ಫ್ಲೋರೈಡ್ ಅಂಶದ ನೀರು, ಆಹಾರ ಸೇವನೆ ಆರೋಗ್ಯಕ್ಕೆ ಮಾರಕ: ಡಾ.ಬಾಬುರಡ್ಡಿ ಕೆಂಗಲಗುತ್ತಿ

Consumption of water and food with fluoride content is harmful to health: Dr. Baburaddy Kengalagutti

ಚಿಕ್ಕಪಡಸಲಗಿ (ತಾ: ಜಮಖಂಡಿ) 29: ಸೇವಿಸುವ ಆಹಾರ ಹಾಗೂ ಕುಡಿಯುವ ನೀರಿನಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಫ್ಲೋರೈಡ್‌ನ ಅಂಶ ಇದ್ದರೆ ಫ್ಲೋರೋಸಿಸ್ ವ್ಯಾಧಿ ಬಾಧಿಸಿ ದೇಹದ ಶರೀರಕ್ಕೆ ಕಂಟಕ ತರುತ್ತದೆ. ಭಾಗಶಃ ದೇಹದ ಹಲವಾರು ಭಾಗಗಳಲ್ಲಿ ಗಂಭೀರ ಸ್ವರೂಪದ ದುಷ್ಪರಿಣಾಮಗಳು ತಲೆದೋರುತ್ತವೆ. ಬಗೆಬಗೆಯ ಸಮಸ್ಯೆಗಳು ಉಲ್ಬಣಗೊಂಡು ನರಳಾಟದ ಯಾತನೆಯಲ್ಲಿ ಜೀವ, ಬದುಕು ಕಳೆಯುವಂತೆ ಮಾಡುತ್ತದೆ. ಕಾರಣ ಫ್ಲೋರೈಡ್ ಅಂಶವನ್ನು ಹೊಂದಿರುವ ನೀರು, ಆಹಾರ ಸೇವನೆ ಬಗ್ಗೆ ಯುವಜನತೆ ಬಹು ಜಾಗರೂಕತೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಜಿಲ್ಲಾ ಸಮಾಲೋಚಕ ಡಾ.ಬಾಬುರಡ್ಡಿ ಕೆಂಗಲಗುತ್ತಿ ಹೇಳಿದರು.      ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಜಿಲ್ಲಾ ಆಸ್ಪತ್ರೆ ಬಾಗಲಕೋಟೆ ಫ್ಲೋರೋಸಿಸ್ ಪ್ರಯೋಗಾಲಯ ಜಿಲ್ಲಾ ಸಮೀಕ್ಷಾ ಘಟಕದ ವತಿಯಿಂದ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟೆ ಇವರ ಆಶ್ರಯದಲ್ಲಿ ರಾಷ್ಟ್ರೀಯ ಫ್ಲೋರೋಸಿಸ್ ತಡೆ ಹಾಗೂ ನಿಯಂತ್ರಣ ಕುರಿತು ಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಸಾಮಾನ್ಯವಾಗಿ ಫ್ಲೋರೈಡ್ ಪ್ರಮಾಣವನ್ನು ಹೊಂದಿರುವ ಕುಡಿಯುವ ನೀರು, ಆಹಾರ ಜೊತೆಗೆ ಕೆಲವು ಓಷಧೀಯ ಸೇವನೆಯಿಂದ ಹಾಗೂ ಹೊಗೆ ಕಾರುವ ಕಾರ್ಖಾನೆಗಳ ಮಲಿನ ಧೂಳಿನಿಂದ ಮಾರಕ ಫ್ಲೋರೈಡ್ ದೇಹದೊಳಗೆ ಪ್ರವೇಶಿಸಿದರೆ ಇದರಿಂದ ಫ್ಲೋರೋಸಿಸ್ ಕಾಯಿಲೆ ಉಂಟಾಗುತ್ತದೆ. ಈ ರೋಗಕ್ಕೆ ಯಾವುದೇ ರೀತಿಯ ವಯೋಮಿತಿಗಳಿಲ್ಲ. ಕಾರಣ ರೋಗ ತಡೆಗಟ್ಟುವುದು ಇಂದಿನ ಅಗತ್ಯವಿದೆ. ಆ ದಿಸೆಯಲ್ಲಿ ಜನರಲ್ಲಿ ಮೂಡುವ ಆರೋಗ್ಯಕರ ಜಾಗೃತ ಮನಸ್ಸು, ವಿಚಾರಗಳೇ ಫ್ಲೋರೋಸಿಸ್ ಧಮನಕ್ಕೆ ಸೂಕ್ತ ಮದ್ದು ಎಂದರು.ಮೂಳೆಗಳ ನೋವು, ಕೀಲುಗಳ ಬಿಗಿತ ರೋಗದ ಆರಂಭಿಕ ಹಂತವಾಗಿದ್ದು ಎರಡನೇ ಹಂತದಲ್ಲಿ ವಿನಾಶಕಾರಿ ಫ್ಲೋರೋಸಿಸ್ ವ್ಯಾಧಿ ಗಂಭೀರತನದ ಆರೋಗ್ಯ ಸಮಸ್ಯೆ ಸೃಷ್ಟಿ ಮಾಡುತ್ತದೆ. ಇದೊಂದು ಮನುಕುಲಕ್ಕೆ ಮಾರಕ ಕಾಯಿಲೆಯಾಗಿದ್ದು ದೀರ್ಘಕಾಲದವರೆಗೆ ಕೀಲು, ಸ್ನಾಯುಗಳು, ಉದ್ದ ಮೊಳೆಗಳ ವಿಪರೀತ ನೋವು ಹಾಗೂ ಮೊಳೆಗಳ ಸವೇತ ಉಂಟುಮಾಡುವ ಮೂಲಕ ಹೀನಾಯ ಸ್ಥಿತಿಗೆ ತಂದೊಡ್ಡುತ್ತದೆ. ಇನ್ನೂ ಮೂರನೇ ಹಂತದಲ್ಲಿ  ಕತ್ತಿನ ಮೊಳೆ, ಬೆನ್ನಿನ ಮೊಳೆ, ಎಲುಬುಗಳ ಬಾಗುವಿಕೆ ಆರಂಭಿಸುತ್ತದೆ. ದೇಹದ ನರಗಳ ಸತ್ವ ಹಿಮ್ಮೆಟ್ಟಿಸಿ ವ್ಯಾಪಕ ತೊಂದರೆ, ತಾಪತ್ರಯ ಅನುಭವಿಸುವಂತೆ ನರಳಾಡಿಸುತ್ತದೆ. ಈ ವೇಳೆ ವಾಕರಿಕೆ, ವಾಂತಿ, ಅಜೀರ್ಣ, ಹೊಟ್ಟೆ ಉಬ್ಬರ, ನೋವು ಕಾಣಿಸುತ್ತದೆ. ಮನುಷ್ಯ ನಿಶ್ಯಕ್ತಿಗೆ ಒಳಗಾಗಿ ಪದೇಪದೇ ಮೂತ್ರ ವಿಸರ್ಜನೆಯಿಂದ ನಿತ್ರಾಣಾವಸ್ಥೆಯಲ್ಲಿ ಕೆಂಗಡುವಂತೆ ಮಾಡುತ್ತದೆ. ಈ ಮಾರಕ ಕಾಯಿಲೆಯಿಂದ ದೂರುಳಿಯಲು ಮೂತ್ರ ಪರೀಕ್ಷೆ ಹಾಗೂ ಸೇವಿಸುವ ನೀರಿನ ಪರೀಕ್ಷೆ ಮೂಲಕ ಫ್ಲೋರೋಸಿಸ್ ವ್ಯಾಧಿ ಬಗ್ಗೆ ಖಚಿತ ಪಡಿಸಿಕೊಳ್ಳಲು ಜನತೆ ಮುಂದಾಗಬೇಕು ಎಂದರು.      

