ರಾಜಸ್ತಾನದಲ್ಲಿ ತೀವ್ರ ಆತಂಕ ತಂದ ಕರೋನಾ ವೈರಸ್ ಸೋಂಕು

ಜೈಪುರ, ಜನವರಿ 27, ಚೀನಾದಲ್ಲಿ ಕಾಣಿಸಿಕೊಂಡ   ಕರೋನಾ ವೈರಸ್ ಈಗ ವಿಶ್ವದೆಲ್ಲೆಡೆ ಭೀತಿ ಸೃಷ್ಟಿಸಿದ್ದು,  ಈ ಮಾರಣಾಂತಿಕ ವೈರಸ್ ಉಸಿರಾಟದ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎನ್ನಲಾಗಿದೆ. ಭಾರತದಲ್ಲೂ ಕೆಲವು ರೋಗಿಗಳಲ್ಲಿ ಕರೋನಾ ವೈರಸ್  ಲಕ್ಷಣಗಳು ಪತ್ತೆಯಾಗಿರುವುದರಿಂದ ಎಲ್ಲ ರೀತಿಯ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ನಡುವೆಯೇ, ರಾಜಸ್ತಾನದ ವೈದ್ಯರೊಬ್ಬರಲ್ಲಿ ರೋಗದ ಶಂಕೆ ಕಾಣಿಸಿಕೊಂಡ  ಕಾರಣ  ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಚೀನಾದಲ್ಲಿ ಎಂಬಿಬಿಎಸ್ ಮುಗಿಸಿ, ತವರಿಗೆ  ಮರಳಿದ  ವೈದ್ಯನನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಲಾಗಿದೆ. ಈ ವೇಳೆ ಆತನಿಗೆ ಕರೋನಾ ವೈರಸ್ ಸೋಂಕು ತಗುಲಿರುವ ಶಂಕೆಯಿದ್ದು,  ಹೀಗಾಗಿ, ಆತನಿಂದ ಬೇರೆಯವರಿಗೆ ಸೋಂಕು ಹರಡಬಾರದು ಎಂದು ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು  ಆರೋಗ್ಯ ಸಚಿವ ರಘು ಶರ್ಮ ಸ್ಪಷ್ಟಪಡಿಸಿದ್ದಾರೆ. 

ಆ ವೈದ್ಯನನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಿ, ಕರೋನಾ ವೈರಸ್ ತಗುಲಿದೆಯೇ ಇಲ್ಲವೇ ಎಂಬುದನ್ನು  ಖಚಿತಪಡಿಸಿಕೊಂಡ ನಂತರವೇ ಆತನನ್ನು   ಮನೆಗೆ ಕಳುಹಿಸಲಾಗುವುದು ಎಂದೂ ಸಚಿವರು ಹೇಳಿದ್ದಾರೆ.ರಾಜಸ್ತಾನದ  4 ಜಿಲ್ಲೆಗಳ 18 ಜನರು ಚೀನಾದಿಂದ ವಾಪಾಸಾಗಿದ್ದು ಅವರ ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ.