ಸೃಜನಾತ್ಮಕ ಕಲೆಗಳಲ್ಲಿ ನಿರಂತರ ಅಧ್ಯಯನ ಅಗತ್ಯ: ಕೆ. ರಾಮಮೂರ್ತಿ ರಾವ್
Continuous study is essential in creative arts: K. Ramamurthy Rao
ಲೋಕದರ್ಶನ ವರದಿ
ಧಾರವಾಡ, ಸೆ.23: ಅಧ್ಯಯನಶೀಲತೆ ನಿರಂತರವಾಗಿರಬೇಕು. ನಿರಂತರ ಅಧ್ಯಯನದಿಂದ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಲು ಸಾಧ್ಯ. ಅದರಲ್ಲೂ ಭರತನಾಟ್ಯದಂತಹ ಶಾಸ್ತ್ರೀಯ ಕಲೆಗಳಲ್ಲಿ ಗುರುಗಳ ಮಾರ್ಗದರ್ಶನದೊಂದಿಗೆ ಅಧ್ಯಯನ, ಸಂಶೋಧನೆ, ಹೊಸ ಆವಿಷ್ಕಾರ ಹಾಗೂ ವಿಚಾರಶಕ್ತಿ ಬೆಳೆಸಿಕೊಳ್ಳುವುದರಿಂದ ಉತ್ತಮ ಕಲಾವಿದರಾಗಲು ಸಾಧ್ಯ ಎಂದು ಮೈಸೂರಿನ ನೂಪುರ ಕಲಾವಿದರ ಸಾಂಸ್ಕೃತಿಕ ಟ್ರಸ್ಟ್ನ ನಿರ್ದೇಶಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಪ್ರೊ. ಕೆ. ರಾಮಮೂರ್ತಿ ರಾವ್ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ನಡೆದ ಕ್ವಿಂಟೀನ್-16ನೇ ಆವೃತ್ತಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉತ್ತಮ ಗುರುವಿನ ಅಗತ್ಯ ವಿದ್ಯಾರ್ಥಿಗಳಿಗೆ ಇರುವಂತೆಯೇ, ಉತ್ತಮ ಶಿಷ್ಯನ ಅಗತ್ಯ ಗುರುವಿಗೂ ಇರುತ್ತದೆ. ಇಂದಿನ ಕಾರ್ಯಕ್ರಮ ಗುರು-ಶಿಷ್ಯರ ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮುಂಬೈನ ನಾಟ್ಯ ಚೂಡಾಮಣಿ ಬಿರುದಾಂಕಿತ ಪಾಯಲ್ ನೃತ್ಯ ನಾಟ್ಯ ನಿಕೇತನದ ತಮನ್ನಾ ಮುಡೇರ್ಶ್ವರ ಮಾತನಾಡಿ, ಶಿಷ್ಯ ಗುರುವನ್ನು ಮೀರಿದಾಗ ಗುರುವಿಗೆ ಸಿಗುವ ಸಂತೋಷಕ್ಕೆ ಬೆಲೆ ಕಟ್ಟಲಾಗದು ಎಂದರು.
ರತಿಕಾ ನೃತ್ಯ ನಿಕೇತನದ ಧಾರವಾಡ ಹಾಗೂ ಗೋಕಾಕದ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶಿಸಿದರು. ಪ್ರಸಾಧನ, ವೇಷಭೂಷಣ, ಹಿನ್ನೆಲೆ ಗಾಯನ, ಕೊಳಲು, ಮೃದಂಗ, ನಟುವಾಂಗ ಹಾಗೂ ಅಭಿನಯದೊಂದಿಗೆ ಶಿಸ್ತಿನಿಂದ ಮೂಡಿಬಂದ ಶಾಸ್ತ್ರೀಯ ನೃತ್ಯ ಪ್ರದರ್ಶನ ಗಮನ ಸೆಳೆಯಿತು.
ಯುವ ಸಮೂಹ ಇಂತಹ ಕಲೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಜೀವನದಲ್ಲಿ ಶಿಸ್ತು ಬೆಳೆಸಿಕೊಳ್ಳುವುದರ ಜೊತೆಗೆ ಗುರು-ಶಿಷ್ಯ ಪರಂಪರೆ ಮತ್ತು ಭಾರತೀಯ ಸಂಸ್ಕೃತಿಯ ಅರಿವು ಮೂಡುತ್ತದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ವಿದುಷಿ ನಾಗರತ್ನ ಹಡಗಲಿ ಮಾತನಾಡಿ, ಮಕ್ಕಳು ಕಲಿತ ವಿದ್ಯೆಯನ್ನು ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸುವುದೇ ಗುರುಗಳಿಗೆ ದೊರೆಯುವ ದೊಡ್ಡ ಕಾಣಿಕೆ. ಅದಕ್ಕಿಂತ ಉಳಿದ ಪ್ರಶಸ್ತಿ, ಬಿರುದು, ಗೌರವಗಳು ಗೌಣ ಎಂದರು.
‘ರಸಾರ್ಣವ ಗೋಪಾಲಂ’ ಕಾರ್ಯಕ್ರಮದಲ್ಲಿ ಕೃಷ್ಣನ ಬಾಲ, ಕಿಶೋರ ಹಾಗೂ ಪ್ರೌಢಾವಸ್ಥೆಯ ಸನ್ನಿವೇಶಗಳನ್ನು ರತಿಕಾ ನೃತ್ಯ ನಿಕೇತನದ ಧಾರವಾಡ ಹಾಗೂ ಗೋಕಾಕದ ವಿದ್ಯಾರ್ಥಿಗಳು ಮನೋಜ್ಞವಾಗಿ ಅಭಿನಯಿಸಿದರು.
ಕಾರ್ಯಕ್ರಮದಲ್ಲಿ ವಿದ್ವಾನ್ ರೋಹಿತ್ ಭಟ್ ಉಪ್ಪೂರು (ಹಾಡುಗಾರಿಕೆ), ವಿದ್ವಾನ್ ಪಂಚಮ ಉಪಾಧ್ಯಾಯ (ಮೃದಂಗ), ವಿದ್ವಾನ್ ನೀತಿಶ್ ಅಮ್ಮಣ್ಣಯ್ಯ (ಕೊಳಲು), ಡಾ. ಸಮತಾ ಗೌತಮ್, ವಿದುಷಿ ಜ್ಯೋತಿ, ವಿದುಷಿ ಸೃಷ್ಟಿ ವಿವೇಕ್ ಹಾಗೂ ಸಂತೋಷ ಮಹಾಲೆ ಸಹಕರಿಸಿದರು.
ಸ್ತುತಿ ಜೈನ್ ಸ್ವಾಗತಿಸಿದರು. ಜ್ಯೋತಿ ಹಾಗೂ ಪ್ರಗತಿ ಪರಿಚಯಿಸಿದರು. ವನಜಾಕ್ಷಿ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಶುಭದಾ, ಡಾ. ಶಶಿಧರ ನರೇಂದ್ರ, ವಿದುಷಿ ಸೀಮಾ ಕುಲಕರ್ಣಿ, ಡಾ. ನವಮಿ ಉಪಾಧ್ಯಾಯ, ವಾಣಿಶ್ರೀ, ನಾಗಲಿಂಗ ಮುರಗಿ, ನಾಗರಾಜ ಹಡಗಲಿ, ಪ್ರೊ. ರವೀಂದ್ರ, ಡಾ. ಸಂಜೀವ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ 