ಕೊರೊನಾ ಲಾಕ್ ಡೌನ್ : ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆಯತ್ತ ಗಮನ ಹರಿಸುವಂತೆ ರಾಷ್ಟ್ರಗಳಿಗೆ ಗ್ಯುಟೆರಸ್ ಆಗ್ರಹ

ವಿಶ್ವಸಂಸ್ಥೆ, ಏ 6,ವಿಶ್ವಾದ್ಯಂತ ಕೊರೊನಾ ವೈರಾಣು ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಜನರು ತಮ್ಮ ತಮ್ಮ ಮನೆಗಳಲ್ಲಿಯೇ ಬಂಧಿತರಾಗಬೇಕಾಗಿರುವ ಸಂದರ್ಭದಲ್ಲಿ ಮಹಿಳೆಯರ ಮೇಲಿನ ಶೋಷಣೆಗಳು ಹೆಚ್ಚುತ್ತಿದ್ದು ಈ ಬಗ್ಗೆ ಗಮನಹರಿಸುವಂತೆ ವಿಶ್ವ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೋ ಗ್ಯುಟೆರಸ್ ಎಲ್ಲ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ. ಕೊರೊನಾ ನಿಗ್ರಹಕ್ಕೆ ಲಾಕ್ ಡೌನ್ , ಕ್ವಾರಂಟೈನ್ ಅಗತ್ಯವಾದರೂ ಇದು ಮಹಿಳೆಯರು ಅನಗತ್ಯ ಹಿಂಸೆಗೆ ಒಳಗಾಗುವಂತೆಯೂ ಮಾಡಿದೆ. ಪತಿ ಮತ್ತವರ ಮನೆಯವರ ಕಿರುಕುಳ ಅನುಭವಿಸುತ್ತಿರುವ ಮಹಿಳೆಯರು ಅಲ್ಲಿಂದ ಹೊರಬರಲೂ ಆಗದೇ ದೂರ ನೀಡಲೂ ಆಗದೇ ಕೌಟುಂಬಿಕ ಹಿಂಸೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಅಂಶವಾಗಿದೆ. ಕಳೆದೆರಡು ವಾರಗಳಲ್ಲಿ ವಿಶ್ವಾದ್ಯಂತ ಆರ್ಥಿಕ ಮತ್ತು ಸಾಮಾಜಿಕ ಒತ್ತಡ, ಭೀತಿಗಳು ಹೆಚ್ಚಿದ್ದು ಇದು ಕೌಟುಂಬಿಕ ಹಿಂಸೆಗೆ ಕಾರಣವಾಗಿದೆ. ಅನೇಕ ರಾಷ್ಟ್ರಗಳಲ್ಲಿ ಮಹಿಳೆಯರು ದೂರು ನೀಡುವ ಕರೆಗಳು ಹೆಚ್ಚಾಗಿವೆ. ಆದಾಗ್ಯೂ ಅನೇಕ ಮಹಿಳೆಯರು ಕರೆಯನ್ನೂ ಮಾಡಲಾಗದೇ ಅತಂತ್ರದಲ್ಲಿ ಸಿಲುಕಿದ್ದಾರೆ ಎಂದು ಗ್ಯುಟೆರಸ್ ಆತಂಕ ವ್ಯಕ್ತಪಡಿಸಿದ್ದಾರೆ.   ಕೌಟುಂಬಿಕ ಹಿಂಸೆಯ ಸಮಸ್ಯೆ ನಿವಾರಣೆಗೆ ಆನ್ ಲೈನ್ ಸೇವೆ ಮತ್ತು ನಾಗರಿಕ ಸಮಾಜಿಕ ಸಂಸ್ಥೆಗಳ ಸೇವೆಗೆ ಹೆಚ್ಚು ಬಂಡವಾಳ ಹೂಡುವಂತೆ ಸಹ ಅವರು ಸರ್ಕಾರಗಳನ್ನು ಆಗ್ರಹಿಸಿದ್ದಾರೆ.ಚೀನಾದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಿರುವವರ ಸಂಖ್ಯೆಯೂ ಹೆಚ್ಚಿದೆ ಎಂದು ವರದಿಯಾಗಿದೆ. ಜಾಗತಿಕವಾಗಿ 12 ಲಕ್ಷಕ್ಕೂ ಜನರಿಗೆ ಸೋಂಕು ತಗುಲಿದ್ದು 69 ಸಾವಿರಕ್ಕೂ ಹೆಚ್ಚು ಜನರು ಸೋಂಕಿಗೆ ಬಲಿಯಾಗಿದ್ದಾರೆ. ಸುಮಾರು 2,60,000 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.