ಕೊರೋನಾ ವೈರಸ್: ಮಾರ್ಗಸೂಚಿ ಉಲ್ಲಂಘಿಸಿವುದು ಶಿಕ್ಷಾರ್ಹ ಅಪರಾಧ - ಆರೋಗ್ಯ ಇಲಾಖೆ ಎಚ್ಚರಿಕೆ

ಬೆಂಗಳೂರು, ಮಾ 19, ಕೊರೋನಾ ಸೋಂಕು ದೃಢಪಟ್ಟವರವನ್ನು ಪ್ರತ್ಯೇಕವಾಗಿ ಮನೆಯಲ್ಲಿಟ್ಟು ಚಿಕಿತ್ಸೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ಹೊಡಿಸಿದೆ.ಪ್ರತೇಕ ಮನೆಯಲ್ಲಿ ನಿಗಾ ಮತ್ತಿತರ ಸೂಚನೆಗಳನ್ನು ಪಾಲಿಸದಿದ್ದಲ್ಲಿ ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ ೧೯೮೫ ಮತ್ತಿತರ ಕರ್ನಾಟಕ ಸರ್ಕಾರದ ನಿಬಂಧನೆಗಳ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಲಿದೆ ಎಂದು ಆರೋಗ್ಯ ಇಲಾಖೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಸೋಂಕು ಪತ್ತೆಯಾದ ಅಥವಾ ಶಂಕಿತರನ್ನು ಪ್ರತ್ಯೇಕ ಮನೆಯಲ್ಲಿಟ್ಟು ನಿಗಾವಹಿಸುತ್ತಿದ್ದ ಸಂದರ್ಭದಲ್ಲಿ ಸೋಂಕು ಹರಡದಂತೆ ಅನುಸರಿಸಬೇಕಾದ ಕ್ರಮಗಳ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಮಾರ್ಗಸೂಚಿ ಜಾರಿಮಾಡಿದ್ದಾರೆ.
ಪ್ರತ್ಯೇಕ ಶೌಚಾಲಯ ಹೊಂದಿರುವ ಉತ್ತಮ ಗಾಳಿ-ಬೆಳಕು ಹೊಂದಿರುವ ಕೊಠಡಿಯಲ್ಲಿ ಸೋಂಕಿತರು ಅಥವಾ ಶಂಕಿತರನ್ನು ಇರಿಸಿ ನಿಗಾ ವಹಿಸಬೇಕು, ಒಂದು ವೇಳೆ ಕುಟುಂಬದ ಇನ್ನಿತರ ಸದಸ್ಯರು ಇದೇ ಕೊಠಡಿಯಲ್ಲಿ ಉಳಿಯುವ ಅಗತ್ಯಬಿದ್ದಲ್ಲಿ ಇಬ್ಬರ ನಡುವೆ ಕನಿಷ್ಠ ೧ ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಸೋಪ್, ನೀರು ಅಥವಾ ಸ್ಯಾನಿಟೈಸರ್ ನಿಂದ ಆಗಿಂದಾಗ್ಗೆ ಕೈಗಳನ್ನು ಶುಚಿಗೊಳಿಸಬೇಕು, ಸೋಂಕಿತರನ್ನು ಮನೆಯಲ್ಲಿಯೂ ಎಲ್ಲಿಯೂ ಹೋಗದಂತೆ ನಿರ್ಬಂಧಿಸಬೇಕು ಎಂದು ಹೇಳಿದೆ.
ಯಾವಾಗಲೂ ಸರ್ಜಿಕಲ್ ಮಾಸ್ಕ್ ಧರಿಸಬೇಕು, ೬-೮ ಗಂಟೆಗಳಿಗೊಮ್ಮೆ ಮಾಸ್ಕ್ ಗಳನ್ನು ಬದಲಾವಣೆ ಮಾಡಬೇಕು, ಬಳಸಲಾದ ಮಾಸ್ಕ್ ಗಳನ್ನು ವಿಲೇವಾರಿ ಮಾಡಬೇಕು, ಸೋಂಕಿತರು ಅಥವಾ ಅವರನ್ನು ಉಪಚರಿಸಿದವರು ಬಳಸಿದ ಮಾಸ್ಕ್ ಗಳನ್ನು ಬೆಂಕಿಯಲ್ಲಿ ಸುಟ್ಟುಹಾಕಬೇಕು ಅಥವಾ ಆಳವಾದ ಮಣ್ಣಿನಲ್ಲಿ ಹೂಳಬೇಕು ಎಂದು ಸೂಚಿಸಲಾಗಿದೆ.
ಸೋಂಕಿನ ಲಕ್ಷಣ ಕಂಡುಬಂದವರು ಮನೆಯಲ್ಲಿರುವ ಹಿರಿಯರು, ಗರ್ಭಿಣಿಯರು, ಮಕ್ಕಳು ಮತ್ತು ಅಸ್ತಮಾ, ಮಧುಮೇಹ ಮತ್ತಿತರ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಂದ ದೂರ ಇರಬೇಕು, ಮದುವೆ, ಸಮಾರಂಭಗಳಲ್ಲಿ ಭಾಗವಹಿಸಬಾರದು, ಕುಡಿಯುವ ನೀರಿನ ಲೋಟಗಳು, ಊಟದ ತಟ್ಟೆ, ಟವಲ್, ಹಾಸಿಗೆ ಇನ್ನಿತರ ವಸ್ತುಗಳನ್ನು ಮನೆಯಲ್ಲಿರುವ ಇತರರೊಂದಿಗೆ ಹಂಚಿಕೊಳ್ಳಬಾರದು, ಪ್ರತ್ಯೇಕ ಮನೆಯಲ್ಲಿಟ್ಟು ನಿಗಾ ವಹಿಸಲು ಕುಟುಂಬದಲ್ಲಿನ ಒಬ್ಬ ವ್ಯಕ್ತಿಯನ್ನು ಮಾತ್ರ ನಿಯೋಜಿಸಬೇಕು ಎಂದಿದೆ.
ಅಂತವರು ಹಸ್ತಲಾಘವ ಮಾಡಬಾರದು, ವಿಲೇವಾರಿ ಮಾಡುವಂತಹ ಕೈಗವಸುಗಳನ್ನು ಕೈಗಳಿಗೆ ಹಾಕಿಕೊಳ್ಳಬೇಕು, ಗ್ಲೌಸ್ ಗಳನ್ನು ತೆಗೆದ ನಂತರ ಸೋಪ್ ಮತ್ತು ನೀರಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು, ಜ್ವರ, ನೆಗಡಿ, ಕೆಮ್ಮು ಮತ್ತಿತರ ಲಕ್ಷಣ ಕಂಡುಬಂದಲ್ಲಿ ಅಂತಹವರನ್ನು ವೈದ್ಯರ ಪರೀಕ್ಷೆ ವರದಿ ಬರುವವರೆಗೂ ೧೪ ದಿನಗಳ ಕಾಲ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಿಸಿ ನಿಗಾ ವಹಿಸಬೇಕು ಎಂದು ಹೇಳಿದೆ. ಕೊರೋನಾ ಸೋಂಕಿನ ಬಗ್ಗೆ ಮಾಹಿತಿಗಾಗಿ ಈಗಾಗಲೇ ಇರುವ ೧೦೪ ಸಹಾಯವಾಣಿ ಜೊತೆಗೆ ೦೮೦-೪೬೮೪೮೬೦೦ ಮತ್ತೊಂದು ಸಹಾಯವಾಣಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತೆರೆದಿದೆ.