ದೆಹಲಿ ಹಿಂಸಾಚಾರ: ಗೃಹ ಸಚಿವ ಅಮಿತ್ ಶಾ ಅವರನ್ನು ವಜಾಗೊಳಿಸುವಂತೆ ರಾಷ್ಟ್ರಪತಿಗೆ ಕಾಂಗ್ರೆಸ್ ಆಗ್ರಹ

ನವದೆಹಲಿ, ಫೆ.27 :ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗ ಗುರುವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ, ದೆಹಲಿ ಹಿಂಸಾಚಾರ ತಡೆಯಲು ವಿಫಲವಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಮನವಿ ಮಾಡಿತು.

"ಗೃಹ ಸಚಿವರು ಗಲಭೆ ಸಂದರ್ಭದಲ್ಲಿ ಎಲ್ಲಿದ್ದರು ಮತ್ತು ಕಳೆದ ಭಾನುವಾರದಿಂದ ಅವರು ಈ ಗಂಭೀರ ಘಟನೆಗಳ ಬಗ್ಗೆ ಗಮನ ಹರಿಸಲು ಅವರಿಗೆ ಸಾಧ್ಯವಾಗಲಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ ? ಗೃಹ ಸಚಿವರು ತಮ್ಮ  ಕರ್ತವ್ಯ ನಿಭಾಯಿಸಲು ವಿಫಲರಾಗಿದ್ದಾರೆ. ಅವರ ನಿಷ್ಕ್ರಿಯತೆಯಿಂದಾಗಿ ಪರಿಸ್ಥಿತಿ  ಉಲ್ಬಣಗೊಳ್ಳಲು ಕಾರಣವಾಯಿತು ಎಂದು ಮನವಿ ಪತ್ರದಲ್ಲಿ ದೂರಲಾಗಿದೆ.

"ಆದ್ದರಿಂದ, ತಮ್ಮ  ಪ್ರಾಥಮಿಕ ಮತ್ತು ಪ್ರಮುಖ ಕರ್ತವ್ಯಗಳ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲರಾಗಿರುವ ಗೃಹ ಸಚಿವರನ್ನು ತಕ್ಷಣ ವಜಾಗೊಳಿಸುವಂತೆ ಒತ್ತಾಯಿಸುವುದನ್ನು  ಬಿಟ್ಟು ನಮಗೆ ಬೇರೆ ದಾರಿಯಿಲ್ಲ" ಎಂದು ಸೋನಿಯಾ ಗಾಂಧಿ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಮನವಿ ಪತ್ರದಲ್ಲಿ ಇರುವುದರ ಬಗ್ಗೆ ಗಮನ ಹರಿಸುವುದಾಗಿ ರಾಷ್ಟ್ರಪತಿ ಭರವಸೆ ನೀಡಿದರು ಎಂದು ಸೋನಿಯಾ ತಿಳಿಸಿದರು.

ದೆಹಲಿಯ  ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು  ಹೇಳಿದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್,  ದೆಹಲಿಯಲ್ಲಿ ನಡೆದ ಘಟನೆ ಅತ್ಯಂತ ಕಳವಳ ಮತ್ತು ರಾಷ್ಟ್ರೀಯ ಅವಮಾನದ ವಿಷಯವಾಗಿದೆ ಎಂದು ಹೇಳಿದರು.

ಹಿಂಸಾಚಾರದಲ್ಲಿ ಕನಿಷ್ಠ 34 ಜನರು  ಸಾವನ್ನಪ್ಪಿದ್ದಾರೆ, 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರದ ಸಂಪೂರ್ಣ ವಿಫಲವಾಗಿದೆ. ಜನರನ್ನು ರಕ್ಷಿಸಲು ರಾಷ್ಟ್ರಪತಿ ತಮ್ಮ ಅಧಿಕಾರ ಬಳಸಿಕೊಂಡು, ಕೇಂದ್ರ ಸರ್ಕಾರವನ್ನು ತಮ್ಮಲ್ಲಿಗೆ ಕರೆಸಿಕೊಂಡು ರಾಜಧರ್ಮವನ್ನು ಪಾಲಿಸುವಂತೆ ಸೂಚಿಸಬೇಕು ಎಂದು ರಾಷ್ಟ್ರಪತಿಯನ್ನು ವಿನಂತಿಸಿದ್ದೇವೆ. ಆದ್ದರಿಂದ ಈ ದೇಶದ ನಾಗರಿಕರಿಗೆ ಮತ್ತು ರಾಷ್ಟ್ರ ರಾಜಧಾನಿಗೆ ಶಾಂತಿ, ನ್ಯಾಯದ ಭರವಸೆ ಸಿಗಲಿದೆ ಎಂದು ಅವರು ಹೇಳಿದರು.

ಸೋನಿಯಾ ಗಾಂಧಿ  ಅವರ ನಿಯೋಗದಲ್ಲಿ  ಕಾಂಗ್ರೆಸ್ ಹಿರಿಯ ನಾಯಕರಾದ ಎ.ಕೆ.ಆಂಟನಿ, ಗುಲಾಮ್ ನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ, ಪಿ. ಚಿದಂಬರಂ, ಅಹ್ಮದ್ ಪಟೇಲ್, ಆನಂದ್ ಶರ್ಮಾ, ರಂದೀಪ್ ಸಿಂಗ್ ಸುರ್ಜೆವಾಲಾ, ಕುಮಾರಿ ಸೆಲ್ಜಾ, ಕೆ.ಸಿ.ವೇಣುಗೋಪಾಲ್ ಮತ್ತು ಸುಷ್ಮಿತಾ ದೇವ್ ಕೂಡ ಇದ್ದರು.

