ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ: ಕೇಂದ್ರದ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ನಾಯಕರು

ಬೆಂಗಳೂರು, ಡಿ.  28,ಕಾಂಗ್ರೆಸ್ ಸಂಸ್ಥಾಪನಾ ದಿನವಾದ ಶನಿವಾರದಂದು ಕಾಂಗ್ರೆಸ್  ನಾಯಕರು  ಕೆಪಿಸಿಸಿ ಕಚೇರಿಯಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪಾದಯಾತ್ರೆ ಮೂಲಕ ಸದ್ಭಾವನಾ ಮೆರವಣಿಗೆ  ನಡೆಸಿ, ಬಿಜೆಪಿ ವಿರುದ್ಧ ಶಕ್ತಿ ಪ್ರದರ್ಶಿಸಿದರು.ಬಳಿಕ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ  ಮಾತನಾಡಿ, ಬಿಜೆಪಿ ಆರ್‌ಎಸ್‌ಎಸ್‌ನವರು ಚತುರ್ವರ್ಣ ವ್ಯವಸ್ಥೆ ಮೇಲೆ ನಂಬಿಕೆ  ಇಟ್ಟಿರುವುದರಿಂದ ಅವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಉದ್ಯೋಗ ಕೇಳಿದ ಯುವಕರಿಗೆ  ಪಕೋಡ ಮಾರಿ ಎಂದ ಪ್ರಧಾನಿ ಮೋದಿ. ಪುಲ್ವಾಮ ದಾಳಿ, ಕಾಶ್ಮೀರ ವಿಶೇಷ ಕಾಯಿದೆ ರದ್ದು  ಮಾಡಿದಾಗ ಮೋದಿ ಮೋದಿ ಎನ್ನುತ್ತಿದ್ದ ಯುವಕರೇ ಈಗ ಮೋದಿಗೆ ಮೂರು ನಾಮ ಹಾಕಲು  ಮುಂದಾಗಿದ್ದಾರೆ. ಎನ್ ಆರ್ ಸಿ ವಿಚಾರವಾಗಿ ದೇಶದ ಯುವಕರು ಬೀದಿಗಿಳಿದು ಹೋರಾಟ  ಮಾಡುತ್ತಿದ್ದಾರೆ. ಯುವಕರು ಬಿಜೆಪಿಯನ್ನು ಕಿತ್ತು ಒಗೆಯಬೇಕು ಎಂದು ಕರೆ ನೀಡಿದರು. ದೇಶದಲ್ಲಿ ಪ್ರಸಕ್ತ ಇರುವ ರಾಷ್ಟ್ರೀಯ ಪಕ್ಷಗಳು ಎಂದರೆ ಅದು ಬಿಜೆಪಿ ಮತ್ತು ಕಾಂಗ್ರೆಸ್.  ಕಮ್ಯುನಿಸ್ಟ್  ಪಕ್ಷ ತನ್ನ ರಾಷ್ಟ್ರೀಯತನವನ್ನು ಕಳೆದುಕೊಂಡಿದೆ. ಜನರು ಬಿಜೆಪಿ ಮುಕ್ತ ಭಾರತ ಮಾಡಲು  ಹೊರಟಿದ್ದಾರೆ ಎಂಬುದಕ್ಕೆ ಇತ್ತೀಚೆಗೆ ನಡೆದ ರಾಜ್ಯಗಳ ಚುನಾವಣಾ  ಫಲಿತಾಂಶಗಳೆ ಉತ್ತಮ ಉದಾಹರಣೆ. ಉಪಚುನಾವಣೆ ಹಾಗೂ ಲೋಕಸಭೆ ಚುನಾವಣೆಯ ಫಲಿತಾಂಶದಿಂದ ಯಾರೂ ನಿರಾಶರಾಗಬೇಕಾಗಿಲ್ಲ ಎಂದು  ಕಾರ್ಯಕರ್ತರಿಗೆ ತಮ್ಮ  ಮಾತಿನ ಮೂಲಕ ಉತ್ಸಾಹ ತುಂಬುವ ಪ್ರಯತ್ನ ಮಾಡಿದರು.ಯಡಿಯೂರಪ್ಪ ಅವರಿಗೆ  ಎಂದಿಗೂ ಬಹುಮತ ಸಿಕ್ಕಿಲ್ಲ. ಈ ಯಡಿಯೂರಪ್ಪ ಹಿಂಬಾಗಿಲಿಂದ ಅಧಿಕಾರಕ್ಕೆ ಬಂದ  ಗಿರಾಕಿ.1925ರಲ್ಲಿ ಆರ್.