ಕರೋನಾ ವೈರಸ್‌ ಭೀತಿ ಹಿನ್ನೆಲೆ: ರಾಜ್ಯದಲ್ಲಿ ಸೋಂಕು ತಡೆಗಟ್ಟಲು ಆರೋಗ್ಯ ಇಲಾಖೆಯಿಂದ ಸಕಲ ಸಿದ್ಧತೆ

ಬೆಂಗಳೂರು, ಜ 31, ಮಹಾಮಾರಿ ನೋವೆಲ್ ಕರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ರಾಜ್ಯದ ಎಲ್ಲಾ ಜಿಲ್ಲೆಯ ಆಸ್ಪತ್ರೆಗಳಲ್ಲಿ 5 ಹಾಸಿಗೆಗಳ ಪ್ರತ್ಯೇಕ ವಾರ್ಡ್ ತೆರೆಯಲು ಕ್ರಮವಹಿಸಿದೆ.ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ಈಗಾಗಲೇ 15 ಹಾಸಿಗೆಗಳು ಹಾಗೂ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ಸುಸಜ್ಜಿತ ಇಸುಲೇಷನ್ ವಾರ್ಡ್‌ ತೆರೆಯುವುದರ ಜೊತೆಗೆ ನಗರದ ಖಾಸಗಿ ಆಸ್ಪತ್ರೆಗಳಲ್ಲಿಯೂ ಪ್ರತ್ಯೇಕ ವಾರ್ಡ್‌ಗಳನ್ನು ತೆರೆಯಲು ಕ್ರಮವಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ ಡಾ.ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಪ್ರಪಂಚದಾದ್ಯಂತ 7018 ಪ್ರಕರಣಗಳು ವರದಿಯಾಗಿದ್ದು, ಚೀನಾ ದೇಶವೊಂದರಲ್ಲಿಯೇ 7,711 ಪ್ರಕರಣಗಳು ಪತ್ತೆಯಾಗಿ, 276 ಸಾವು ಸಂಭವಿಸಿವೆ. 26 ದೇಶಗಳಲ್ಲಿ ಸೋಂಕು ವರದಿಯಾಗಿದೆ ಎಂಬುದು ತಿಳಿದುಬಂದಿದೆ.ಈ ಸಂಬಂಧ ಭಾರತ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು,ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜೊತೆ ನಡೆದ  ವಿಡಿಯೋ ಸಂವಾದ ನಡೆಸಿದರು. ಸಂವಾದದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಪ್ರಮುಖ ಆಸ್ಪತ್ರೆಗಳ ನಿರ್ದೇಶಕರು ಭಾಗವಹಿಸಿದ್ದರು.

ಸಂವಾದದಲ್ಲಿ ವಿಮಾನ ನಿಲ್ದಾಣಗಳಲ್ಲಿ ಹಾಗೂ ಮಂಗಳೂರು,ಕಾರವಾರ ಬಂದರುಗಳಲ್ಲಿಯೂ ಸಹ ಚೀನಾದಿಂದ ಬರುವ ಪ್ರಯಾಣಿಕರ  ತಪಾಸಣೆಯನ್ನು ಇನ್ನೂ ಉತ್ತಮಗೊಳಿಸುವುದು, ಚೀನಾದ ವುಹಾನ್ ನಗರದಿಂದ 2020ರ ಜನವರಿ-15 ರಿಂದ ಬಂದಂತಹ ಎಲ್ಲಾ ಪ್ರಯಾಣಿಕರ ಆರೋಗ್ಯದ ಮೇಲೆ ನಿಗಾ ಇಡಲು ಕ್ರಮವಹಿಸುವುದು, ಸಂಶಯಾಸ್ಪದ ಪ್ರಕರಣಗಳಲ್ಲಿ ಪರೀಕ್ಷೆಗೊಳಪಡಿಸಿ 28ದಿನವೂ ಅನುಸರಣೆ ಮಾಡುವುದು. ಗೃಹಮಟ್ಟದಲ್ಲಿ ಹಾಗೂ ಸಮುದಾಯದಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ಎಲ್ಲಾ ಅಗತ್ಯ ಮುಂಜಾಗ್ರತ ಅಗತ್ಯ ಕ್ರಮಗಳನ್ನು ಆರೋಗ್ಯ ಶಿಕ್ಷಣದ  ಮೂಲಕ ಸಾರ್ವಜನಿಕರಿಗೆ ಪ್ರಚುರ ಪಡಿಸುವ ಬಗ್ಗೆ ಚರ್ಚಿಸಲಾಯಿತು.ಬೆಂಗಳೂರು ನಗರದಲ್ಲಿ ಶಂಕಿತ ಪ್ರಕರಣಗಳನ್ನು ಬೇರ್ಪಡಿಸಲು 10 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದೆ.  ಮುಂದಿನ ಎರಡು ದಿನಗಳಲ್ಲಿ ಎನ್‌ಐವಿ, ಬೆಂಗಳೂರು ಘಟಕ ಮತ್ತು ವಿಆರ್‌ಡಿಎಲ್,   ಮತ್ತು ಆರ್‌ಐ, ಕರೋನವೈರಸ್‌ಗಳನ್ನು ಪರೀಕ್ಷಿಸಲು ಸಕ್ರಿಯಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರು ಸೇರಿದಂತೆ ವಿಮಾನ ನಿಲ್ದಾಣದಲ್ಲಿ  3 ವೈದ್ಯಕೀಯ ಅಧಿಕಾರಿಗಳು ಮತ್ತು 6 ಅರೆವೈದ್ಯಕೀಯ ಸಿಬ್ಬಂದಿಯನ್ನು ವಿಮಾನ ನಿಲ್ದಾಣ ಆರೋಗ್ಯ ಸಂಸ್ಥೆ, ಕೆಐಎ,  ನಿಯೋಜಿಸಲಾಗಿದೆ. ಜ.30ರವರೆಗೆ ರಾಜ್ಯದಲ್ಲಿ ಒಟ್ಟು 21 ಪ್ರಯಾಣಿಕರು ತೀವ್ರ ನಿಗಾ ಘಟಕದಲ್ಲಿದ್ದು, ಸಂಶಯಾಸ್ಪದ 10 ವ್ಯಕ್ತಿಗಳಿಗೆ ರಾಜೀವ್ ಗಾಂಧಿ ಎದೆ ಆಸ್ಪತ್ರೆಯಲ್ಲಿ ಇಸೋಲೇಷನ್ ಮಾಡಲಾಗಿದೆ. ಸಂಗ್ರಹಿಸಿದ 13ರಕ್ತ ಪರೀಕ್ಷೆಯಲ್ಲಿ 4ರಕ್ತದ ಮಾದರಿಗಳು ನೋವೆಲ್ ಕರೋನಾ ವೈರಸ್ ನೆಗೇಟಿವ್ ಆಗಿವೆ ಎಂದು ಜಂಟಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.