ನವದೆಹಲಿ, ಏಪ್ರಿಲ್ 28,ನೀತಿ ಆಯೋಗದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರಿಗೆ ಮಂಗಳವಾರ ಕೊವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಇಲ್ಲಿನ ಇಡೀ ಕಟ್ಟಡಕ್ಕೆ ಬೀಗ ಹಾಕಲಾಗಿದೆ.‘ನೀತಿ ಭವನದಲ್ಲಿ ಕೆಲಸ ಮಾಡುವ ಉದ್ಯೋಗಿಗೆ ಸೋಂಕು ದೃಢಪಟ್ಟಿರುವ ವಿಷಯವನ್ನು ಇಂದು ಬೆಳಿಗ್ಗೆ 9 ಗಂಟೆಗೆ ಅಧಿಕಾರಿಗಳಿಗೆ ತಿಳಿಸಲಾಗಿದೆ.’ ಎಂದು ನೀತಿ ಆಯೋಗ ಟ್ವಿಟರ್ ನಲ್ಲಿ ತಿಳಿಸಿದೆ.ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳಂತೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ.
ಮುಂಜಾಗ್ರತಾ ಕ್ರಮವಾಗಿ ಇಡೀ ಕಟ್ಟಡವನ್ನು ಯಾವುದೇ ಉದ್ಯೋಗಿ ಪ್ರವೇಶಿಸದಂತೆ ಮುಚ್ಚಲಾಗಿದೆ. ಕಟ್ಟಡದಲ್ಲಿ ಸೋಂಕು ನಿರೋಧಕ ಸಿಂಪಡಣೆ ಮತ್ತು ಶುದ್ಧೀಕರಣ ಕಾರ್ಯ ನಡೆಯುತ್ತಿದೆ. ಸೋಂಕು ತಗುಲಿರುವ ವ್ಯಕ್ತಿಯ ಸಂಪರ್ಕಗಳ ಬಗ್ಗೆ ಕೇಳಲಾಗಿದ್ದು, ತಾನಾಗಿಯೇ ಸಂಪರ್ಕತಡೆಯಲ್ಲಿರುವಂತೆ ಉದ್ಯೋಗಿಗೆ ಸೂಚಿಸಲಾಗಿದೆ ಎಂದು ಆಯೋಗ ಹೇಳಿದೆ. ದೇಶದಲ್ಲಿ ಕಳೆದ 12 ತಾಸಿನಲ್ಲಿ ಸೋಂಕಿನಿಂದ 48 ಜನರು ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 1,000 ಸಮೀಪಿಸುತ್ತಿದ್ದು, ಸದ್ಯ ಸಾವಿನ ಸಂಖ್ಯೆ 934ರಷ್ಟಿದೆ. ಪ್ರಕರಣಗಳ ಸಂಖ್ಯೆ ಸದ್ಯ 29,435 ರಷ್ಟಿದ್ದು, ಸಾವಿನ ಪ್ರಮಾಣ ಶೇ 23.3 ರಷ್ಟಿದೆ.