ಎಸ್.ಎಸ್ ಹುಟ್ಟಿದರೆ, 1950 ರಲ್ಲಿ ಜನಸಂಘ ಹಾಗೂ 1980ರಲ್ಲಿ  ಬಿಜೆಪಿ ಜನ್ಮತಾಳಿದೆ. ಮಾತುಮಾತಿಗೂ ದೇಶಭಕ್ತ ಎನ್ನುವ ಮೋದಿ  ಹುಟ್ಟಿದ್ದು ದೇಶಕ್ಕೆ  ಸ್ವಾತಂತ್ರ್ಯ ಸಿಕ್ಕ ಬಳಿಕ. ಈ ಯಾವ ಗಿರಾಕಿಗಳು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನೂ ಮಾಡಿಲ್ಲ. ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಎಂದು ಹೇಳಿದರು.ಬಿಜೆಪಿ ಆಡಳಿತದಲ್ಲಿ ಸಾಮಾಜಿಕ ನ್ಯಾಯಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಸಂವಿಧಾನವನ್ನು ದುರ್ಬಲವಾಗಿಸಲು ಪ್ರಯತ್ನ ಮಾಡಿದ್ದಾರೆ.ಜಾತ್ಯತೀತ ತತ್ವವನ್ನು  ಹಾಳುಮಾಡುತ್ತಿದ್ದಾರೆ. ಜಾತ್ಯತೀತ  ದೇಶದ ಕಲ್ಪನೆಗೆ ಕೊಡಲಿ ಪೆಟ್ಟು ಹಾಕಿದ್ದಾರೆ. ಧರ್ಮ,ಜಾತಿ ಹೆಸರಿನಲ್ಲಿ ದೇಶ ಒಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ನೇರವಾಗಿ ಸುಳ್ಳು ಹೇಳುವ ರಾಜಕಾರಣಿ ಎಂದರೆ ಅದು ಮೋದಿ ಮಾತ್ರ. ಈ ಮೋದಿಯನ್ನು ನಂಬುವುದು ಹೇಗೆ? ಎಂದು ಅನುಮಾನ ವ್ಯಕ್ತಪಡಿಸಿದರು.ಎನ್  ಆರ್ ಸಿ ಜಾರಿ ಮಾಡುವುದು ಶತಸಿದ್ಧ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಇಪ್ಪತ್ತು ಸಲ  ಹೇಳಿದ್ದಾರೆ. ಆದರೆ ಮೋದಿ ಎನ್ ಆರ್ ಸಿ ಬಗ್ಗೆ ಯೋಚನೆಯೇ ಮಾಡಿಲ್ಲ  ಎನ್ನುತ್ತಾರೆ‌. ಹಾಗಾದರೆ ಇವರಲ್ಲಿ ಯಾರನ್ನು ನಂಬಬೇಕು, ಯಾರನ್ನೂ ನಂಬಬಾರದು. ಇವರನ್ನು  ಪ್ರಶ್ನೆಯೇ ಮಾಡಬಾರದು ಎಂದ ಮೇಲೆ ಇವರನ್ನು ನಂಬುವುದಾದರೂ ಹೇಗೆ? ಮೋದಿ ಮೇಲೆ ಜನರಿಗೆ  ನಂಬಿಕೆಯೇ ಹೊರಟು ಹೋಗಿದೆ. ಪ್ರಧಾನಿ ಮಂತ್ರಿ ಏನೇ ತಿಪ್ಪರಲಾಗ ಹಾಕಿದರೂ ಎನ್ ಆರ್ ಸಿ  ಜಾರಿ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎಂದರು.