ಎಸ್ಸೆಸ್ಸೆಲ್ಸಿ ಮಕ್ಕಳ ಜೊತೆ ಸಂವಾದ: ಬದ್ಧತೆ, ಸಿದ್ಧತೆಯೊಂದಿಗೆ ಪರೀಕ್ಷೆ ಎದುರಿಸಲು ಸಲಹೆ
ಚಿಕ್ಕಪಡಸಲಗಿ 30: ಪ್ರಸ್ತುತ 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ತಯಾರಿಗೆ ಮಕ್ಕಳು ಈಗಿಂದಲೇ ಮಾನಸಿಕವಾಗಿ ಸಿದ್ದತೆಗೊಳ್ಳಬೇಕು.ಆ ದಿಸೆಯಲ್ಲಿ ಎಲ್ಲ ಎಸ್ಸೆಸ್ಸೆಲ್ಸಿ ಮಕ್ಕಳನ್ನು ಪರೀಕ್ಷಾ ಮುಖ್ಯ ವಾಹಿನಿಗೆ ತರಲು ಶಿಕ್ಷಕರು ಪ್ರಯತ್ನಿಸಬೇಕಲ್ಲದೇ ಫಲಿತಾಂಶ ಸುಧಾರಣೆಗೆ ನಿರಂತರ ಶ್ರಮ ವಹಿಸಬೇಕು ಎಂದು ಬಾಗಲಕೋಟೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ವಿಜ್ಞಾನ ವಿಷಯ ಪರೀವೀಕ್ಷಕ ಎಂ.ಎಸ್.ನ್ಯಾಮಗೌಡ ಸಲಹೆಯಿತ್ತರು.
ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಗೆ ಶುಕ್ರವಾರ ಅನೀರೀಕ್ಷಿತ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಪರೀಶೀಲಿಸಿ ಅವರು ಮಾತನಾಡಿದರು. ಎಸ್ಸೆಸ್ಸೆಲ್ಸಿ ಮಕ್ಕಳ ಜೊತೆಗೆ ಪರೀಕ್ಷಾ ಪೂರ್ವ ತಯಾರಿ ಹಾಗೂ ಪಠ್ಯ ವಿಷಯ ಕುರಿತು ಸಂವಾದ ನಡೆಸಿದ ಅವರು, ಪರೀಕ್ಷೆಗೆ ಸಿದ್ದರಾಗಲು ಈಗಿನಿಂದಲೇ ಸಕಲ ಓದಾಭ್ಯಾಸದ ತಯಾರಿ ಮಾಡಿಕೊಳ್ಳಬೇಕು. ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ಸನ್ನದ್ಧರಾಗಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು. ಮಕ್ಕಳ ಕಲಿಕಾ ಹಾಗೂ ಫಲಿತಾಂಶ ಪ್ರಗತಿಗೆ ಶಿಕ್ಷಕರು ಒತ್ತು ನೀಡಬೇಕು. ಈ ಬಾರಿ ಗ್ರೇಡ್ ಅಂಕಗಳಿಲ್ಲ.ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಿವೆ. ಕಟ್ಟುನಿಟ್ಟಾಗಿ ಪರೀಕ್ಷೆಗಳು ಜರುಗಲಿವೆ.ಇದನ್ನು ಮಕ್ಕಳು ಹಾಗೂ ಶಿಕ್ಷಕರು ಸೂಕ್ಷ್ಮತೆಯಿಂದ ಗಮನಿಸಿ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಲು ಮುಂದಾಗಬೇಕು ಎಂದರು.
ಹತ್ತನೇ ತರಗತಿ ವಿಜ್ಞಾನ ವಿಷಯದ ಪಾಠ ಪ್ರವಚನ ನಡೆಸಿದ ನ್ಯಾಮಗೌಡ, ಮಕ್ಕಳಿಗೆ ಹಲ ಪ್ರಶ್ನೆಗಳನ್ನು ಕೇಳಿ ಸಮರ್ಕ ಉತ್ತರ ಪಡೆದರು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರ ಬಗ್ಗೆ ವಿಶೇಷ ನಿಗಾವಹಿಸಿ ಪ್ರಗತಿ ಕಂಡುಕೊಳ್ಳಬೇಕೆಂದು ಶಿಕ್ಷಕ ಬಳಗಕ್ಕೆ ಸಲಹೆ ನೀಡಿದರು. