ಬೆಂಗಳೂರು, ಮೇ 8,ಕೋವಿಡ್ 19 ಸಾಂಕ್ರಾಮಿಕ ಹರಡುವುದನ್ನು ತಡೆಗಟ್ಟುವ ಸಲುವಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ ಸಂಸ್ಥೆಯ ಎಲ್ಲಾ ಘಟಕಗಳು, ಕಾರ್ಯಾಗಾರಗಳು ಮತ್ತು ಕಚೇರಿಗಳಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಿದೆ.ನಿಗಮದ ಎಲ್ಲಾ ಘಟಕಗಳು, ಕಾರ್ಯಾಗಾರಗಳು ಮತ್ತು ಕಚೇರಿಗಳು ಮುಖ್ಯದ್ವಾರಗಳಲ್ಲಿ ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಅಳವಡಿಸಬೇಕು. ಭದ್ರತಾ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ಬರುವ ನೌಕರ, ಸಂದರ್ಶಕರನ್ನು ತಾಪಮಾನ ತಪಾಸಣೆಗೆ ಒಳಪಡಿಸಬೇಕು.
ಒಂದು ವೇಳೆ ಯಾವುದೇ ನೌಕರ, ಸಂದರ್ಶಕ ಜ್ವರದಿಂದ ಬಳಲುತ್ತಿರುವುದು ಅಥವಾ ಅಧಿಕ ತಾಪಮಾನ ಹೊಂದಿರುವುದು ಕಂಡುಬಂದಲ್ಲಿ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಅವರನ್ನು ಕಾರ್ಯಸ್ಥಳದಿಂದ ಕಳುಹಿಸಬೇಕು. ಆರೋಗ್ಯ ಇಲಾಖೆಯವರ ಸಹಯೋಗದೊಂದಿಗೆ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಅವರನ್ನು ಮುಖ್ಯದ್ವಾರದೊಳಗೆ ಬಿಡಬಾರದು ಹಾಗೂ ಕರ್ತವ್ಯಕ್ಕೆ ತೆಗೆದುಕೊಳ್ಳಬಾರದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಮುಖ್ಯದ್ವಾರದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಎಲ್ಲಾ ನೌಕರರು ಹಾಗೂ ಸಂದರ್ಶಕರು ಥರ್ಮಲ್ ಸ್ಕ್ಯಾನಿಂಗ್ ಆದ ನಂತರ ಒಳಗಡೆ ಬರುವ ಮುನ್ನ ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸಬೇಕು ಅಥವಾ ಕೈ ತೊಳೆದುಕೊಳ್ಳಬೇಕು. ಅನಿವಾರ್ಯ ಸಂದರ್ಭಗಳ ಹೊರತು ಯಾವುದೇ ಸಂದರ್ಶಕರನ್ನು ಒಳಗಡೆ ಬಿಡಬಾರದು. ಎಲ್ಲಾ ನೌಕರರಿಗೆ ಮಾಸ್ಕ್ ನೀಡಬೇಕು ಮತ್ತು ಅವರು ಅದನ್ನು ಕಡ್ಡಾಯವಾಗಿ ಧರಿಸುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.ಕಾರ್ಯಸ್ಥಳದಲ್ಲಿ ನೌಕರರ ಮಧ್ಯೆ ರಕ್ಷಣಾ ಅಂತರ 1.5 ಮೀಟರ್ ಅನ್ನು ಅವಶ್ಯ ಕಾಯ್ದುಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ ನೌಕರರು ಹಸ್ತಲಾಘವ, ತಬ್ಬಿಕೊಳ್ಳುವುದು ಮುಂತಾದ ದೈಹಿಕ ಶುಭಾಶಯಗಳನ್ನು ಮಾಡಬಾರದು. ಮುಂಜಾಗೃತಾ ಕ್ರಮಗಳ ಕುರಿತು ದೃಶ್ಯ ಸಂವಹನಗಳಾದ ಭಿತ್ತಿಪತ್ರ, ಬ್ಯಾನರ್‌ಗಳನ್ನು ಕಾರ್ಯಸ್ಥಳದಲ್ಲಿ ಪ್ರಕಟಿಸುವುದು ಮತ್ತು ಮುಂಜಾಗೃತಾ ಕ್ರಮಗಳ ಕುರಿತು ವಿರಾಮದ ವೇಳೆ ನೌಕರರಿಗೆ ತಿಳುವಳಿಕೆ ನೀಡಬೇಕು.ಕುಡಿಯುವ ಬಿಸಿನೀರಿನ ವ್ಯವಸ್ಥೇ ಮಾಡಬೇಕು. ನೌಕರರು ಅವರ ಸ್ವಂತ ನೀರಿನ ಬಾಟಲ್‌ಗಳನ್ನು ತರಬೇಕು ಮತ್ತು ಇತರರ ವೈಯಕ್ತಿಕ ಶುಚಿತ್ವದ ಬಗ್ಗೆ ನಿಗಾ ವಹಿಸಬೇಕು.