ಕೆಪಿಸಿಸಿ  ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಕಳೆದ ಆರು ವರ್ಷಗಳಿಂದ ಬಿಜೆಪಿ ಸುಳ್ಳು  ಹೇಳುತ್ತಲೇ ಬರುತ್ತಿದೆ. ಬಿಜೆಪಿಯಿಂದಾಗಿ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಎಲ್ಲೆಡೆ  ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಬಿಜೆಪಿಗರು ಸಂವಿಧಾನ ವಿರೋಧಿ ಧೋರಣೆ  ಅನುಸರಿಸುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ತಂದು ದೇಶದ ಒಗ್ಗಟ್ಟು  ಒಡೆಯುತ್ತಿದ್ದಾರೆ. ಕೋಮುವಾದಿ ರಾಜಕಾರಣ ಮಾಡುತ್ತಿರುವ ಬಿಜೆಪಿಗೆ ಪಾಠ ಕಲಿಸಬೇಕಾದ  ಅನಿವಾರ್ಯತೆಯಿದೆ. ಜನರೇ ಅವರಿಗೆ ಪಾಠವನ್ನು ಕಲಿಸಬೇಕಿದೆ. ಸಂವಿಧಾನ ರಕ್ಷಣೆಗೆ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಾದ ಸಮಯ ಬಂದಿದೆ ಎಂದು ಹೇಳಿದರು.ಮಾಜಿ  ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ಬಿಜೆಪಿ ದೇಶವನ್ನು ಇಬ್ಭಾಗ ಮಾಡಲು  ಯತ್ನಿಸುತ್ತಿದೆ. ವಿವಾದಿತ ಕಾಯ್ದೆಗಳನ್ನು ತಂದು ದೇಶದ ಜನರನ್ನು ಬೇರ್ಪಡಿಸುತ್ತಿದೆ.  ಜನರ ನಡುವೆ ದ್ವೇಷ ಹರಡುತ್ತಿದೆ. ಇದನ್ನು  ತಡೆಯುವ ಕೆಲಸ ಸುಪ್ರೀಂ ಮಾಡಬೇಕು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು  ಕಾಂಗ್ರೆಸ್. ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದಿದ್ದು ಕಾಂಗ್ರೆಸಿಗರು. ಇದನ್ನು ದೇಶದ  ಜನರೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.ಮಾಜಿ ಸಚಿವ ಡಿ.ಕೆ.ಶಿವಕುಮಾರ್  ಮಾತನಾಡಿ, ಲೋಕಸಭೆಯಲ್ಲಿ ಬಿಜೆಪಿಗೆ 300 ಸೀಟು ಬಂದಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ವಿಶ್ವಾಸ  ಕುಂದುವ ಅವಶ್ಯಕತೆಯಿಲ್ಲ. ದೇಶದಲ್ಲಿ ಬಿಜೆಪಿ ತನ್ನ ಅಸ್ತಿತ್ವ  ಕಳೆದುಕೊಳ್ಳುತ್ತಿದೆ. ಮಹಾರಾಷ್ಟ್ರದಲ್ಲಿ ಒಂದೇ ಹಂತದ ಚುನಾವಣೆ, ಚಿಕ್ಕ ರಾಜ್ಯ  ಜಾರ್ಖಂಡ್ ನಲ್ಲಿ ಐದು ಹಂತಗಳ ಚುನಾವಣೆ... ಇಷ್ಟೆಲ್ಲಾ ನಾಟಕವಾಡಿದರೂ ಬಿಜೆಪಿಗೆ  ಯಾವುದೇ ಲಾಭವಾಗಲಿಲ್ಲ. ಜನ ಏನು ಅನ್ನುವುದನ್ನು ಈಗಾಗಲೇ ಅವರಿಗೆ  ತೋರಿಸುತ್ತಿದ್ದಾರೆ. ಬಿಜೆಪಿಗರ ಅಂತ್ಯ ಈಗ ಪ್ರಾರಂಭವಾಗಿದೆ ಎಂದು ಕುಟುಕಿದರು.