ಚೀನಾದ ಶೆಂಜನ್ ನಗರದ ವ್ಯಕ್ತಿಗೆ ಕೊರೋನಾ ವೈರಸ್ ತಗುಲಿಲ್ಲ

ಹುಬ್ಬಳ್ಳಿ, ಫೆ 5 ,ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಪ್ರತ್ಯೇಕ ವಾರ್ಡನಲ್ಲಿ ಚೀನಾದ ಶೆಂಜನ್ ನಗರದಿಂದ ಆಗಮಿಸಿದ್ದ ಓರ್ವ ವ್ಯಕ್ತಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಆತನಿಗೆ ಕೊರೋಣಾ ವೈರಸ್ ಸೋಂಕು ತಗುಲಿಲ್ಲ ಎಂಬುದು ವೈದ್ಯಕೀಯ ದಾಖಲೆಗಳಿಂದ ಸಾಬೀತಾಗಿದೆ.  ಬೆಂಗಳೂರಿನ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಿದ್ದ ಸೋಂಕಿನ ಮಾದರಿಯ ವರದಿ ಬಂದಿದ್ದು, ಈ ವ್ಯಕ್ತಿಗೆ ಸೋಂಕು ತಗಲಿಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಕೇರಳ ಜಿಲ್ಲೆಯ ಕಾಸರಗೋಡಿನ ವಿದ್ಯಾರ್ಥಿಯೊಬ್ಬರಿಗೆ  ಕೊರೋನಾ ವೈರಸ್ ಸೋಂಕು ಕಂಡು ಬಂದಿದ್ದು, ಈ ಮೂಲಕ ಕೇರಳದಲ್ಲಿ ಮೂರು ಪ್ರಕರಣಗಳು ಪತ್ತೆಯಾದಂತಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಟ್ಟೆಚ್ಚರ ಘೋಷಿಸಿದೆ. 

ಮಂಗಳೂರಿನ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣದಲ್ಲೂ ತೀವ್ರ ನಿಗಾ ವಹಿಸಲಾಗಿದೆ. ಪಕ್ಕದ ಕಾಸರಗೋಡಿನಲ್ಲಿ ವೈರಸ್ ಕಂಡು ಬಂದಿರುವುದರಿಂದ ಸಹಜವಾಗಿಯೇ ಮಂಗಳೂರು ನಗರದಲ್ಲೂ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಇಲ್ಲಿನ ಜಿಲ್ಲಾ ವೆನ್ಲಾಕ್ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಇದಕ್ಕಾಗಿ ಪ್ರತ್ಯೇಕ ವಾರ್ಡ್ ಗಳನ್ನು ಮೀಸಲಿಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಮಾರಣಾಂತಿಕವಾದ ಈ ವೈರಸ್ ತಡೆಗೆ ಪ್ರತಿಯೊಬ್ಬರೂ ಜಾಗೃತರಾಗಿರಬೇಕು. ತೀವ್ರ ಜ್ವರ, ನೆಗಡಿ, ಕೆಮ್ಮು, ಉಸಿರಾಟ ತೊಂದರೆ ಮತ್ತು ಭೇದಿಯಂತಹ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡದೆ ಚಿಕಿತ್ಸೆ ಪಡೆಯಬೇಕು. ಕರೋನಾ ವೈರಸ್ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಹೆಚ್ಚಿನ ಎಚ್ಚರಿಕೆಯ ಅಗತ್ಯವಿದೆ ಎಂದು ಆರೋಗ್ಯ ಇಲಾಖೆ ಎಲ್ಲೆಡೆ ಜಾಗೃತಿ ಮೂಡಿಸುತ್ತಿದೆ.