ಸಹಕಾರ ಸಂಘದ ಅಭಿವೃದ್ಧಿಗೆ ಸದಸ್ಯರ ಸಹಕಾರ ಅಗತ್ಯ: ಸಂಗಮೇಶ ಛಾಯಗೋಳ

ಸಹಕಾರ ಸಂಘದ ಅಭಿವೃದ್ಧಿಗೆ ಸದಸ್ಯರ ಸಹಕಾರ ಅಗತ್ಯ: ಸಂಗಮೇಶ ಛಾಯಗೋಳ  Cooperation of members is necessary for the development of cooperative societies: Sangamesh Chhayago

ದೇವರಹಿಪ್ಪರಗಿ 20: ಸಹಕಾರ ಸಂಘದ ಶ್ರೇಯೋಭಿವೃದ್ಧಿಗೆ ಸರ್ವ ಸದಸ್ಯರ ಸಹಕಾರ ಅಗತ್ಯವಾಗಿದ್ದು.ಸಂಘಗಳ ಪಾರದರ್ಶಕ ಆಡಳಿತದಿಂದ ಪ್ರಗತಿ ಹೊಂದಲು ಸಾಧ್ಯ. ಜನರ ಸಹಕಾರ ಪಡೆದುಕೊಂಡು ಪ್ರಾಮಾಣಿಕ, ನಿಷ್ಠೆ ಮತ್ತು ಹೊಸತನ ರೂಢಿಸಿಕೊಂಡು ವಿಶೇಷ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಲು ಮುಂದಾಗಿದೆ ಎಂದು ಕೋರವಾರ ಪಿಕೆಪಿಎಸ್ ಅಧ್ಯಕ್ಷ ಸಂಗಮೇಶ ಛಾಯಗೋಳ ಹೇಳಿದರು.  

ತಾಲೂಕಿನ ಕೋರವಾರ ಗ್ರಾಮದ ವಿವಿಧೋದ್ದೇಶ ಸಹಕಾರಿ ಸಂಘದ 2025-26ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ಜನರ ಸಹಕಾರ ಪಡೆದುಕೊಂಡು ಪ್ರಾಮಾಣಿಕ ನಿಷ್ಠೆ ಮತ್ತು ಹೊಸತನ ರೂಡಿಸಿಕೊಂಡು ವಿಶೇಷ ಸೌಲಭ್ಯಗಳನ್ನು ಗ್ರಾಹಕರಿಯ ಒದಗಿಸುವ ಮೂಲಕ ಕೇವಲ ಸಾಲ ಸೌಲಭ್ಯ ಕೊಡಲು ಸೀಮಿತವಾಗದೆ ಸೇವಾ ಮನೋಭಾವದಿಂದ ಕೆಲಸ ಮಾಡುವ ಮೂಲಕ ಸಾರ್ವಜನಿಕರಿಗೆ ಒಳ್ಳೆಯ ಸೇವೆ ಒದಗಿಸಲು ಬದ್ಧರಾಗಿದ್ದೇವೆ. ರೈತರಿಗಾಗಿ ನೂತನವಾಗಿ ಹೊಸ ಸಾಲ, ಸಾಮಾನ್ಯ ಸೇವಾ ಕೇಂದ್ರ(ಸಿ.ಎಸ್‌.ಸಿ), 2 ಎಕರೆ ಜಾಗದಲ್ಲಿ ಸುಮಾರು 500-1000 ಮೆಟ್ರಿಕ್ ಟನ್ ಸಾಮರ್ಥ್ಯದ ಗೋಡಾವನ, ಶುದ್ಧ ಹಾಗೂ ತಂಪಾದ ಕುಡಿಯುವ ನೀರಿನ ಘಟಕ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ, ನಿವೃತ್ತ ಯೋಧರು, ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲಾ ವಾರ್ಷಿಕ ಪ್ರಶಸ್ತಿ ಪಡೆದ ಪತ್ರಕರ್ತ, ವೈದ್ಯಕೀಯ ಶಿಕ್ಷಣ  ಹಾಗೂ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಗೌರವಿಸುವ ಮೂಲಕ ಸಾಮಾಜಿಕ ಕಾರ್ಯ ನಿರ್ವಹಿಸುವ ಮೂಲಕ ಈ ಬಾರಿ ಸಿಂದಗಿ ತಾಲೂಕಿನ ಅತ್ಯುತ್ತಮ ಪಿಕೆಪಿಎಸ್ ಎಂದು ಪ್ರಶಸ್ತಿ ಪಡೆದುಕೊಳ್ಳಲಾಗಿದೆ, ತಮ್ಮೆಲ್ಲರ ಸಹಕಾರ ಮುಖ್ಯ ಎಂದು ಹೇಳಿದರು.  

ಸಮಾರಂಭದ ಉದ್ಘಾಟಕರಾಗಿ ಆಗಮಿಸಿದ ವಿಜಯಪುರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಕೆ.ಕೆ.ಚವ್ಹಾಣ ಅವರು ಮಾತನಾಡಿ, ಗ್ರಾಮದ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡುವ ಮೂಲಕ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಿ, ಅನುಮಾನ, ಅವಮಾನ ಮೆಟ್ಟಿ ನಿಂತಾಗ ಸನ್ಮಾನ ಸಿಗುತ್ತದೆ. ಶಿಕ್ಷಣದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ, ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಗನವಾಡಿ ಕಟ್ಟಡ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಭರ್ತಿ ಮಾಡಲಾಗಿದೆ, ಗ್ರಾಮದಲ್ಲಿ ಅತಿ ಹೆಚ್ಚು ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಿದ್ದು, ಅದರ ಸದುಪಯೋಗವಾಗಲಿ. ಸಹಕಾರ ಮನೋಭಾವದಿಂದ ಸಂಘ ಗ್ರಾಹಕರಿಗೆ, ಸರ್ಕಾರದಿಂದ ಸಿಗುವ ಸಹಾಯ, ಸೌಲಭ್ಯಗಳನ್ನು ಒದಗಿಸಬೇಕು ಎಂದು ಶುಭ ಹಾರೈಸಿದರು.  

ಅಧ್ಯಕ್ಷತೆಯನ್ನು ವಿಜಯಪುರ ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹಣಮಂತ್ರಾಯಗೌಡ ಪಾಟೀಲ ವಹಿಸಿದ್ದರು. ಸ್ಥಳೀಯ ಚೌಕಿಮಠದ ಮುರುಘೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿದ್ದು ವಿಶೇಷವಾಗಿತ್ತು.  ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಎಂ. ಎಂ.ಕಾಟೆ, ಅಧಿಕಾರಿಗಳಾದ ಜೆ.ಎಸ್‌. ಹಿಪ್ಪರಗಿ, ಎಂ.ಎಸ್‌.ರಾಠೋಡ, ಮಾಜಿ ತಾಪಂ ಮಲ್ಲನಗೌಡ ಬಿರಾದಾರ, ಮುಖಂಡರುಗಳಾದ ಶರಣಗೌಡ ಪಾಟೀಲ, ಸಂಗಪ್ಪ ಗೌಡ ಬಿರಾದಾರ,ಗ್ರಾ.ಪಂ ಅಧ್ಯಕ್ಷರ ಪ್ರತಿನಿಧಿ ರಫೀಕ್ ಬ್ಯಾಕೋಡ ಸೇರಿದಂತೆ ಸಂಘದ ಸರ್ವ ನಿರ್ದೇಶಕ ಮಂಡಳಿ, ಸಿಇಒ, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.