೃದ್ಧಿ ವಿಚಾರವಾಗಿ ಬೆಂಗಳೂರಿನ ಸಂಸದರು ಶಾಸಕರ ಜೊತೆ ಮತ್ತೊಮ್ಮೆ ಸಭೆ ನಡೆಸಲಾಗುವುದು ಎಂದರು. ಮಂಗಳವಾರ ಕಾರವಾರ ಜಿಲ್ಲೆಗೆ ತೆರಳಿ ಅಲ್ಲಿನ ಅತಿವೃಷ್ಟಿ ಬಗ್ಗೆ ಮಾಹಿತಿ ಪಡೆಯಲಾಗುವುದು. ನೆರೆ ಸಂಬಂಧ ಕೇಂದ್ರದಿಂದ ಹೆಚ್ಚಿನ ಅನುದಾನ ಸಿಗುವ ಭರವಸೆ ಇದೆ ಎಂದು ಯಡಿಯೂರಪ್ಪ ತಿಳಿಸಿದರು.  ಕಸ ವಿಲೇವಾರಿ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದ್ದು, ಈ ಸಂಬಂಧ ಬೇರೆ ರಾಜ್ಯಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು. ಸದ್ಯದಲ್ಲೇ ಐಟಿ ಬಿಟಿ ಕಂಪನಿಗಳ ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದರು. ನಗರ ಪರಿವೀಕ್ಷಣೆಯನ್ನು ಟೀಕಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಕೆ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸುವುದಕ್ಕಿಂತ ನನ್ನ ಕೆಲಸ ಮಾಡುವುದು ಉತ್ತಮ. ಟೀಕೆಗಳು ಬರುವುದು ಸಹಜ. ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು. ರಾಜಕಾಲುವೆ ಒತ್ತುವರಿದಾರರಿಗೆ ಖಡಕ್ ಸೂಚನೆ ನೀಡಿದ ಅವರು, ಯಾರೇ ರಾಜಾಕಾಲುವೆ ಒತ್ತುವರಿ ಮಾಡಿದರೂ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಈ ಸಂಬಂಧ ಅಧಿಕಾರಿಗಳಿಗೆ ಈಗಾಗಲೇ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.