ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಉದ್ದೇಶಗಳ ಸಾಧನೆಗೆ ಭಾರತ-ಜಪಾನ್ ನಡುವೆ ಸಹಕಾರ

ಬ್ಯಾಂಕಾಕ್, ನ 4:   ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಪ್ರಗತಿ ಉದ್ದೇಶವನ್ನು ಸಾಧಿಸಲು ಭಾರತ ಮತ್ತು ಜಪಾನ್ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಿವೆ.    ಆಸಿಯಾನ್ ಸಂಬಂಧಿತ ಶೃಂಗಸಭೆಯ ಸಂದರ್ಭದಲ್ಲಿ ಸೋಮವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೆ ನಡುವಿನ ದ್ವಿಪಕ್ಷೀಯ ಸಭೆಯಲ್ಲಿ ಈ ಕುರಿತು ಸಮಮತಕ್ಕೆ ಬರಲಾಗಿದೆ.     'ಇಬ್ಬರೂ ಪ್ರಧಾನ ಮಂತ್ರಿಗಳು ನಿಯಮ ಆಧಾರಿತ ಆದೇಶದ ಆಧಾರದ ಮೇಲೆ ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶದ ಬಗೆಗಿನ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ' ಎಂದು ವಿದೇಶಾಂಗ ಸಚಿವಾಲಯದ ಪತ್ರಿಕಾ ಹೇಳಿಕೆ ತಿಳಿಸಿದೆ.  ಸೋಮವಾರ ನಡೆದ ಸಭೆ ಕಳೆದ ನಾಲ್ಕು ತಿಂಗಳಲ್ಲಿ ಮೋದಿ ಮತ್ತು  ಅಬೆ ನಡುವಿನ ಮೂರನೇ ದ್ವಿಪಕ್ಷೀಯ ಸಭೆಯಾಗಿದೆ.    ಉಭಯ ನಾಯಕರ ಕೊನೆಯ ಸಭೆ ಸೆಪ್ಟೆಂಬರ್ನಲ್ಲಿ ರಷ್ಯಾದ ವ್ಲಾಡಿವೋಸ್ಟಾಕ್ನಲ್ಲಿ ನಡೆದಿತ್ತು.  ಜಪಾನ್ ಚಕ್ರವರ್ತಿಯ ಇತ್ತೀಚಿನ ಪಟ್ಟಾಭಿಷೇಕಕ್ಕಾಗಿ ಪ್ರಧಾನಿ ಮೋದಿ ಅಬೆ ಅವರನ್ನು ಅಭಿನಂದಿಸಿದರು. ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಗವಹಿಸಿದ್ದನ್ನು ಪ್ರಧಾನಿ ಅಬೆ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.   ಮುಂದಿನ ತಿಂಗಳು ಭಾರತ-ಜಪಾನ್ ವಾರ್ಷಿಕ ಶೃಂಗಸಭೆಗೆ ಅಬೆ ಅವರನ್ನು ಭಾರತಕ್ಕೆ ಸ್ವಾಗತಿಸಲು ಉತ್ಸುಕತೆಯಿಂದ ಎದುರು ನೋಡುತ್ತಿರುವುದಾಗಿ ಮೋದಿ ಹೇಳಿದರು.  ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಲು ಮುಂಬರುವ ವಾರ್ಷಿಕ ಶೃಂಗಸಭೆ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.