ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವೈಫಲ್ಯ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು, ಸೆ 18    ಪ್ರವಾಹ ಹಾಗೂ ಬರಪೀಡಿತ ಪ್ರದೇಶಗಳಿಗೆ ನೆರವು ಒದಗಿಸುವಲ್ಲಿ  ರಾಜ್ಯ  ಸರ್ಕಾರ ವಿಫಲವಾಗಿದೆ ಹಾಗೂ ಜನರ ಸಂಕಷ್ಟಕ್ಕೆ ಸ್ಪಂದಿಸದೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿ ಬುಧವಾರ ಕೆಪಿಸಿಸಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. 

ವಿಧಾನಸೌಧ ಹಾಗೂ ವಿಕಾಸಸೌಧದ ಮಧ್ಯದ ಗಾಂಧಿ ಪ್ರತಿಮೆ ಬಳಿ ಪಕ್ಷದ ಮುಖಂಡರು, ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಧಿಕ್ಕಾರ ಕೂಗಿದರು. 

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸರ್ಕಾರಗಳ ವೈಫಲ್ಯ ಖಂಡಿಸಿ ಇಂದು ನಡೆಸಿರುವ ಧರಣಿ ಸಾಂಕೇತಿಕ ಮಾತ್ರ. ಸಂತ್ರಸ್ತರ ಸಂಕಷ್ಟಗಳಿಗೆ ಸ್ಪಂದಿಸದೇ ಇದ್ದಲ್ಲಿ ದೊಡ್ಡಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಸಂತ್ರಸ್ತರ ಬದುಕು ದುಸ್ತರವಾಗಿದೆ. ಹೀಗಾಗಿ ಸೆ. 24ರಂದು ಬೆಳಗಾವಿಯಲ್ಲಿ ಸರ್ಕಾರದ ವಿರುದ್ಧ ಸಂತ್ರಸ್ತರ ಜೊತೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು. 

ರಾಜ್ಯ ಸರ್ಕಾರ ನಿದ್ರಾವಸ್ಥೆಯಲ್ಲಿದೆ, ಒಂದು ತಿಂಗಳು ಸರ್ಕಾರದಲ್ಲಿ ಸಚಿವರೇ ಇರಲಿಲ್ಲ. ಒಂದು ದಿನದ ಹಿಂದೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಿದ್ದಾರೆ. ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಒಂದು ರೂಪಾಯಿ ಅನುದಾನ ಕೊಟ್ಟಿಲ್ಲ ಎಂದು ಟೀಕಿಸಿದರು. 

ಪರಿಹಾರ ಕೊಡಿ ಎಂದು ಕೇಳುವವರಿಗೆ ಕೆಲಸವಿಲ್ಲ ಎಂದು ಯಡಿಯೂರಪ್ಪ ಹಗುರವಾಗಿ ಮಾತನಾಡುತ್ತಾರೆ. ವಿರೋಧ ಪಕ್ಷ ಸಕರ್ಾರದ ವೈಫಲ್ಯವನ್ನು ಜನರ ಮುಂದೆ ಬಹಿರಂಗಪಡಿಸುವ ಕೆಲಸ ಮಾಡುತ್ತದೆಯೇ ಹೊರತು ಬಿಜೆಪಿಯವರು ಹೇಳಿದಂತೆ ಕೇಳುವುದಕ್ಕೆ ಅಲ್ಲ ಎಂದರು. 

ನೆರೆಯಿಂದ ಬೆಳೆನಾಶವಾದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಮೂಡಿಗೆರೆ ಕಾರ್ಗದ್ದೆ ಗ್ರಾಮದ ಮೃತ ರೈತ ಚನ್ನಪ್ಪಗೌಡ ಕುಟುಂಬಕ್ಕೆ ಸರ್ಕಾರ ಇದೂವರೆಗೆ ಪರಿಹಾರ ಘೊಷಣೆ ಮಾಡಿಲ್ಲ. ಪ್ರವಾಹ ಕುರಿತು ಚರ್ಚಿಸಲು, ಬಿಜೆಪಿ ಶಾಸಕರನ್ನು ಕರೆಯಿಸಿ ಸಭೆ ಮಾತ್ರ ಮಾಡುತ್ತಿದ್ದಾರೆಯೇ ಹೊರತು ಸರ್ವಪಕ್ಷ ಸಭೆ ನಡೆಸಿಲ್ಲ. ಇದು ಯಾವ ರೀತಿಯ ಸರ್ಕಾರ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. 

ಶಾಸಕರ ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲಿಯೂ ಬಿಜೆಪಿ ತಾರತಮ್ಯ ಮಾಡುತ್ತಿದೆ. ಅನರ್ಹ ಹಾಗೂ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ 25 ಕೋಟಿ ರೂ. ಅನುದಾನ ನೀಡಿದ್ದಾರೆ. ಆದರೆ ಕಾಂಗ್ರೆಸ್, ಜೆಡಿಎಸ್ ಕ್ಷೇತ್ರಗಳಿಗೆ ಅನುದಾನ ನೀಡಿಲ್ಲ. ಸರ್ಕಾರದ ತಾರತಮ್ಯ ಖಂಡಿಸಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದರು. 

