ಕೈರ್ ಚಂಡಮಾರುತದಿಂದ ರಾಜ್ಯದ ಕರಾವಳಿಯಲ್ಲಿ ಭಾರಿ ಮಳೆ ಮುಂದುವರಿಕೆ

ಮಂಗಳೂರು, ಅ 27:  ಕೈರ್ ಚಂಡಮಾರುತ ಓಮನ್ ದೇಶದ ಕಡೆ ಬೀಸಲಿದೆ ಎಂಬ ಹವಾಮಾನ ಮುನ್ಸೂಚನೆಗೆ ತದ್ವಿರುದ್ದವಾಗಿ ಅರಬ್ಬಿ ಸಮುದ್ರದಲ್ಲಿನ ಚಂಡಮಾರುತದಿಂದ ರಾಜ್ಯದ ಕರಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ ಮುಂದುವರೆದಿದ್ದು, ಬೆಳಕಿನ ಹಬ್ಬ ದೀಪಾವಳಿ ಈ ಪ್ರದೇಶದ ಜನರಿಗೆ ಮಬ್ಬುಕವಿದಂತಾಗಿದೆ.    

ಹಿಂದಿನ ಮುನ್ಸೂಚನೆಗಳಿಗೆ ತದ್ವಿರುದ್ಧವಾಗಿ ಹವಾಮಾನ ಇಲಾಖೆ ಶನಿವಾರ ಸಂಜೆ ತಡವಾಗಿ ಕೈರ್ ಚಂಡಮಾರುತ  ಮುಂದಿನ ಕೆಲವು ಗಂಟೆಗಳಲ್ಲಿ  ತೀವ್ರ ಬಿರುಗಾಳಿ ಸಹಿತ ಚಂಡಮಾರುತದ ಸ್ವರೂಪ ಪಡೆಯಲಿದೆ ಎಂದು ಮುನ್ನೆಚ್ಚರಿಕೆ ನೀಡಿತ್ತು.    ಕರಾವಳಿ ಕರ್ನಾಟಕದ ಅನೇಕ ಭಾಗಗಳಲ್ಲಿ ಮಧ್ಯಮದಿಂದ ಭಾರೀ ಮಳೆಯಾಗಲಿದ್ದು, ಅಲ್ಲಲ್ಲಿ ಚದುರಿದಂತೆ ಅತಿ ಹೆಚ್ಚು ಮಳೆಯಾಗಲಿದೆ ಎಂದು ಕರ್ನಾಟಕದ ಹವಾಮಾನ ಇಲಾಖೆ ವಿಭಾಗದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ. ಭಾನುವಾರವೂ ಮಳೆ ಮುಂದುವರಿಯುವ ಸಾಧ್ಯತೆ ಇದೆ.  

ಭಾರತೀಯ ಕರಾವಳಿ ಪಡೆ ನಿನ್ನೆ ಕಾರವಾರ ಮತ್ತು ಗೋವಾದ ಗಡಿಯಲ್ಲಿ ಸಮುದ್ರದಲ್ಲಿ ಸಿಲುಕಿದ್ದ ರಾಜ್ ಕಿರಣ್ ಮತ್ತು ಮಹೀಲ್ ದೋಣಿಗಳಲ್ಲಿದ್ದ 18 ಮೀನುಗಾರರನ್ನು ರಕ್ಷಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.     ಸಂಕಷ್ಟದಲ್ಲಿರುವ ಮೀನುಗಾರರ ಬಗ್ಗೆ ಮಾಹಿತಿ ಪಡೆದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಉತ್ತರ ಕನ್ನಡದ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದಾರೆ. 

ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು ಮೀನುಗಾರರು ಯಾವುದೇ ತೊಂದರೆಗಳನ್ನು ಎದುರಿಸದಂತೆ ಕ್ರಮ ತೆಗೆದುಕೊಳ್ಳಲು ಗೋವಾ ಮುಖ್ಯ ಕಾರ್ಯದರ್ಶಿಯೊಂದಿಗೆ  ಮಾತನಾಡಿದ್ದಾರೆ.   ರಕ್ಷಿಸಲ್ಪಟ್ಟ ಎಲ್ಲ ಮೀನುಗಾರರನ್ನು ಮಲ್ಪೆ ಮತ್ತು ಮಂಗಳೂರಿಗೆ ಕರೆ ತರಲಾಗಿದೆ. ಮಂಗಳೂರಿನಿಂದ ತೆರಳಿದ್ದ ಮಹೀಲ್ ದೋಣಿಯಲ್ಲಿದ್ದ ಒಂಬತ್ತು ಮಂದಿ ಮೀನುಗಾರರು ಶುಕ್ರವಾರ ಸಂಜೆಯಿಂದ ದೇವಗುಡ್ಡದಿಂದ 25 ನೌಕಾ ಮೈಲಿ ದೂರದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಕರಾವಳಿ ಪಡೆ ಕಮಾಂಡರ್ ದಸಿಲಾ ತಿಳಿಸಿದ್ದಾರೆ.   

ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಭತ್ತ ಬೆಳೆಯುವ ರೈತರು ಆತಂಕಕ್ಕೊಳಗಾಗಿದ್ದು, ಕಳೆದ ಶನಿವಾರದಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಬೆಳೆದು ನಿಂತಿರುವ ಬೆಳೆಗಳಿಗೆ ಹಾನಿಯಾಗುವುದರ ಜೊತೆಗೆ ಕೊಯ್ಲು ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಿದೆ.    

ದಕ್ಷಿಣ ಕನ್ನಡದಲ್ಲಿ 15,900 ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗಿದ್ದರೆ, ಉಡುಪಿಯಲ್ಲಿ 36,000 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡಲಾಗುತ್ತದೆ. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಭತ್ತದ ಬೆಳೆಗಾರರು ಸಾಮಾನ್ಯವಾಗಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಬೆಳೆ ಕೊಯ್ಲು ಮಾಡುತ್ತಾರೆ.   

ಓಮನ್ ಕಡೆಗೆ ಚಂಡಮಾರುತ ಬೀಸಲಿದೆ ಎಂಬ ಹವಾಮಾನ ಇಲಾಖೆ ಮುನ್ಸೂಚನೆಗೆ ವಿರುದ್ಧವಾಗಿ ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ  ಸಾಂಪ್ರದಾಯಿಕ ದೀಪಾವಳಿ ಆಚರಣೆ ಸಂಭ್ರಮ ಕಮರಿದೆ.