ಪಕ್ಷದಲ್ಲಿರುವ ಭಿನ್ನಾಬಿಪ್ರಾಯ ತೊಡೆದು ಎಲ್ಲರೂ ಒಗ್ಗಟ್ಟಾಗಿ  ಶಕ್ತಿಯಿಂದ ಹೋರಾಟ ನಡೆಸುವ ಪರಿಸ್ಥಿತಿ ನಮ್ಮಲ್ಲಿ ನಿರ್ಮಾಣವಾಗಿದೆ. ಎಲ್ಲರೂ ಒಂದಾದರೆ  ಯಾರೂ ಅಡ್ಡಬರಲಾರರು. ಇದನ್ನು ನಮ್ಮ ನಾಯಕರು ಅರ್ಥಮಾಡಿಕೊಳ್ಳಬೇಕು ಎಂದು ಶಿವಕುಮಾರ್ ಕರೆ ನೀಡಿದರು.ವಿದ್ಯಾವಂತರಿಗೆ ಮೋದಿ ಅರ್ಬನ್ ನಕ್ಸಲೈಟ್ ಎಂದು ಪ್ರಧಾನಿ ಮೋದಿ ಬಿರುದು ನೀಡುತ್ತಾರೆ. ಬಿಜೆಪಿಯನ್ನು  ಅಧಿಕಾರಕ್ಕೆ ತಂದಿದ್ದಕ್ಕೆ ಜನರಿಗೆ ಇಂತಹ ಕೊಡುಗೆ ನೀಡಿದ್ದಾರೆ. ಜನರ ಹೋರಾಟದ ಮುಂದೆ  ಯಾವುದೂ ನಡೆಯುವುದಿಲ್ಲ‌‌. ಸಂವಿಧಾನ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು  ಸಂವಿಧಾನವನ್ನೇ ಮುಗಿಸಲು ಹೊರಟಿದ್ದಾರೆ. ಪಂಚರ್ ಹಾಕುವವನು ರೈತ, ಅವಿದ್ಯಾವಂತ ಎಂದು ವ್ಯಂಗ್ಯವಾಡಿದವರ ವಿರುದ್ಧ ಮೋದಿ ಯಾವ ಕ್ರಮ ತೆಗೆದುಕೊಂಡಿದ್ದಾರೆ ಎಂದು ಶಿವಕುಮಾರ್ ಪ್ರಶ್ನಿಸಿದರು.ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಕೇಂದ್ರದಿಂದ ರಾಜ್ಯದ ರೈತರಿಗೆ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳಿಲ್ಲ. ವಿದ್ಯಾರ್ಥಿಗಳ  ಮೇಲೆ ಹಲ್ಲೆ ನಡೆಯುತ್ತಿದೆ, ವಿಶ್ವವಿದ್ಯಾಲಯಗಳಿಗೆ ಅನುದಾನ ಕೊಡಲು ಸಾಧ್ಯವಾಗುತ್ತಿಲ್ಲ. ಸಣ್ಣ ಕೈಗಾರಿಕೆಗಳು ಮುಚ್ಚುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ದೇಶದ  ಜನರಿಗೆ ಉದ್ಯೋಗ ಸಿಗುತ್ತಿಲ್ಲ. ಸಮಾಜ ಸುಧಾರಿತ ಕೆಲಸ ಮಾಡುತ್ತಿಲ್ಲ. ಜನರನ್ನು  ಆರ್ಥಿಕವಾಗಿ ಮೇಲೆತ್ತುತ್ತಿಲ್ಲ. ಭ್ರಮೆಯಲ್ಲಿ ಆಡಳಿತ ನಡೆಸುತ್ತಿರುವ ಕೇಂದ್ರ ಸರ್ಕಾರ  ಜನವಿರೋಧಿ ಆಡಳಿತ ನಡೆಸುತ್ತಿದೆ. ಬಿಜೆಪಿ ನಾಯಕರು  ದೇಶದ ಶಾಂತಿಯನ್ನು ಕದಡುವ ಕೆಲಸ  ಮಾಡುತ್ತಿದ್ದಾರೆ ಎಂದು ಕೇಂದ್ರದ ವಿರುದ್ಧ ಪರಮೇಶ್ವರ್ ವಾಗ್ದಾಳಿ ನಡೆಸಿದರು.  ಬೇಟಿ ಬಚಾವ್ ಬೇಟಿ ಪಡಾವೋ ಎಂದು ಘೋಷಣೆ ಕೂಗುವ ಬಿಜೆಪಿಯ ಶಾಸಕರೇ ಯುವತಿ ಮೇಲೆ  ಅತ್ಯಾಚಾರ ಮಾಡಿ‌ ಪ್ರಕರಣ ಮುಚ್ಚಿಹಾಕುತ್ತಾರೆ. ಮಂಗಳೂರಿನಲ್ಲಿ ಹೆಣದ ರಾಜಕಾರಣ ಮಾಡಿ  ಇಬ್ಬರು ಅಮಾಯಕರನ್ನು ಉದ್ದೇಶಪೂರ್ವಕ ಕೊಂದಿದ್ದಾರೆ. ಇದೆಲ್ಲವೂ ಬಿಜೆಪಿ ಸರ್ಕಾರದ  ಕೊಡುಗೆಗಳು ಎಂದು ಟೀಕಿಸಿದರು.