ನವದೆಹಲಿ, ಮಾ ೨೬, ಜಗತ್ತಿನೆಲ್ಲೆಡೆಯಂತೆ ಭಾರತ ಸಹ ಕೊರೊನಾ ವೈರಸ್ ಭೀತಿಯಿಂದ ತಲ್ಲಣಗೊಂಡಿದ್ದು, ದೇಶದಲ್ಲಿ ಟೆಲಿಮೆಡಿಸಿನ್ ಸೇವೆಗಳನ್ನು ಒದಗಿಸಲು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಪ್ರಕ್ರಿಯೆ ವೀಡಿಯೊ ಕಾನ್ಫರೆನ್ಸಿಂಗ್, ದೂರವಾಣಿ ಸಂಭಾಷಣೆ ಅಥವಾ ಸಂದೇಶಗಳ ಮೂಲಕ ವೈದ್ಯರು, ರೋಗಿಗಳಿಗೆ ವೈದ್ಯಕೀಯ ಸಲಹೆಯನ್ನು ನೀಡಲು ಅನುವು ಮಾಡಿಕೊಡುತ್ತದೆ. ಭಾರತದಂತಹ ಬೃಹತ್ ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಟೆಲಿಮೆಡಿಸಿನ್ ಹೆಚ್ಚು ನೆರವಾಗುವ ನಿರೀಕ್ಷೆಯಿದೆ. ಚೀನಾದಲ್ಲಿ ಆಸ್ಪತ್ರೆಗಳು ರೋಗಿಗಳಿಂದ ಕಿಕ್ಕಿರಿದ ಸಮಯದಲ್ಲಿ ಟೆಲಿಮೆಡಿಸನ್ ಮೂಲಕ ವೈದ್ಯಕೀಯ ಸೇವೆ ಕಲ್ಪಿಸಿದ್ದರು.
ದೇಶದಲ್ಲಿ ಕೊರೊನಾ ವೈರಸ್ ಕಾರಣದಿಂದ ಜನರು ತಮ್ಮ ಮನೆಗಳಿಗೆ ಈಗ ಸೀಮಿತಗೊಂಡಿದ್ದಾರೆ. ಇನ್ನೂ ದೂರ ದೂರದ ಪ್ರದೇಶಗಳಿಗೆ ವೈದ್ಯಕೀಯ ಸೇವೆ ನೀಡುವುದು ಒಂದು ಸವಾಲಾಗಿದೆ. ಈ ಹಿನ್ನಲೆಯಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ದೂರದಲ್ಲಿರುವ ರೋಗಿಗಳಿಗೆ ಚಿಕಿತ್ಸೆ ಕಲ್ಪಿಸುವ ವೈದ್ಯ ವಿಧಾನವನ್ನು ಟೆಲಿಮೆಡಿಸಿನ್ ವೈದ್ಯಕೀಯ ವಿಧಾನ ಎನ್ನುತ್ತಾರೆ. ಕೊರೊನಾದಂತಹ ಸಾಂಕ್ರಾಮಿಕ ಭೀತಿ ಹಿನ್ನಲೆಯಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಇತರರಿಗೆ ರೋಗಿಯಿಂದ ಸೋಂಕು ಹಬ್ಬಿಸುವುದನ್ನು ತಪ್ಪಿಸಬಹುದು. ಇದಲ್ಲದೆ, ಹೆಚ್ಚಿನ ಜನರು ತುರ್ತು ಸಂದರ್ಭದಲ್ಲಿ ತ್ವರಿತವಾಗಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ. ಸೀಮಿತ ಸಂಖ್ಯೆಯ ವೈದ್ಯರು ಹೆಚ್ಚು ಮಂದಿಗೆ ಸೇವೆ ಕಲ್ಪಿಸಬಹುದು.
ಕೊರೊನಾ ಹಿನ್ನೆಲೆಯಲ್ಲಿ ದೇಶ ವದಂತಿಗಳು ಹರಡುತ್ತಿವೆ. ಕೊರೊನಾವೈರಸ್ ತಗುಲದಂತೆ ರಕ್ಷಣೆ ಪಡೆಯಲು ಮಲೇರಿಯಾ ನಿಯಂತ್ರಣಕ್ಕೆ ಬಳಸಬಹುದಾದ ಔಷಧಿಗಳನ್ನು ಬಳಸಬಹುದು ಎಂಬ ವದಂತಿಯಿದೆ. ಟೆಲಿಮೆಡಿಸಿನ್ ಮೂಲಕ ಇಂತಹ ಅವಾಂತರಗಳನ್ನು ತಡೆಯಬಹುದು. ಟೆಲಿಮೆಡಿಸಿನ್ ವೈದ್ಯಕೀಯ ಸೇವೆ ಒದಗಿಸಲು ನೋಂದಾಯಿತ ವೈದ್ಯರು ಮಾತ್ರ ಅರ್ಹರು. ರೋಗಿಗೆ ತಂತ್ರಜ್ಞಾನ ಸೇವೆ ಸೂಕ್ತವೇ ಅಥವಾ ನೇರ ವೈದ್ಯಕೀಯ ಚಿಕಿತ್ಸೆ ಕಲ್ಪಿಸಬೇಕೇ? ಎಂಬುದನ್ನು ಈ ವಿಧಾನದಲ್ಲಿ ವೈದ್ಯರು ನಿರ್ಧರಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ, ವೈದ್ಯರು, ರೋಗಿಗೆ ಸಂಬಂಧಿಸಿದ ವಿವರಗಳು ಪರಸ್ಪರ ತಿಳಿದಿರಬೇಕು. ಟೆಲಿಮೆಡಿಸಿನ್ ಅನ್ನು ವೀಡಿಯೊ, ಆಡಿಯೋ ಮತ್ತು ಫೋನ್ ಸಂದೇಶಗಳ ರೂಪದಲ್ಲಿಯೂ ನೀಡಬಹುದು. ಔಷಧಿಗಳನ್ನು ಸೂಚಿಸಲು ಪ್ರಸ್ಕ್ರಿಪ್ಷನ್ ಶಿಫಾರಸ್ಸು ಮಾಡಲು ವೈದ್ಯರಿಗೆ ರೋಗಿಯ ವಯಸ್ಸು ಖಚಿತವಾಗಿರಬೇಕು.