ನವದೆಹಲಿ, ಮಾ 24, ಕೊರೋನಾ ವೈರಸ್ ಸವಾಲನ್ನು ನಿಭಾಯಿಸುವಲ್ಲಿ ಮಾಧ್ಯಮಗಳ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದು,
ವೈರಸ್ ಹರಡುವುದನ್ನು ನಿಭಾಯಿಸುವಲ್ಲಿ ಮಾಧ್ಯಮಗಳು ನಿರಂತರವಾಗಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ಮಾಡಿದ್ದಾರೆ.ನರೇಂದ್ರ ಮೋದಿ ಅವರು ಇಂದು ಮುದ್ರಣ ಮಾಧ್ಯಮದ 20ಕ್ಕೂ ಹೆಚ್ಚು ಪತ್ರಕರ್ತರು ಮತ್ತು ಪ್ರಮುಖರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಹನ್ನೊಂದು ವಿಭಿನ್ನ ಭಾಷೆಗಳನ್ನು ಪ್ರತಿನಿಧಿಸುವ ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಾಧ್ಯಮಗಳ ಪತ್ರಕರ್ತರು ಹದಿನಾಲ್ಕು ಸ್ಥಳಗಳಿಂದ ಪ್ರತಿನಿಧಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.
ದೇಶದ ಮೂಲೆ ಮೂಲೆಗೂ ಮಾಹಿತಿ ಒದಗಿಸುವಂತಹ ಪ್ರಶಂಸಾರ್ಹ ಪಾತ್ರವನ್ನು ಮಾಧ್ಯಮಗಳು ನಿರ್ವಹಿಸುತ್ತಿವೆ. ಮಾಧ್ಯಮಗಳ ಜಾಲವು ಭಾರತದ ಉದ್ದಗಲಕ್ಕೆ ನಗರಗಳು ಮತ್ತು ಹಳ್ಳಿಗಳಿಗೆ ವ್ಯಾಪಿಸಿದೆ ಎಂದು ಅವರು ಹೇಳಿದರು. ಇದರಿಂದಾಗಿ ಕೋವಿಡ್ - 19 ಸವಾಲನ್ನು ಎದುರಿಸಲು ಮತ್ತು ಆ ಬಗ್ಗೆ ಸೂಕ್ತ ಮಾಹಿತಿಯನ್ನು ತಳಮಟ್ಟದಲ್ಲಿ ಹರಡಲು ಮಾಧ್ಯಮದ ಪಾತ್ರ ಹೆಚ್ಚುಮಹತ್ವದ್ದಾಗಿದೆ ಎಂದರು.ಪತ್ರಿಕೆಗಳು ಅಪಾರ ವಿಶ್ವಾಸಾರ್ಹತೆ ಹೊಂದಿವೆ. ಒಂದು ಪ್ರದೇಶದ ಸ್ಥಳೀಯ ಪುಟದ ಸುದ್ದಿಯನ್ನು ಜನರು ವ್ಯಾಪಕವಾಗಿ ಓದುತ್ತಾರೆ. ಆದ್ದರಿಂದ ಈ ಪುಟದಲ್ಲಿ ಲೇಖನಗಳ ಮೂಲಕ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವುದು ಕಡ್ಡಾಯವಾಗಿದೆ ಎಂದು ಅವರು ಹೇಳಿದರು. ಪರೀಕ್ಷಾ ಕೇಂದ್ರಗಳು ಎಲ್ಲಿವೆ? ಯಾರು ಪರೀಕ್ಷೆಗೆ ಒಳಗಾಗಬೇಕು? ಪರೀಕ್ಷೆಗಾಗಿ ಯಾರನ್ನು ಸಂಪರ್ಕಿಸಬೇಕು? ಮತ್ತು ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು ಹೇಗೆ? ಎಂದು ಜನರಿಗೆ ತಿಳಿಸುವುದುಅತ್ಯಗತ್ಯವಾಗಿದೆ. ಈ ಮಾಹಿತಿಯನ್ನು ಪತ್ರಿಕೆಗಳು ಮತ್ತು ಅವುಗಳ ವೆಬ್ ಸೈಟ್ ಗಳು ಹಂಚಿಕೊಳ್ಳಬೇಕು ಎಂದು ಪ್ರಧಾನಿ ಹೇಳಿದರು.ಲಾಕ್ ಔಟ್ ಸಮಯದಲ್ಲಿ ಅಗತ್ಯ ವಸ್ತುಗಳು ಲಭ್ಯವಾಗುವ ಸ್ಥಳದಂತಹ ಮಾಹಿತಿಯನ್ನು ಪ್ರಾದೇಶಿಕ ಪುಟಗಳಲ್ಲಿ ಹಂಚಿಕೊಳ್ಳಬೇಕು. ಸರ್ಕಾರ ಮತ್ತು ಜನರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುವಂತೆ ಮತ್ತು ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ನಿರಂತರವಾಗಿ ಫೀಡ್ ಬ್ಯಾಕ್ ನೀಡುವಂತೆ ಮೋದಿ ಮಾಧ್ಯಮಗಳನ್ನು ಕೋರಿದರು.