ನೌಕರರು ಸಾಮಾನ್ಯವಾಗಿ ಉಪಯೋಗಿಸುವಂತಹ ಸೌಲಭ್ಯಗಳನ್ನು ಬಳಸುವ ಮುನ್ನ ಮತ್ತು ಬಳಸಿದ ನಂತರ ಕಡ್ಡಾಯವಾಗಿ ಸೋಪ್ ನೀರಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು.
ವಾಶ್‌ರೂಮ್‌ಗಳಲ್ಲಿ ಸ್ಯಾನಿಟೈಸರ್, ಸಾಬೂನು, ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು.ಕಾರ್ಯಸ್ಥಳದಲ್ಲಿ ಎಲ್ಲರೂ ಉಪಯೋಗಿಸುವ ಕುಡಿಯುತ ನೀರಿನ ನಳವನ್ನು ಬಳಸುವ ಮುನ್ನ ಮತ್ತು ಬಳಸಿದ ನಂತರ ಕಡ್ಡಾಯವಾಗಿ ಸೋಪ್ ನೀರಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು.
ಸ್ವಚ್ಛತಾ ಸಿಬ್ಬಂದಿ ತಮ್ಮ ವೈಯಕ್ತಿಕ ಶುಚಿತ್ವವನ್ನು ಅವಶ್ಯ ಕಾಯ್ದುಕೊಳ್ಳಬೇಕು, ಎಲ್ಲರೂ ಸಾಮಾನ್ಯವಾಗಿ ಉಪಯೋಗಿಸುವ ಗೇಟುಗಳು, ಹ್ಯಾಂಡ್ ರೈಲ್, ಬಾಗಿಲುಗಳ ಹಿಡಿ, ಇತ್ಯಾದಿಗಳನ್ನು ಆಗಾಗ್ಗೆ ಶುಚಿಗೊಳಿಸಬೇಕು. ಅದೇ ರೀತಿ ವಾಶ್ ರೂಮ್‌ಗಳನ್ನು ಆಗಾಗ್ಗೆ ಶುಚಿಗೊಳಿಸಬೇಕು.ಉಪಹಾರ ಗೃಹದ ಸಿಬ್ಬಂದಿ ಸಹ ಮಾಸ್ಕ್ ಮತ್ತು ಹ್ಯಾಂಡ್ ಗ್ಲೌಸ್‌ಗಳನ್ನು ತಪ್ಪದೇ ಧರಿಸಬೇಕು. ತಮ್ಮ ವೈಯಕ್ತಿಕ ಶುಚಿತ್ವವನ್ನು ಅವಶ್ಯ ಕಾಯ್ದುಕೊಳ್ಳಬೇಕು.
ಯಾವುದೇ ನೌಕರರು ಜ್ವರ, ಶೀತ, ಕೆಮ್ಮು ಮತ್ತು ಇತರೆ ಯಾವುದೇ ಗೋಚರಿಸುವ ರೋಗಲಕ್ಷಣಗಳಿಂದ ಬಳಲುತ್ತಿರುವುದು ಕಂಡುಬಂದಲ್ಲಿ, ಅವರನ್ನು ತಕ್ಷಣ ಮೇಲಾಧಿಕಾರಿಗಳ ಗಮನಕ್ಕೆ ತಂದು ಕಾರ್ಯಸ್ಥಳದಿಂದ ಕಳುಹಿಸಬೇಕು. ಮತ್ತು ಆರೋಗ್ಯ ಇಲಾಖೆಯವರ ಸಹಯೋಗದೊಂದಿಗೆ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು.