ಕಾಯಿಲೆಗೆ ಮಕ್ಕಳೇ ಹೆಚ್ಚು ತುತ್ತು:  ಇಂದಿನ ಯುವ ಮಕ್ಕಳಲ್ಲಿ ದಂತ ಫ್ಲೋರೋಸಿಸ್ ಹೆಚ್ಚಾಗಿ ಕಂಡುಬರುತ್ತಿದೆ. ಸುಲಭವಾಗಿ ಈ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಹಲ್ಲುಗಳು ಆರೋಗ್ಯವಾಗಿದ್ದರೆ ನಾವು ಆರೋಗ್ಯವಾಗಿರಲು ಸಾಧ್ಯ. ಹಲ್ಲುಗಳ ಬಗ್ಗೆಯೂ ಸುರಕ್ಷಿತ ರಕ್ಷಣೆ ಕಾಪಾಡಿಕೊಳ್ಳಲು ಇಂದಿನ ಯುವಜನತೆ ಮುಂದಾಗಬೇಕು. ಫ್ಲೋರೈಡ್ ಅಂಶ ಅಧಿಕವಿರುವ ಆಹಾರ, ನೀರು ತ್ಯಜಿಸಬೇಕು ಎಂದರು.  ಅಗತ್ಯಕ್ಕಿಂತ ಅಲ್ಪ ಪ್ರಮಾಣದಲ್ಲಿ ಕ್ಯಾಲ್ಸಿಯಂ, ವಿಟಮಿನ್ ಸಿ ಸೇವಿಸುವ ಮಕ್ಕಳಲ್ಲಿ ಹಾಗೂ ವಯಸ್ಕರಲ್ಲಿ ಫ್ಲೋರೋಸಿಸ್ ತೀವ್ರತೆ ಕಾಡುತ್ತದೆ.  ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಕೈಪಂಪುಗಳ ಬಳಕೆಯಿಂದ ಈ ರೋಗಬಾಧೆ ಹೆಚ್ಚಾಗುತ್ತದೆ. ಕಾರಣ ಶುದ್ಧ ನೀರು ಹಾಗೂ ಹಾಲು, ಹಣ್ಣು ಹಂಪಲು, ತರಕಾರಿ ಸೇವನೆ ಅತ್ಯಗತ್ಯ. ಬೆಳ್ಳುಳ್ಳಿ, ಶುಂಠಿ, ಈರುಳ್ಳಿ, ಕ್ಯಾರೆಟ್, ಪರಂಗಿ ಹಣ್ಣು, ಗೆಣಸು, ಮೀನು, ಮೊಟ್ಟೆ ಶುದ್ಧ, ಮಾಂಸ ಸೇರಿದಂತೆ ತಾಜಾ ಆಹಾರ ಪದಾರ್ಥಗಳನ್ನು ಸೇವಿಸಿ ಆರೋಗ್ಯಕರ ಜೀವನ ಕಂಡುಕೊಳ್ಳಬಹುದು ಎಂದರು.      

ಚಿಕ್ಕಪಡಸಲಗಿ ಆಯುಷ್ಮಾನ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯಾಧಿಕಾರಿ ಆನಂದ ತೇಲಸಂಗ ಮಾತನಾಡಿ ಈ ರೋಗದಲ್ಲಿ ದಂತ ಫ್ಲೋರೋಸಿಸ್, ಮೂಳೆಗಳ ಫ್ಲೋರೋಸಿಸ್ ಹಾಗೂ ದೇಹದ ಇತರೇ ಭಾಗದ ಫ್ಲೋರೋಸಿಸ್ ಎಂದು ಮೂರು ವಿಭಾಗಗಳಿವೆ. ಇದನ್ನು ಮೂತ್ರ ಪರೀಕ್ಷೆ ಹಾಗೂ ಸೇವಿಸುವ ನೀರಿನ ಪರೀಕ್ಷೆ ಮೂಲಕ ಫ್ಲೋರೋಸಿಸ್ ಬಗ್ಗೆ ಖಚಿತಪಡಿಸಿಕೊಳ್ಳಬಹುದು. ಫ್ಲೋರೈಡ್ ರಹಿತ ಟೂತ್‌ಪೇಸ್ಟ್‌, ಬಾಯಿ ಸ್ವಚ್ಛ ದ್ರಾವಣಗಳನ್ನು ಬಳಸವುದರಿಂದ ಫ್ಲೋರೋಸಿಸ್ ಕಾಯಿಲೆ ತಡೆಗಟ್ಟಬಹುದು  ಎಂದರು.      ಪ್ರಭಾರ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ, ಆಶಾ ಕಾರ್ಯಕರ್ತೆ ಸಾವಿತ್ರಿ ನ್ಯಾಮಗೌಡ, ವಿಶ್ರಾಂತ ಹಿರಿಯ ಶಿಕ್ಷಕ ಬಸವರಾಜ ಅನಂತಪೂರ, ಶಿಕ್ಷಕ ಈರ​‍್ಪ ದೇಸಾಯಿ, ಜಿ.ಆರ್‌.ಜಾಧವ, ಲೋಹಿತ ಮಿರ್ಜಿ, ಕವಿತಾ ಅಂಬಿ, ಸಹನಾ ಕಲ್ಯಾಣಿ, ಪ್ರಮೀಳಾ ತೇಲಸಂಗ ಇತರರಿದ್ದರು.