ಸಾಮಾಜಿಕ ಅಂತರದ ಮಹತ್ವವನ್ನು ಅವರು ಒತ್ತಿ ಹೇಳಿದರು, ಇದರ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವಂತೆ, ರಾಜ್ಯಗಳ ನಿರ್ಧಾರದ ಬಗ್ಗೆ ಜನರಿಗೆ ತಿಳಿಸಬೇಕು. ಅಂತಾರಾಷ್ಟ್ರೀಯ ದತ್ತಾಂಶಗಳ ಮೂಲಕ ಮತ್ತು ಇತರದೇಶಗಳ ಬಗೆಗಿನ ಮಾಹಿತಿಯನ್ನು ವೈರಸ್ ಹರಡುವಿಕೆಯಪರಿಣಾಮವನ್ನು ಪತ್ರಿಕೆಗಳಲ್ಲಿ ಪ್ರಮುಖವಾಗಿ ತಿಳಿಸುವಂತೆ ಅವರು ಮಾಧ್ಯಮವನ್ನು ಕೇಳಿಕೊಂಡರು.
ಜನರ ಹೋರಾಟದ ಮನೋಭಾವವನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ; ನಿರಾಶಾವಾದ, ನಕಾರಾತ್ಮಕತೆ ಮತ್ತು ವದಂತಿಗಳ ಹರಡುವಿಕೆಯನ್ನು ನಿಭಾಯಿಸುವುದು ಮುಖ್ಯವಾಗಿದೆ ಎಂದು ಪ್ರಧಾನಿ ಒತ್ತಿಹೇಳಿದರು.
ಕೋವಿಡ್ 19 ರ ಪರಿಣಾಮವನ್ನು ನಿಭಾಯಿಸಲು ಸರ್ಕಾರ ಬದ್ಧವಾಗಿದೆ ಎಂದು ನಾಗರಿಕರಿಗೆ ಭರವಸೆ ನೀಡಬೇಕಾಗಿದೆ. ಪರಿಣಾಮಕಾರಿಯಾಗಿ ಸಂವಹನ ನಡೆಸುವಲ್ಲಿ ಮತ್ತು ದೇಶವನ್ನು ಮುನ್ನಡೆಸುವಲ್ಲಿ ಪ್ರಧಾನಿಯವರು ವಹಿಸಿರುವ ಪಾತ್ರವನ್ನು ಮುದ್ರಣ ಮಾಧ್ಯಮದ ಪತ್ರಕರ್ತರು ಮತ್ತು ಪ್ರಮುಖರು ಶ್ಲಾಘಿಸಿದರು.
ಸ್ಪೂರ್ತಿದಾಯಕ ಮತ್ತು ಸಕಾರಾತ್ಮಕ ಕಥೆಗಳನ್ನು ಪ್ರಕಟಿಸಬೇಕು. ಈ ಗಂಭೀರ ಸವಾಲನ್ನು ಎದುರಿಸಲು ಒಟ್ಟಾಗುವ ಅವರ ಸಂದೇಶವನ್ನು ಇಡೀ ರಾಷ್ಟ್ರವು ಅನುಸರಿಸಿದೆ ಎಂದರು. ಮುದ್ರಣ ಮಾಧ್ಯಮದ ವಿಶ್ವಾಸಾರ್ಹತೆಯನ್ನು ಬಲಪಡಿಸಿದ್ದಕ್ಕಾಗಿ ಅವರು ಪ್ರಧಾನಿಯವರಿಗೆ ಧನ್ಯವಾದ ಅರ್ಪಿಸಿದರು.
ದುರ್ಬಲ ವರ್ಗಗಳೆಡೆ ಮಾಧ್ಯಮದವರ ಸಾಮಾಜಿಕ ಜವಾಬ್ದಾರಿ ಅನನ್ಯ. ನಮ್ಮ ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಸಾಮಾಜಿಕ ಒಗ್ಗಟ್ಟು ಸುಧಾರಿಸುವುದು ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು.ಸರ್ಕಾರದ ಸಕ್ರಿಯ ಮತ್ತು ಶ್ರೇಣೀಕೃತ ಪ್ರತಿಕ್ರಿಯೆಯ ಬಗ್ಗೆ ಮಾಹಿತಿಯನ್ನು ನೀಡುವ ಮೂಲಕ ಭೀತಿಹರಡುವುದನ್ನು ತಡೆಗಟ್ಟಿದ್ದಕ್ಕಾಗಿ ಆರೋಗ್ಯ ಮತ್ತು ಕುಟುಂಬಕಲ್ಯಾಣ ಸಚಿವಾಲಯದ ಕಾರ್ಯದರ್ಶಿಯವರುಇದೇ ಸಂದರ್ಭದಲ್ಲಿ ಪತ್ರಕರ್ತರಿಗೆ ಧನ್ಯವಾದಗಳನ್ನು ತಿಳಿಸಿದರು.ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರು ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸಂವಾದದಲ್ಲಿ ಭಾಗವಹಿಸಿದ್ದರು.