ಕೆಲವೇ ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಅಧಿಕಾರದಲ್ಲಿದೆ. ಈಗಾಗಲೇ ಬಹುತೇಕ  ಕಡೆ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಕರ್ನಾಟಕ ರಾಜ್ಯದಲ್ಲಿಯೂ  ಬಿಜೆಪಿ ಸರ್ಕಾರ ಅಲ್ಲಾಡುತ್ತಿದೆ. ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದವರೇ ಈಗ  ಮುಕ್ತವಾಗುತ್ತಿದ್ದಾರೆ ಎಂದು ಪರಮೇಶ್ವರ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.ದೇಶವನ್ನು  ಜಾತ್ಯತೀತ ನೆಲೆಗಟ್ಟಿನ ಮೇಲೆ ನಿರ್ಮಿಸಲಾಗಿದೆ. ದೇವ ವಿಭಜನೆಗೊಂಡಾದ ಪಾಕ್‌ ಧರ್ಮಾಧಾರಿತ ದೇಶವಾದರೂ ನಮ್ಮ ಹಿರಿಯರು ಎಲ್ಲರ ಅಭಿಪ್ರಾಯ ಪಡೆದು, ಬಹಳ ಆಲೋಚಿಸಿ ಜಾತ್ಯತೀತ, ಗಣರಾಜ್ಯವಾಗಿ ದೇಶವನ್ನು ರಚಿಸಿದರು. ಎಲ್ಲರೂ ಸೇರಿ ಭಾರತವೆಂದು  ಕರೆದವರು‌‌‌ ನಾವು‌. ಆದರೆ ಬಿಜೆಪಿಗರು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ. ಬಿಜೆಪಿಯ ಸೀಕ್ರೆಟ್ ಅಜೆಂಡಾ ಏನು ಎನ್ನುವುದು ಎಲ್ಲರಿಗೂ ಅರ್ಥವಾಗಿದೆ. ವಿದ್ಯಾರ್ಥಿಗಳನ್ನು  ಹೊಡೆದಿದ್ದು, ಕೊಲೆ ಮಾಡಿದ್ದು ಎಲ್ಲರೂ ಗಮನಿಸುತ್ತಿದ್ದಾರೆ. ವಿದ್ಯಾರ್ಥಿ ಸಮುದಾಯಕ್ಕೆ  ತೊಂದರೆಯಾಗುತ್ತಿದೆ ಎಂದು ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿಗಳೇ ಹೇಳುತ್ತಿದ್ದಾರೆ. ದೇಶದ  ಆರ್ಥಿಕ ಸ್ಥಿತಿ ಹಾಳಾಗಿ ಹೋಗಿದೆ. ದೇಶಕ್ಕೆ ಅನ್ನ ನೀಡುವ ರೈತರು ಸಾಯುತ್ತಿದ್ದಾರೆ. ದೇಶ  ಅಶಾಂತಿಯೆಡೆಗೆ ಸಾಗುತ್ತಿದೆ. ಇದೆಲ್ಲವನ್ನು ಸರಿಪಡಿಸಲು ಕಾಂಗ್ರೆಸ್ ಮತ್ತೆ  ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.ಈ ಸಂದರ್ಭದಲ್ಲಿ ಮುಖಂಡ ರಾಮಲಿಂಗಾರೆಡ್ಡಿ, ಶಾಸಕಿ ಸೌಮ್ಯಾರೆಡ್ಡಿ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.