ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ

ರಿಯಾದ್‌, ಫೆ 28 :   ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ಸೋಂಕು ವಿಶ್ವಾದ್ಯಂತ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಮರ ವಾರ್ಷಿಕ ಹಜ್ ಯಾತ್ರೆಯ ಮೇಲೆ ಸೌದಿ ಅರೇಬಿಯಾ ನಿರ್ಬಂಧ ಹೇರಿದೆ.  

ಸೌದಿ ಅರೇಬಿಯಾ ಸರ್ಕಾರ ಪವಿತ್ರ ಮೆಕ್ಕಾ ಮತ್ತು ಮದೀನಾ ಗಳಿಗೆ ಭೇಟಿಯ ಮೇಲೆ ನಿರ್ಬಂಧ ಹೇರಿದ್ದು ಇಸ್ಲಾಂ ನ ಪವಿತ್ರ ಯಾತ್ರಾಸ್ಥಳಕ್ಕೆ ಬರುವವರ ವೀಸಾಗಳನ್ನು ರದ್ದು ಮಾಡಿದೆ. 

  ಪ್ರತಿ ವರ್ಷವೂ ಮೆಕ್ಕಾ ಮತ್ತು ಮದೀನಾಗಳಿಗೆ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ಸೌದಿ ಅರೇಬಿಯಾ ದಲ್ಲಿ ಕೊರೊನಾ ವೈರಸ್‌ ಸೋಂಕು ದೃಢಪಟ್ಟ ಪ್ರಕರಣಗಳು ವರದಿಯಾಗಿಲ್ಲ. ನೆರೆಹೊರೆಯ ರಾಷ್ಟ್ರಗಳಲ್ಲಿ ಮಧ್ಯ ಪ್ರಾಚ್ಯದಲ್ಲಿ 240 ಮಂದಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆಯ ಕ್ರಮವಾಗಿ ಯಾರಿಗೂ ವೀಸಾ ನೀಡದಿರಲು ನಿರ್ಧರಿಸಲಾಗಿದೆ ಎಂದು ಸೌದಿ ಸರಕಾರ ತಿಳಿಸಿದೆ.  

ಈ ನಿರ್ಬಂಧದ ಅವಧಿಯ ಬಗ್ಗೆ ಸರ್ಕಾರ ಮಾಹಿತಿ ನೀಡಿಲ್ಲ. ಹೀಗಾಗಿ ಮೆಕ್ಕಾ ಯಾತ್ರೆ ತೆರಳಲು ಸಿದ್ಧತೆ ನಡೆಸಿದ ಲಕ್ಷಾಂತರ ಮಂದಿ ಗೊಂದಲದಲ್ಲಿ ಸಿಲುಕುವಂತಾಗಿದೆ.  

ವಿಶ್ವಾದ್ಯಂತ ಕೊರೊನಾ ಸೋಂಕು ಹರಡುತ್ತಿದ್ದು ಇರಾನ್‌ನಲ್ಲಿ  ಈ ಸೋಂಕಿಗೆ 26 ಮಂದಿ ಬಲಿಯಾಗಿದ್ದಾರೆ. ಚೀನಾದಲ್ಲಿ 2,700 ಕ್ಕೂ ಹೆಚ್ಚು ಜನರು ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ.