ಬೆಂಗಳೂರು, ಸೆ 7 ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಸುವ ಪ್ರಕ್ರಿಯೆ ಕೊನೆಯ ಕ್ಷಣದಲ್ಲಿ ವಿಫಲವಾದರೂ ಚಂದ್ರಯಾನ-2 ಯೋಜನೆಯನ್ನು ಈ ಹಂತಕ್ಕೆ ತಲುಪಿಸಿದ ಇಸ್ರೋ ವಿಜ್ಞಾನಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ರಾಜ್ಯ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಇಸ್ರೋ ವಿಜ್ಞಾನಿಗಳ ಪ್ರಯತ್ನ, ಪರಿಶ್ರಮಕ್ಕೆ ಅಭಿನಂದನೆ, ಪ್ರಧಾನಿಯವರು ಹೇಳಿದಂತೆ ಇದು ಸಣ್ಣ ಸಾಧನೆಯಲ್ಲ, ಉತ್ತಮ ಫಲಿತಾಂಶಗಳ ನಿರೀಕ್ಷೆಯೊಂದಿಗೆ ಅಂತರಿಕ್ಷದ ಅನ್ವೇಷಣೆಯ ಪಯಣ ಹೀಗೆ ಮುಂದುವರಿಯಲಿ, ನಿಮ್ಮ ಪ್ರಯತ್ನ ವ್ಯರ್ಥವಾಗದು, ನಿಮ್ಮ ಸಾಧನೆ ನಮ್ಮ ಹೆಮ್ಮೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವಿಟ್ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಸ್ರೋದ ನಮ್ಮ ವಿಜ್ಞಾನಿಗಳ ಸಾಧನೆಗಳ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ, ಚಂದ್ರಯಾನ- 2 ನಿಜಕ್ಕೂ ಉತ್ತಮ ಯೋಜನೆ, ಇದರಲ್ಲಿ ಕೆಲವರು ಮಾತ್ರ ಯಶಸ್ಸು ಸಾಧಿಸಿದ್ದಾರೆ. ಚಂದ್ರಯಾನ -2 ಅಂತಿಮ ಹಂತದವರೆಗೆ ಕಳುಹಿಸಿ ಲ್ಯಾಂಡಿಂಗ್ಗೆ ಕೇವಲ ಒಂದು ಹೆಜ್ಜೆ ದೂರದಲ್ಲಿದೆ. ಇದನ್ನು ಸಾಧಿಸಿದ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಕೆ.ಪಾಟೀಲ್ ಇಸ್ರೋಗೆ ಅಭಿನಂದನೆ ಸಲ್ಲಿಸಿ, ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಭಾರತೀಯ ಸಾಧನೆ ಶ್ರೇಷ್ಠ ಮತ್ತು ಹಿಮಾಲಯದೆತ್ತರದ್ದು. ಚಂದ್ರಯಾನ 2ರ ಇಂದಿನ ಸಂಪರ್ಕದ ಕಡಿತದ ವೈಜ್ಞಾನಿಕ, ತಾಂತ್ರಿಕ ತೊಂದರೆಯಿಂದ ಎದೆಗುಂದಬೇಕಾಗಿಲ್ಲ. ಒಟ್ಟು ಪ್ರಯೋಗ ಒಂದು ಹೆಮ್ಮೆಯ ಸಾಧನೆ. ಈ ಅನುಭವ ಎತ್ತರಕ್ಕೆರಿಸಲು ಮೆಟ್ಟಿಲಾಗಿಸೊಣ ಎಂದು ತಿಳಿಸಿದ್ದಾರೆ.