ಸಮನ್ವಯ ಶಿಕ್ಷಣ ಕಾರ್ಯಾಗಾರ ಯಶಸ್ವಿ: ಸಮುದಾಯ ಸದಸ್ಯರು, ಅಧಿಕಾರಿಗಳಿಗೆ ತರಬೇತಿ

ಸಮನ್ವಯ ಶಿಕ್ಷಣ ಕಾರ್ಯಾಗಾರ ಯಶಸ್ವಿ: ಸಮುದಾಯ ಸದಸ್ಯರು, ಅಧಿಕಾರಿಗಳಿಗೆ ತರಬೇತಿ Coordination Education Workshop a success: Training for community members, officials

ಬೆಳಗಾವಿ 13:  ಎಸ್‌ಬಿಐ ಫೌಂಡೇಶನ್ ಸಹಯೋಗದಲ್ಲಿ ಸಂಸ್ಥೆಯು ಬೆಳಗಾವಿ ಜಿಲ್ಲೆಯ ಏಳು ತಾಲೂಕುಗಳ 38ಕ್ಕೂ ಹೆಚ್ಚು ಶಾಲೆಗಳಲ್ಲಿ ಸಮಗ್ರ ಶಿಕ್ಷಣದಡಿ ದಿವ್ಯಾಂಗ ಮಕ್ಕಳ ವೈದ್ಯಕೀಯ ತಪಾಸಣೆ, ಸಾಧನ-ಸಲಕರಣೆಗಳ ವಿತರಣೆ, ಪಠ್ಯಪುಸ್ತಕಗಳ ವಿತರಣೆ ಹಾಗೂ ಶಾಲಾ ದುರಸ್ತಿ ಸೇರಿದಂತೆ ಒಟ್ಟು 10 ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಸಮರ್ಥನಂ ಅಂಗವಿಕಲರ ಸಂಸ್ಥೆಯ ಶಾಖಾ ಮುಖ್ಯಸ್ಥ ಅರುಣ್ ಕುಮಾರ್ ಎಂ.ಜಿ. ಅವರು ವಿವರಿಸಿದರು.  ಸಮರ್ಥನಂ ಅಂಗವಿಕಲರ ಸಂಸ್ಥೆ ಮತ್ತು ಎಸ್‌ಬಿಐ ಫೌಂಡೇಶನ್ ಸಂಯೋಗದಲ್ಲಿ ನ. 13ರಂದು ಬೈಲಹೊಂಗಲ ತಾಲೂಕು ಪಂಚಾಯತ ಸಭಾ ಭವನದಲ್ಲಿ ಯಶಸ್ವಿಯಾಗಿ ಜರುಗಿದ ಬೈಲಹೊಂಗಲ ಮತ್ತು ಕಿತ್ತೂರು ತಾಲೂಕಿನ ಸಮುದಾಯ ಸದಸ್ಯರು ಮತ್ತು ಸರಕಾರಿ ಅಧಿಕಾರಿಗಳಿಗೆ ಸಮನ್ವಯ ಶಿಕ್ಷಣ ಕುರಿತು ಕಾರ್ಯಾಗಾರದಲ್ಲಿ ಪಾಲ್ಗೊಂಡು ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು. ಅವರು ಸಮುದಾಯ ಮುಖ್ಯಸ್ಥರಿಗೆ ಬೆಳಗಾವಿ ನಗರದ ಆರ್‌ಟಿಓ ವೃತ್ತದಲ್ಲಿರುವ ಜೀಜಾಮಾತಾ ಶಾಲಾ ಆವರಣದಲ್ಲಿರುವ ವಿಶೇಷ ತರಬೇತಿ ಮತ್ತು ವಿಶೇಷ ಚೇತನ ಮಕ್ಕಳಿಗಾಗಿ ನಿರ್ಮಿಸಲಾದ 'ರಿಸೋರ್ಸ್‌ ಸೆಂಟರ್'ಗೆ ಭೇಟಿ ನೀಡುವಂತೆ ವಿನಂತಿಸಿದರು. ಅಲ್ಲದೆ, ದಿವ್ಯಾಂಗರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಉನ್ನತ ಶಿಕ್ಷಣ, ವೃತ್ತಿಪರ ತರಬೇತಿ, ಕ್ರೀಡೆ, ಸಂಗೀತ ಕಾಲೇಜು ಮತ್ತು ವಿವಿಧ ಡಿಪ್ಲೋಮಾ ತರಬೇತಿಗಳ ಬಗ್ಗೆಯೂ ಮಾಹಿತಿ ನೀಡಿದರು. ಈ ಸೌಲಭ್ಯಗಳ ಸದುಪಯೋಗ ಪಡೆಯಲು ತಮ್ಮ ವ್ಯಾಪ್ತಿಯ ಅಭ್ಯರ್ಥಿಗಳನ್ನು ಸಂಸ್ಥೆಗೆ ಕಳುಹಿಸುವುದರ ಮೂಲಕ ಸಹಕರಿಸುವಂತೆ ಅವರು