ವಾಷಿಂಗ್ಟನ್, ಏ 16,ಕೊರೊನಾ ವೈರಾಣು ಸೋಂಕು ವ್ಯಾಪಿಸಿರುವ ಕಾರಣ 100 ಕ್ಕೂ ಹೆಚ್ಚು ರಾಷ್ಟ್ರಗಳು ತುರ್ತು ನಿಧಿ ನೀಡುವಂತೆ ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ ಮಾಡಿವೆ ಎಂದು ಐಎಮ್ಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಗಿಯಾರ್ಗಿವಾ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ತುರ್ತು ಹಣ ಕೋರಿ ನೂರಕ್ಕೂ ಹೆಚ್ಚು ರಾಷ್ಟ್ರಗಳಿಂದ ಮನವಿಗಳು ಬಂದಿದ್ದು ಅವುಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದೇವೆ. ಈಗಾಗಲೇ 20 ಕ್ಕೂ ಹೆಚ್ಚು ದೇಶಗಳಿಗೆ ಹಣಕಾಸು ನೆರವು ಅನುಮೋದಿಸಲ್ಪಟ್ಟಿದೆ ಎಂದರು.
ತಕ್ಷಣದ 100 ಶತಕೋಟಿ ಡಾಲರ್ ನೆರವು ನೀಡಲು ತುರ್ತು ಸೌಲಭ್ಯಗಳನ್ನು ಪಡೆಯುವ ಅವಕಾಶವನ್ನು ದ್ವಿಗುಣಗೊಳಿಸಿರುವುದಾಗಿಯೂ ಅವರು ಹೇಳಿದ್ದಾರೆ. ತಕ್ಷಣದ ಅಗತ್ಯಗಳಿಗಾಗಿ ಹಣಕಾಸು ಒದಗಿಸಲು ಐಎಮ್ಎಫ್ ಕಾರ್ಯಕಾರಿ ಮಂಡಳಿ ಚರ್ಚೆ ನಡೆಸಲಿದೆ. ರಾಷ್ಟ್ರಗಳು ಹೆಚ್ಚಿನ ನೆರವು ಪಡೆಯಬಹುದಾದ ವಿಶೇಷ ಅಧಿಕಾರವನ್ನು ಹೇಗೆ ಬಳಸಬಹುದು ಎಂಬ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಅವರು ಹೇಳಿದರು.ಬಹುವಾಗಿ ಪೀಡಿತವಾಗಿರುವ ರಾಷ್ಟ್ರಗಳಿಗೆ ಹೆಚ್ಚುವರಿ ನೆರವು ನೀಡಲು ಅಂತಾರಾಷ್ಟ್ರೀಯ ಸಮುದಾಯ ಹೆಚ್ಚಿನ ಪ್ರಯತ್ನ ಮಾಡಬೇಕು. ತುರ್ತು ಆರೋಗ್ಯ ಅಗತ್ಯಗಳಿಗೆ ಹಣಕಾಸು ಹೊಂದಿಸಿಕೊಳ್ಳಲು ಅವಕಾಶ ನೀಡಿ ಆರ್ಥಿಕ ಬಿಕ್ಕಟ್ಟು ತಗ್ಗಿಸಲು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ಈ ಸೋಂಕಿನ ವಿರುದ್ಧದ ಯಾರೊಬ್ಬರ ಹೋರಾಟ ಕೂಡ ಪ್ರತಿಯೊಬ್ಬರ ಹೋರಾಟವಾಗಿದೆ. ಹಿಂದೆಂದಿಗಿಂತಲೂ ಹೆಚ್ಚಾಗಿ ಇದೀಗ ಕೋವಿಡ್ ಬಿಕ್ಕಟ್ಟು ಎದುರಿಸಲು ಒಗ್ಗಟ್ಟು ಹೆಚ್ಚು ಅಗತ್ಯವಾಗಿದೆ ಎಂದರು.1930 ರ ಮಹಾಕುಸಿತದ ನಂತರ 2020 ರಲ್ಲಿ ಜಾಗತಿಕ ಆರ್ಥಿಕತೆ ಶೇ 3 ಕ್ಕೆ ಇಳಿಕೆಯಾಗಲಿದೆ ಎಂದು ವಿಶ್ವ ಆರ್ಥಿಕ ನೋಟ ವರದಿ ನೀಡಿದ ನಂತರ ಐಎಮ್ಎಫ್ ಈ ಹೇಳಿಕೆ ನೀಡಿದೆ.