ನೌಕರರು ಶುಚಿತ್ವದ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಅಗತ್ಯ ಸುಧಾರಣೆಗಳನ್ನು ತರಬೇಕು.ನೌಕರರು ಗುಟ್ಕಾ, ತಂಬಾಕು, ಬೀಡಿ, ಸಿಗರೇಟು ಸೇದುವುದು ಮತ್ತು ಆವರಣದಲ್ಲಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.ಕಚೇರಿ ಸಿಬ್ಬಂದಿಗಳ ಸಂಬಂಧಿಸಿದ ಎಲ್ಲಾ ರೀತಿಯ ವ್ಯವಹಾರಿಕ ಪ್ರಯಾಣಗಳನ್ನು ರದ್ದುಪಡಿಸಬೇಕು
ಕಚೆರಿಯಲ್ಲಿ ನೌಕರರ ಗುಂಪುಗೂಡುವಿಕೆ ಸೇರಿದಂತೆ ಯಾವುದೇ ಆಂತರಿಕ ಸಭೆ ಅಥವಾ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಾರದು.
ಬಯೋಮೆಟ್ರಿಕ್ ಆದೇಶವನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಬೇಕು.ಕೆಲಸ ಕಾರ್ಯಗಳ ಅಗತ್ಯತೆಗೆ ಅನುಗುಣವಾಗಿ ಕನಿಷ್ಠ ಸಿಬ್ಬಂದಿಯನ್ನು ಮಾತ್ರ ಕರ್ತವ್ಯದ ಮೇಲೆ ನಿಯೋಜಿಸಿಕೊಳ್ಳಬೇಕು.ಮಾರ್ಗಗಳ ಮೇಲೆ ಹೋಗುವ ಬಸ್ಸುಗಳನ್ನು ಮತ್ತು ಕರ್ತವ್ಯ ಮುಗಿಸಿ ಘಟಕಕ್ಕೆ ಹಿಂದಿರುಗುವ ಬಸ್‌ಗಳನ್ನು ಸೋಂಕು ನಿರೋಧಕ ಸಿಂಪಡಿಸಿಶುಚಿಗೊಳಿಸಬೇಕು. ಬಸ್ಸುಗಳಿಗೆ ಸೋಂಕು ನಿರೋಧಕ ಸಿಂಪಡಿಸಿದ 30 ನಿಮಿಷಗಳ ನಂತರವೇ ನಿರ್ವಹಣೆ, ದುರಸ್ತಿ ಕಾರ್ಯ ಕೈಗೊಳ್ಳಬೇಕು. ಘಟಕ, ಕಾರ್ಯಾಗಾರಗಳ ಸಂಪೂರ್ಣ ಆವರಣವನ್ನು ಸ್ಯಾನಿಟೈಸರ್ ಯಂತ್ರದ ಮೂಲಕ ಸೋಡಿಯಂ ಹೈಪೋಚೊರೈಟ್ ದ್ರಾವಣವನ್ನು ಸಿಂಪಡಿಸಬೇಕು ಮತ್ತು ಈ ಕಾರ್ಯವನ್ನು ಪ್ರತಿ ದಿನ ಮಾಡಬೇಕು.ಇತರ ಮುಂಜಾಗೃತಾ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ಹೊರಡಿಸುವ ಸೂಚನೆಗಳನ್ನು ಅವಶ್ಯವಾಗಿ ಅಳವಡಿಸಿಕೊಳ್ಳಬೇಕು.ಈ ಕುರಿತು ಸಂಬಂಧಪಟ್ಟ ಘಟಕ ವ್ಯವಸ್ಥಾಪಕರು, ಕಾರ್ಯ ವ್ಯವಸ್ಥಾಪಕರು, ವಿಭಾಗದ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರು ಅವಶ್ಯ ಮೇಲ್ವಿಚಾರಣೆಯನ್ನು ವಹಿಸಲು ಮತ್ತು ಅಗತ್ಯ ಪ್ರಮಾಣದಲ್ಲಿ ಅವಶ್ಯಕ ವಸ್ತುಗಳಾದ ಥರ್ಮಲ್ ಸ್ಕ್ಯಾನರ್, ಮಾಸ್ಕ್ ಸ್ಯಾನಿಟೈಸರ್‌ಗಳ ವ್ಯವಸ್ಥೆ ಮಾಡಲು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.