ಕರೆ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸಹಶಿಕ್ಷಕ ವಿಠ್ಠಲ ಯಂಕಚಿ ಅವರು ಸಮನ್ವಯ ಶಿಕ್ಷಣದ ಮಹತ್ವವನ್ನು ವಿವರಿಸಿದರು. ಸಮನ್ವಯ ಶಿಕ್ಷಣವೆಂದರೆ ಶಿಕ್ಷಣದಲ್ಲಿ ಯಾವುದೇ ಬಗೆಯ ದಿವ್ಯಾಂಗರು ಆಗಿದ್ದರೂ ಕೂಡ ತಾರತಮ್ಯವಿಲ್ಲದೆ ಸಾಮಾನ್ಯ ಮಕ್ಕಳಂತೆ ಪರಿಗಣಿಸಿ ಶಿಕ್ಷಣ ವ್ಯವಸ್ಥೆಯಲ್ಲಿ ಸರಿದೂಗಿಸಿಕೊಂಡು ಹೋಗಲು ಸರ್ಕಾರವು 2000 ಇಸವಿಯಿಂದ ಮಾಡಿದ ಹೊಸ ಪ್ರಯತ್ನದ ಫಲವಾಗಿದೆ. ಇದರ ಅನ್ವಯ ಸರ್ವ ಶಿಕ್ಷಣ ಅಭಿಯಾನವನ್ನು ಜಾರಿಗೆ ತಂದು, ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ಆಯಾ ಶಾಲೆಗಳಲ್ಲಿ ಇರುವ ದಿವ್ಯಾಂಗ ಮಕ್ಕಳ ವಿಶೇಷ ಕಲಿಕೆಗೆ ಅನುಕೂಲ ಮಾಡಲು ನೇಮಿಸಲಾಗಿದೆ. ಈ ಯೋಜನೆಯು ಪ್ರತಿಯೊಬ್ಬರನ್ನು ತಲುಪಬೇಕಾದರೆ ಸಮರ್ಥನಂ ಅಂಗವಿಕಲರ ಸಂಸ್ಥೆಯ ಜನತೆಗೆ ತಾವುಗಳು ಕೈಜೋಡಿಸಿ, ಸಂಸ್ಥೆಯಿಂದ ದಿವ್ಯಾಂಗರಿಗೆ ಸಿಗುತ್ತಿರುವ ಸೌಲಭ್ಯಗಳು ತಮ್ಮ ವ್ಯಾಪ್ತಿಯ ಮಕ್ಕಳಿಗೆ ದೊರಕಿಸುವಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತೆ ಕಿವಿ ಮಾತು ಹೇಳಿದರು. ಸಮರ್ಥನಂ ಸಂಸ್ಥೆಯ ಬೆಳಗಾವಿ ಶಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ದೀಪಾ ಇಟಿಯವರು, ಅಂಧರು ತಮ್ಮ ಶಿಕ್ಷಣ ಮತ್ತು ದಿನಚರಿಯಲ್ಲಿ ತಾಂತ್ರಿಕ ಸಾಧನಗಳನ್ನು ಹೇಗೆ ಬಳಸುತ್ತಾರೆ ಎಂಬುದರ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿ ನೀಡಿದರು. ಎಸ್‌ಬಿಐಎಫ್ ಸಂಚಾಲಕ ಶಾಹಿಧಾ ಮುಲ್ತಾನಿ ಅವರು ಸಮನ್ವಯ ಶಿಕ್ಷಣದ ಮಹತ್ವ, ಅಂಗವಿಕಲತೆ, ಅದರ ಕಾರಣಗಳು ಮತ್ತು ತಡೆಗಟ್ಟುವ ಕ್ರಮಗಳ ಕುರಿತು ಹಾಗೂ 21 ಬಗೆಯ ಅಂಗವಿಕಲತೆಗಳ ಕುರಿತು ವಿಸ್ತೃತ ಮಾಹಿತಿಯನ್ನು ನೀಡಿದರು. ಶ್ರವಣ ಮತ್ತು ಮಾತಿನ ಸಮಸ್ಯೆಗಳಿರುವ ವಿದ್ಯಾರ್ಥಿಗಳಿಗೆ ಶ್ರವಣ ಸಾಧನಗಳನ್ನು ಸಹ ವಿತರಿಸಲಾಯಿತು. ಕಾರ್ಯಕ್ರಮವನ್ನು ಬೈಲಹೊಂಗಲ ಸಹಾಯಕ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಆರತಿ ಭರಮನವರ ಅವರು ಉದ್ಘಾಟಿಸಿದರು.