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಪಾಸಾಗಬೇಕೆಂಬ ಮನೋಬಲದ ಇಚ್ಚಾಶಕ್ತಿ ಮಕ್ಕಳಲ್ಲಿ ಮೂಡಬೇಕು. ಫಲಿತಾಂಶ ವೃದ್ಧಿಗೆ ಮಕ್ಕಳ ಕಲಿಕಾಸಕ್ತಿ ಹಾಗೂ ಶಿಕ್ಷಕರು ಪಠಿಸುವ ಗುಣಮಟ್ಟದ ಉತ್ತಮ ಪಾಠ, ಬೋಧನೆಯೇ ಕಾರಣ. ಆ ನಿಟ್ಟಿನಲ್ಲಿ "ಕಲಿಕಾ-ಬೋಧನಾ" ಇವೆರಡು ಉತ್ಕಟತೆಯಿಂದ ಸಾಗಬೇಕು. ಪರೀಕ್ಷಾ ವಿಶೇಷ ಕಾಳಜಿಯ ಪರಿಕಲ್ಪನೆ ಗುರು-ಶಿಷ್ಯರಲ್ಲಿ ಮೂಡಿಬರಬೇಕು. ಮಕ್ಕಳು ತಮ್ಮ ಮುಂದಿನ ಶೈಕ್ಷಣಿಕ ಭವಿಷ್ಯಕ್ಕಾಗಿ ಅನುದಿನ, ಅನುಕ್ಷಣ ಓದು,ಬರಹದಲ್ಲಿ ತಲ್ಲಿನರಾಗಬೇಕು.ಕನ್ನಡ, ಇಂಗ್ಲೀಷ್, ಹಿಂದಿ, ಗಣಿತ,ವಿಜ್ಞಾನ, ಸಮಾಜ ವಿಜ್ಞಾನ ಈ ಆರು ಪಠ್ಯವಿಷಯದ ಒಡನಾಟದಲ್ಲಿ ಮಿಂದೇಳಬೇಕು. ಅದ್ಯಯನದ ಬೆಸುಗೆಯಲ್ಲಿ ಮಿನುಗಿ ಪ್ರೌಢ ಹಂತದ ಶಿಕ್ಷಣದಲ್ಲಿ ನಮ್ಯತೆ ಸಾಧನಾ ಸವಿಭಾವ ಕಾಣಬೇಕು ಎಂದರು. ಉತ್ತಮ ಚಿಂತನೆ, ಕಠಿಣ ಪರಿಶ್ರಮ,ಪ್ರಾಮಾಣಿಕ ನಿಷ್ಟೆ, ಬದ್ದತೆ ಪಕ್ವದ ಶ್ರದ್ಧೆಯಿದ್ದರೆ ಪರೀಕ್ಷೆಯಲ್ಲಿ ಯಶಸ್ವಿ ಸಫಲತೆ ನಿಚ್ಚಳವಾಗಿ ಕಾಣಬಹುದು.ಆ ಪ್ರಯುಕ್ತ ಪಾಸಿಂಗ್ ಪ್ಯಾಕೇಜ್ ಮಾಡಿ.ಸೂಕ್ತ ಮಾರ್ಗದರ್ಶನ ತೋರಿ. ಒಳ್ಳೆಯ ಫಲಿತಾಂಶಕ್ಕೆ ಬೆನ್ನು ಹತ್ತಿ. ಮಕ್ಕಳ ವೈಯುಕ್ತಿಕ ಅಭ್ಯಾಸದ ಚಟುವಟಿಕೆಗಳನ್ನು ಗಹಿಸಿ. ಪ್ರತಿ ವಿದ್ಯಾರ್ಥಿ ಪಾಸಾಗಬೇಕು ಎಂದು ದೃಢವಾದ ಟಾಗೆ9ಟ್ ಹೊಂದಿ. ಮಕ್ಕಳಿಗೆ ಹಿಂದಿನ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಶಿಕ್ಷಕರು ನೀಡಿ ಮಕ್ಕಳಲ್ಲಿ ಪರೀಕ್ಷೆ ದುಗುಡ ಹೋಗಲಾಡಿಸಲು ಪ್ರಯತ್ನಿಸಬೇಕು ಎಂದರು.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಕ್ರಿಯಾಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲು ಕಡ್ಡಾಯವಾಗಿ ಯತ್ನಿಸಿ.ಪರೀಕ್ಷಾ ಫಲಿತಾಂಶವೇ ನಮಗೆಲ್ಲ ಮುಖ್ಯ ಮಾನದಂಡ.ಇದನ್ನು ಮನಗಂಡು ಅಚ್ಚುಕಟ್ಟಾಗಿ ಸಮನ್ವಯತೆಯಿಂದ ಕಾಯಕ ಗೈದು ಪರೀಕ್ಷೆಯಲ್ಲಿ ಮಕ್ಕಳು ಉತ್ತಮ ಸಾಧನೆ ಮಾಡಲು ಪ್ರೇರೇಪಿಸಿ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ಗಣಿತ ಲೆಕ್ಕ ಸೇರಿದಂತೆ ಎಲ್ಲ ವಿಷಯಗಳ ಬೋಧನೆ ಸರಳೀಕೃತವಾಗಿ ಮಕ್ಕಳ ಮನ ಮುಟ್ಟುವಂತೆ ನೋಡಿಕೊಳ್ಳಬೇಕು. ವಿಶೇಷ ಗುಂಪು ಅದ್ಯಯನ, ರಸಪ್ರಶ್ನೆದಂಥ ಚಟುವಟಿಕೆಗಳಲ್ಲಿ ಮಕ್ಕಳನ್ನು ಸಕ್ರಿಯವಾಗಿ ತೋಡಗಿಸಿಕೊಂಡು ಪ್ರೇರಿಪಿಸಬೇಕು.