ರಾಷ್ಟ್ರ ರಾಜಧಾನಿಯ ಈಶಾನ್ಯ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಲ್ಲಿ  ಕನಿಷ್ಠ 34 ಜನರು ಪ್ರಾಣ ಕಳೆದುಕೊಂಡಿದ್ದು, 200 ಕ್ಕೂ ಹೆಚ್ಚು  ಜನರು ಗಾಯಗೊಂಡಿದ್ದಾರೆ. ಈ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಬುಧವಾರ ಸಭೆ ಸೇರಿತ್ತು.

ದೆಹಲಿಯಲ್ಲಿ ನಿರ್ದಿಷ್ಟವಾಗಿ ಈಶಾನ್ಯ ದೆಹಲಿಯ ಕೆಲವು ಭಾಗಗಳಲ್ಲಿ ಹಿಂಸಾಚಾರದ ಅಲೆ ಇನ್ನೂ ಇದ್ದು, ಅದು  ಪ್ರತಿ ದಿನ ಕಳೆದಂತೆ ತೀವ್ರವಾಗಿ ಬೆಳೆಯುವ ಸಾಧ್ಯತೆ ಇದೆ ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಪರಿಸ್ಥಿತಿಯನ್ನು  ಹರಡಲು ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳುವ ಬದಲು, ಕೇಂದ್ರ ಸರ್ಕಾರ  ಹಾಗೂ ಹೊಸದಾಗಿ ಚುನಾಯಿತವಾದ  ದೆಹಲಿ ಸರ್ಕಾರವೂ ಮೂಖ ಪ್ರೇಕ್ಷಕನಾಗಿ ಉಳಿದಿವೆ. ಇದರಿಂದ ಸಂಪೂರ್ಣವಾಗಿ ಹಿಂಸಾಚಾರ ಮತ್ತು ಸಂಘಟಿತ ಆಸ್ತಿ ಲೂಟಿ, ಅಡೆತಡೆಯಿಲ್ಲದೆ ಮುಂದುವರೆದಿದೆ  ಎಂದು ಅದು ಹೇಳಿದೆ.

ಗೃಹ ಸಚಿವರು  ಮತ್ತು ಕೇಂದ್ರ ಸರ್ಕಾರದ ಸಂಪೂರ್ಣ ನಿಷ್ಕ್ರಿಯತೆಯಿಂದಾಗಿ, ಹಿಂಸಾಚಾರದಲ್ಲಿ ಕನಿಷ್ಠ 34  ಜನರ ಪ್ರಾಣವನ್ನು ಕಳೆದುಕೊಳ್ಳುವಂತಾಯಿತು. 200ಕ್ಕೂ ಹೆಚ್ಚು ಜನರು ಗಾಯಗೊಳ್ಳುವಂತಾಯಿತು ಎಂದು ಅದು ಹೇಳಿದೆ.

ಕೋಟ್ಯಂತರ ರೂಪಾಯಿಗಳ ಮೌಲ್ಯದ ಆಸ್ತಿ ಪಾಸ್ತಿಗಳು ಲೂಟಿ ಹಾಗೂ ಬೆಂಕಿಗೆ ಆಹುತಿಯಾಗಿವೆ. ಈ ಅವ್ಯವಸ್ಥೆ ಮತ್ತು ಹಿಂಸಾಚಾರದ ಬಗ್ಗೆ ಹಲವು ಸಂಶಯಗಳನ್ನು ಉಂಟು ಮಾಡಿವೆ. ಗುಪ್ತಚರ ಸಂಸ್ಥೆಗಳ ಆಘಾತಕಾರಿ ಮತ್ತು ಕ್ಷಮಿಸಲಾಗದ ವೈಫಲ್ಯ ಇಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ, ಇದು ಹಿಂಸಾಚಾರಕ್ಕೆ ಕಾರಣವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಕೋಮು ದ್ವೇಷ ಮತ್ತು ಕೋಮು ಉದ್ವೇಗದ ವಾತಾವರಣವನ್ನು ಸೃಷ್ಟಿಸಲು ಕೆಲವು ವ್ಯಕ್ತಿಗಳು ಮತ್ತು ಶಕ್ತಿಗಳು ಉದ್ದೇಶಪೂರ್ವಕವಾಗಿ ಪ್ರಯತ್ನಿಸಿದ್ದಾರೆ ಎಂಬುದು ವಿಶೇಷವಾಗಿ ಆತಂಕಕಾರಿಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

ನಾಲ್ಕು ದಿನಗಳ ಕಾಲ ಹಿಂಸಾಚಾರ ನಡೆದಿದೆ. ಆದರೆ ದೆಹಲಿ ಚುನಾವಣೆಗಳವರೆಗೆ (ಮತ್ತು ನಂತರವೂ) ಬಿಜೆಪಿ ನಾಯಕರು ಉದ್ದೇಶಪೂರ್ವಕವಾಗಿ ದ್ವೇಷ ಹರಡುವ ಪ್ರಯತ್ನ ನಡೆಸಿದ್ದರು. ಈ ದೇಶದ ನಾಗರಿಕರಲ್ಲಿ ದ್ವೇಷ ಮತ್ತು ವಿಭಜನೆಯನ್ನು ಉಂಟುಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.