ಹರ್ಬಿನ್, ಫೆ 3 ಚೀನಾದಲ್ಲಿ ಕೊರೋನಾ ವೈರಸ್ ಸೋಂಕಿನ ಪ್ರಕೋಪಕ್ಕೆ ನೂರಾರು ಜನರು ಬಲಿಯಾಗುತ್ತಿರುವ ಬೆನ್ನಲ್ಲೇ ಇಲ್ಲಿನ ಹೆಯಿಲಾಂಗ್ ಜಿಯಂಗ್ ಪ್ರಾಂತ್ಯದ ಸೋಂಕು ಪೀಡಿತ ಮಹಿಳೆಯೋರ್ವರು ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ. ಮಹಿಳೆ 9ನೇ ತಿಂಗಳ ಗರ್ಭಾವಸ್ಥೆಯಲ್ಲಿದ್ದಾಗ ಆಕೆಗೆ 37.3 ಡಿಗ್ರಿ ತಾಪಮಾನದ ಜ್ವರ ಕಾಣಿಸಿಕೊಂಡಿದ್ದು, ತಪಾಸಣೆ ನಡೆಸಿದ ಕೊರೋನಾ ಸೋಂಕು ಇರುವುದು ಪತ್ತೆಯಾಗಿತ್ತು. ಆಗ ವೈದ್ಯರು ಆಕೆಗೆ ಸಿಜೇರಿಯನ್ ಮೂಲಕ ಪ್ರಸವ ಮಾಡಿಸಲು ಮುಂದಾಗಿದ್ದರು. ಅದೇ ದಿನ 3 ಕೆಜಿ ತೂಕದ ಆರೋಗ್ಯ ವಂತ ಮಗು ಜನಿಸಿದೆ.ಈಗ ಮಗುವಿನ ತಾಯಿಯ ತಾಪಮಾನ ಸಹಜ ಸ್ಥಿತಿಗೆ ಮರಳಿದ್ದು, ಮಗು ಮತ್ತು ತಾಯಿಯನ್ನು ಪ್ರತ್ಯೇಕವಾಗಿರಿಸಲಾಗಿದೆ. ಎರಡು ವಿಶೇಷ ವೈದ್ಯರ ತಂಡಗಳು ಅವರ ತಪಾಸಣೆ ನಡೆಸುತ್ತಿದೆ ಎಂದು ಅಲ್ಲಿನ ಮೂಲಗಳು ತಿಳಿಸಿವೆ.