ಡಿಸೆಂಬರ್ ಬಳಿಕ ಪ್ರತಿ ವಿಷಯ ಪಾಠಗಳು ಪುನರಾವಲೋಕನವಾಗಲಿ. ನಿಮ್ಮದೇ ನವನಾವೀನ್ಯತೆ ಪಠ್ಯ ಸಾಹಿತ್ಯ ಬಳಸಿ ಮಕ್ಕಳಿಗೆ ಆಸಕ್ತಿದಾಯಕ ಜ್ಞಾನ ಧಾರೆ ಎರೆಯಿರಿ. ಪ್ರತಿಯೊಬ್ಬರೂ ಶಿಕ್ಷಕರು ನಿಮ್ಮ ವಿಷಯಕ್ಕೆ ಹಾಗೂ ಫಲಿತಾಂಶಕ್ಕೆ ಹೊಸಬೆಳಕಿನ ಸ್ಪರ್ಶ ನೀಡಬೇಕು. ಆ ಹಿನ್ನೆಲೆಯಲ್ಲಿ ಮಕ್ಕಳ ಭವಿಷ್ಯತ್ತಿನ ಏಳಿಗೆ ಚೈತನ್ಯಭರಿತವಾಗಿರಲು ಶಿಕ್ಷಣದ ಅಮೃತ ಸಿಂಚನ ಉಣಬಡಿಸಿ. ಅಂಥದೊಂದು ವಿಶೇಷತೆ ಮೂಡಿಸುವ ಹೊಣೆಗಾರಿಕೆ ಸಮಸ್ತ ಶಿಕ್ಷಕರ ಮೇಲಿದೆ. ಮಕ್ಕಳಿಗೆ ನಮ್ಮಿಂದ ಏನಾದರೂ ಉತ್ತಮ ಕೊಡುಗೆ ನೀಡಬೇಕು. ಆ ನಿಟ್ಟಿನಲ್ಲಿ ಶಿಕ್ಷಕ ಬಳಗದವರು ಸಂಕಲ್ಪ ಮಾಡಬೇಕೆಂದು ಕಿವಿಮಾತು ಹೇಳಿದರು.
ನಿತ್ಯ ಬೆಳಿಗಿನ ಜಾವ ಎಸ್ಸೆಸ್ಸೆಲ್ಸಿ ಮಕ್ಕಳ ಪೋಷಕರಿಗೆ ಪೋನ ಕರೆ ಮಾಡಲಾಗುತ್ತಿದೆ. ಮಕ್ಕಳನ್ನು ಎಬ್ಬಿಸಿ ಅಭ್ಯಾಸದಲ್ಲಿ ನಿರತರಾಗುವಂತೆ ಮುತುವರ್ಜಿ ವಹಿಸಬೇಕೆಂದು ಕೋರಲಾಗುತ್ತಿದೆ. ತಮ್ಮ ಶಿಕ್ಷಕರ ಕರೆಗೆ ಸ್ಪಂದಿಸಿ ಮಕ್ಕಳನ್ನು ಎಬ್ಬಿಸಿ ಅಭ್ಯಾಸ ಪ್ರಕ್ರಿಯೆಯಲ್ಲಿ ಪಾಲಕರು ಸಹಕಾರ ನೀಡುತ್ತಿದ್ದಾರೆ. ಶಾಲೆಯಲ್ಲಿ ಗುಂಪು ಅಭ್ಯಾಸ, ರಸಪ್ರಶ್ನೆ, ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಪಾಠ ಪ್ರವಚನ ನಡೆಸಲಾಗುತ್ತಿದೆ. ಮಕ್ಕಳ ಅಭ್ಯುದಯಕ್ಕೆ ಇಲ್ಲಿ ಕಾಳಜಿ ವಹಿಸಲಾಗಿದೆ ಎಂದು ಪ್ರಭಾರ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ ವಿಷಯ ಪರೀವೀಕ್ಷಕರಿಗೆ ಮಾಹಿತಿ ನೀಡಿದರು. ವಿಷಯ ಪರೀವೀಕ್ಷಕರಾದ ಎಂ.ಎಸ್.ನ್ಯಾಮಗೌಡ ಅವರನ್ನು ಮುಖ್ಯ ಶಿಕ್ಷಕ ಬಸವರಾಜ ಜಾಲೋಜಿ ಹಾಗೂ ಸಿಬ್ಬಂದಿಗಳು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು. ವಿಶ್ರಾಂತ ಹಿರಿಯ ಶಿಕ್ಷಕ ಬಸವರಾಜ ಜಾಲೋಜಿ, ಗುಲಾಬಚಂದ ಜಾಧವ, ಈರ್ಪ ದೇಸಾಯಿ, ಲೋಹಿತ ಮಿರ್ಜಿ, ಶ್ರೀಶೈಲ ಹುಣಶಿಕಟ್ಟಿ, ಸಹನಾ ಕಲ್ಯಾಣಿ (ಹತ್ತಳ್ಳಿ), ಪ್ರಮೀಳಾ ತೇಲಸಂಗ ಇತರರಿದ್ದರು.