ಕಾಂಗ್ರೆಸ್ ನಾಯಕ ಜಜಾಡಿಯಾ ಎನ್‌ಸಿಪಿ ಸೇರ್ಪಡೆ

ಭಾವನಗರ,  ಜನವರಿ 25,ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಭಾವನಗರ ಕೃಷಿ ಉತ್ಪನ್ನ  ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಮಾಜಿ ಅಧ್ಯಕ್ಷ ಭಿಖಾಭಾಯ್ ಜಜಾಡಿಯಾ ಶನಿವಾರ  ನ್ಯಾಷನಲಿಸ್ಟ್‌ ಕಾಂಗ್ರೆಸ್ ಪಕ್ಷಕ್ಕೆ (ಎನ್‌ಸಿಪಿ) ಸೇರ್ಪಡೆಗೊಂಡರು.

ಪಕ್ಷದ  ರಾಜ್ಯ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಶಂಕರ್‌ಸಿಂಘ್ ವಘೇಲಾ ಅವರ ಸಮ್ಮುಖದಲ್ಲಿ  ರೈತ ಮುಖಂಡ ಜಜಾಡಿಯಾ ಅವರು ಎನ್‌ಸಿಪಿಗೆ ಸೇರಿದರು. ಎನ್‌ಸಿಪಿ ಬಾವುಟ ಮತ್ತು ಶಾಲು ಹಾಕಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಜಜಾಡಿಯಾ ಅವರೊಂದಿಗೆ ಇತರ ಕೆಲವು ಸ್ಥಳೀಯ ಕಾಂಗ್ರೆಸ್ ನಾಯಕರು ಎನ್‌ಸಿಪಿಗೆ ಸೇರ್ಪಡೆಯಾದರು.

ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದ ಶಕ್ತಿಸಿನ್ಹ ಗೋಹಿಲ್, ಭಾರತ್‌ ಸಿನ್ಹ ಸೋಲಂಕಿ, ಅರ್ಜುನ್ ಮೋದ್‌ವಾಡಿಯಾ ಮತ್ತು ಸಿದ್ಧಾರ್ಥ್ ಪಟೇಲ್ ಅವರಂತಹ ನಾಯಕರಿಗೆ ಗುಜರಾತ್‌ನಲ್ಲಿ ಪಕ್ಷದ ಚುಕ್ಕಾಣಿ ನೀಡಿದ್ದರಿಂದ ಕಾಂಗ್ರೆಸ್ ನಾಯಕತ್ವದ ಬಗ್ಗೆ ನಿರಾಶೆಯಾಗಿದೆ ಎಂದು ಜಜಾಡಿಯಾ ಹೇಳಿದರು.ಈ ಸಂದರ್ಭದಲ್ಲಿ ಗುಜರಾತ್‌ನ ಎನ್‌ಸಿಪಿ ಕಾರ್ಯಕಾರಿ ಅಧ್ಯಕ್ಷ ಬಾಬಲ್‌ದಾಸ್ ಪಟೇಲ್ ಉಪಸ್ಥಿತರಿದ್ದರು.