ನವದೆಹಲಿ,
ಮಾ.31,ರಾಷ್ಟ್ರ ರಾಜಧಾನಿ ನವದೆಹಲಿಯ ನಿಜಾಮುದ್ದೀನ್ ಮರ್ಕಝ್‌ನಲ್ಲಿ ನಡೆದ ಧಾರ್ಮಿಕ
ಸಭೆಯಲ್ಲಿ ಪಾಲ್ಗೊಂಡಿದ್ದ 24 ಮಂದಿಯಲ್ಲಿ ಕೋವಿಡ್ - 19 ಸೋಂಕು ದೃಢಪಟ್ಟಿದೆ ಎಂದು
ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಮಂಗಳವಾರ ತಿಳಿಸಿದ್ದಾರೆ.ಲಾಕ್‌ಡೌನ್‌ನ
ಹೊರತಾಗಿಯೂ ಧಾರ್ಮಿಕ ಸಭೆ ನಡೆಸಿರುವುದು ಗಂಭೀರ ಅಪರಾಧ. ಆರೋಪಿಗಳ ವಿರುದ್ಧ ಕಠಿಣ
ಕ್ರಮಕೈಗೊಳ್ಳುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೆ
ಶಿಫಾರಸು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.ಮರ್ಕಝ್ ಕಟ್ಟಡದಲ್ಲಿ 1500ರಿಂದ
1700 ಮಂದಿ ಸೇರಿದ್ದರು. 1033 ಮಂದಿಯನ್ನು ಸ್ಥಳಾಂತರಿಸಿದ್ದು, ಅವರಲ್ಲಿ 334
ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 700 ಮಂದಿಯನ್ನು
ಕ್ವಾರಂಟೈನ್‌ನಲ್ಲಿಡಲಾಗಿದೆ ಎಂದು ಸಚಿವರು ತಿಳಿಸಿದರು.ಆರು ಮಂದಿಯ ರಕ್ತದ
ಪರೀಕ್ಷೆಯಲ್ಲಿ ಕೊರೋನಾ ವೈರಸ್ ಪಾಸಿಟಿವ್ ಕಂಡುಬಂದ ಬಳಿಕ ಆಗ್ನೇಯ ದೆಹಲಿಯ
ನಿಜಾಮುದ್ದೀನ್ ಪ್ರದೇಶದ ತಬ್ಲೀಗ್ ಜಮಾಅತ್ ಮರ್ಕಝ್‌ನಿಂದ ಸುಮಾರು 200 ಮಂದಿಯನ್ನು
ಸೋಮವಾರ ಕೊರೋನಾ ವೈರಸ್ ಪರೀಕ್ಷೆಗಾಗಿ ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿತ್ತು.