ಬೆಳಗಾವಿಯಲ್ಲಿಯೂ ಪ್ರವಾಹ ಪೀಡಿತರು ಹೆಚ್ಚಿದ್ದಾರೆ. ಸಂತ್ರಸ್ತರು ಪರಿಹಾರವನ್ನು ಎಲ್ಲಿ ಪ್ರಶ್ನಿಸುತ್ತಾರೆ ಎಂಬ ಭಯದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಬೆಳಗಾವಿಯಲ್ಲಿ ಅಧಿವೇಶನ ಕರೆಯುತ್ತಿಲ್ಲ. ಉತ್ತರ ಕರ್ನಾಟಕ ಭಾಗದ ನೆರೆ ಸಂಬಂಧಿತ ಚರ್ಚೆಗೆ ಬೆಳಗಾವಿಯಲ್ಲಿಯೇ ಅಧಿವೇಶನ ನಡೆಸಬೇಕು ಎಂದು ಒತ್ತಾಯಿಸಿದರು. 

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ರಾಜ್ಯ ಹಾಗೂ ಕೇಂದ್ರದಲ್ಲಿ ಇರುವುದು ಮಾನವೀಯತೆಯೇ ಇಲ್ಲದ ಕ್ರೂರ ಸರ್ಕಾರಗಳು. ಕೇಂದ್ರ ಸಚಿವರು ನೆರೆಪ್ರವಾಹ ಸಮೀಕ್ಷೆ ನಡೆಸಿ ಸಂತ್ರಸ್ತರನ್ನುದ್ದೇಶಿಸಿ ಮಾತನಾಡದೇ ಹೋಗಿದ್ದಾರೆ. ಇದುವರೆಗೆ ಒಂದು ಪೈಸೆ ಪರಿಹಾರ ಘೋಷಿಸಿಲ್ಲ. ಕೇಂದ್ರ ಸರ್ಕಾರ ಏಕೆ ಪರಿಹಾರ ಘೋಷಿಸುತ್ತಿಲ್ಲ ಎಂದು ಯಡಿಯೂರಪ್ಪ ಬಾಯಿಬಿಡಬೇಕು ಎಂದು ಆಗ್ರಹಿಸಿದರು. 

ಕೇಂದ್ರದಿಂದ ಯಾವುದೇ ಸಹಾಯ ಸಿಗದೇ ಇರುವುದರಿಂದ ಯಡಿಯೂರಪ್ಪಗೆ ಏನು ಮಾಡಬೇಕು ಎಂದು ತೋಚುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬೀದಿಗಿಳಿದು ಪ್ರತಿಭಟನೆ ಮಾಡುವಂತಹ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದರು. 

ನೆರೆ ವಿಚಾರವಾಗಿ ಯಡಿಯೂರಪ್ಪ ವಿರೋಧ ಪಕ್ಷದವರನ್ನು ಕರೆದು ಚರ್ಚಿಸುತ್ತಿಲ್ಲ. ಜನರ ಸಮಸ್ಯೆ ಪರಿಹಾರವಾಗಬೇಕೆಂಬ ಆಶಯ ಈ ಸರ್ಕಾ ರಕ್ಕೆ ಇದ್ದಂತಿಲ್ಲ. ನೆರೆ ಪೀಡಿತ ಪ್ರದೇಶಗಳಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು. 

ಜನಪರ ಕಾಳಜಿಗಾಗಿ ಪ್ರತಿಭಟನೆ ಮಾಡುವುದು ತಪ್ಪು ಎನ್ನುವಂತೆ ಯಡಿಯೂರಪ್ಪ ಮಾತನಾಡುತ್ತಿದ್ದಾರೆ. ಆದಷ್ಟು ಬೇಗ ಸಂತ್ರಸ್ತೆ ಸಮಸ್ಯೆ ಪರಿಹಾರವಾಗದೇ ಇದ್ದಲ್ಲಿ ದೆಹಲಿಯಲ್ಲಿಯೂ ಪ್ರತಿಭಟನೆ ನಡೆಸಲಾಗುವುದು. ಬೆಳಗಾವಿಗೆ ಹೋಗಲು ಯಡಿಯೂರಪ್ಪಗೆ ಧೈರ್ಯವಿಲ್ಲ. ಹೀಗಾಗಿ ಅಲ್ಲಿ ಅಧಿವೇಶನ ನಡೆಸದಿರಲು ಅವರು ನಿರ್ಧರಿಸಿದ್ದಾರೆ ಎಂದು ಟೀಕಿಸಿದರು. 

ಪ್ರತಿಭಟನೆಯಲ್ಲಿ ಶಾಸಕರಾದ ತನ್ವೀರ್ ಸೇಠ್, ಸೌಮ್ಯಾರೆಡ್ಡಿ, ಹೆಚ್.ಕೆ.ಪಾಟೀಲ್, ಪರಮೇಶ್ವರ್ ನಾಯ್ಕ್, ಮುಖಂಡರಾದ ವಿ.ಎಸ್.ಉಗ್ರಪ್ಪ, ಬಸವರಾಜ ದದ್ದಲ್, ರಾಜಶೇಖರ್ ಪಾಟೀಲ್ ಸೇರಿದಂತೆ ಇನ್ನು ಹಲವರು ಪಾಲ್ಗೊಂಡಿದ್ದರು.