ಅಮೆರಿಕದಲ್ಲಿ ಕೊರೊನವೈರಸ್‍ ಕೇಕೆ, ಒಂದೇ ದಿನ 2,508 ಸೋಂಕಿತರು ಸಾವು: 5 ಲಕ್ಷ ದಾಟಿದ ಪ್ರಕರಣಗಳು

ವಾಷಿಂಗ್ಟನ್, ಏಪ್ರಿಲ್ 11,ಅಮೆರಿಕದಲ್ಲಿ  ಕೊರೊನವೈರಸ್‍ ಕೇಕೆ ಮುಂದುವರೆದಿದ್ದು, ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 5,00,000 ದಾಟಿದ್ದು, ಸಾವಿನ ಸಂಖ್ಯೆ 18,777 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 2,508 ಸಾವುಗಳು ಸಂಭವಿಸುವುದರೊಂದಿಗೆ ಒಂದೇ ದಿನದಲ್ಲಿ ಅತಿ ಹೆಚ್ಚು ಸಾವು ಪ್ರಮಾಣ ಇದಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ಹೇಳಿದೆ.ಭಾರತೀಯ ಕಾಲಮಾನ ಶನಿವಾರ ಬೆಳಿಗ್ಗೆ 11.30ರವರೆಗೆ ಅಮೆರಿಕದಲ್ಲಿ  ಒಟ್ಟು ಸೋಂಕುಗಳ ಸಂಖ್ಯೆ 5,01,560 ರಷ್ಟಿದೆ. ಒಂದೇ ದಿನದಲ್ಲಿ 2,000 ಕ್ಕೂ ಹೆಚ್ಚು ಕರೋನಾ ಸಂಬಂಧಿತ ಸಾವು ಸಂಭವಿಸಿದ ಮೊದಲ ದೇಶವಾಗಿರುವ ಅಮೆರಿಕ, 18,849 ಸಾವು ಸಂಭವಿಸಿರುವ ಇಟಲಿಯ ನಂತರದ ಸ್ಥಾನದಲ್ಲಿದೆ. ಅಮರಿಕದಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ ಇಡೀ ವಿಶ್ವದಲ್ಲೇ ಹೆಚ್ಚಾಗಿದೆ. ನಂತರದ ಸ್ಥಾನಗಳಲ್ಲಿರುವ ಸ್ಪೇನ್ ಮತ್ತು ಇಟಲಿಯಲ್ಲಿ ಕ್ರಮವಾಗಿ 158,273 ಮತ್ತು 147,577 ಪ್ರಕರಣಗಳು ದೃಢಪಟ್ಟಿವೆ.ಚೀನಾದ ವುಹಾನ್ ಪ್ರಾಂತ್ಯದಲ್ಲಿ ಮೊದಲ ಕಾಣಿಸಿಕೊಂಡ ಮಾರಕ ವೈರಸ್ ನ ಸೋಂಕು ಇಲ್ಲಿಯವರೆಗೆ ವಿಶ್ವದಾದ್ಯಂತ ಒಟ್ಟು 1,696,139 ಜನರಿಗೆ ತಗುಲಿದ್ದು, ಒಂದು ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.