ಬೆಂಗಳೂರು, ಫೆ 20- ರಾಜ್ಯದ ರೈತರು ಬೆಳೆಯುವ ತೊಗರಿ, ಜೋಳ, ಭತ್ತ ಮತ್ತು ರಾಗಿ ಬೆಳೆಗಳಿಗೆ ಸರ್ಕಾರ ನೀಡಲು ಮುಂದಾಗಿರುವ ಬೆಂಬಲ ಬೆಲೆ, ಅದರ ಖರೀದಿಯ ಪ್ರಮಾಣದ ಕುರಿತು ಗೊಂದಲಗಳು ಹಾಗೂ ಡಿಜಿಟೀಲಕರಣದಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕಾಂಗ್ರೆಸ್, ಜೆಡಿಎಸ್ ಶಾಸಕರು ಗುರುವಾರ ವಿಧಾನಸಭಾ ಕಲಾಪದ ವೇಳೆ ಪ್ರಸ್ತಾಪಿಸಿದರು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ ಅವರು, ರಾಜ್ಯಪಾಲರ ಭಾಷಣದಲ್ಲಿ ತೊಗರಿ ಸೇರಿದಂತೆ ಹಲವು ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದಾಗಿ ಘೋಷಿಸಲಾಗಿದೆ. ಆದರೆ, 20 ಕ್ವಿಂಟಲ್ ತೊಗರಿಯನ್ನು ಖರೀದಿಸುವುದಾಗಿ ಘೋಷಿಸಿ, ಈಗ ಕೇವಲ 10 ಕ್ವಿಂಟಾಲ್ ತೊಗರಿಯನ್ನು ಮಾತ್ರ ಖರೀದಿಸಲಾಗುತ್ತಿದೆ ಎಂದು ಆರೋಪಿಸಿದರು.
ಬೀದರ್ ನಲ್ಲಿ ನಡೆದ ಪಶು ಸಮ್ಮೇಳನಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರೈತರಿಂದ 20 ಕ್ವಿಂಟಾಲ್ ತೊಗರಿ ಖರೀದಿಸುವುದಾಗಿ ಘೋಷಿಸಿದ್ದರು. ಇದನ್ನು ರೈತರು ನಂಬಿಕೊಂಡಿದ್ದಾರೆ. ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 12ರಿಂದ 13 ಲಕ್ಷ ಮೆಟ್ರಿಕ್ ಟನ್ ತೊಗರಿ ಬೆಳೆ ಬಂದಿದೆ. ಹೆಚ್ಚುವರಿ ಬೆಳೆ ಬೆಳೆದ ರೈತರು ಏನು ಮಾಡಬೇಕು ಎಂದು ಆರೋಪಿಸಿದರು.
ಅದಕ್ಕೆ ಉತ್ತರಿಸಿದ ಯಡಿಯೂರಪ್ಪ 2018ರ ಫೆ. 18ರವರೆಗೆ ತೊಗರಿ ಖರೀದಿಗೆ 3,111 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಇಲ್ಲಿಯವರೆಗೆ 31.91 ಲಕ್ಷ ರೈತರಿಂದ 3.45 ಲಕ್ಷ ಕ್ವಿಂಟಾಲ್ ತೊಗರಿ ಖರೀದಿಸಲಾಗಿದೆ. ಇಲ್ಲಿಯವರೆಗೆ ಪ್ರತಿ ರೈತರಿಂದ 10 ಕ್ವಿಂಟಲ್ ತೊಗರಿ ಖರೀದಿಸಲಾಗುತ್ತಿದೆ. 20 ಕ್ವಿಂಟಾಲ್ ಖರೀದಿಗೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಅನುಮತಿಗಾಗಿ ಕಾಯುತ್ತಿದ್ದೇವೆ ಎಂದರು.
ಇದರಿಂದ ಪ್ರತಿಪಕ್ಷ ಸದಸ್ಯರು ಸಮಾಧಾನಗೊಳ್ಳದಾಗ ಮಧ್ಯಪ್ರವೇಶಿಸಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್. ಕೇಂದ್ರ ಸರ್ಕಾರ ನೀಡುವ 5,800 ರೂ.ಗಳಿಗೆ 300 ರೂ. ಸೇರಿಸಿ ಬೆಂಬಲ ಬೆಲೆ ನೀಡಿ ಖರೀದಿಸಲಾಗುತ್ತಿದೆ. ಅದರ ಮಿತಿಯನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿಗಳು ಹಾಗೂ ತಾವು ಕೂಡ ಪತ್ರ ಬರೆದಿದ್ದೇವೆ ಎಂದು ಸಮರ್ಥನೆ ನೀಡಿದರು.
ಅದನ್ನೊಪ್ಪದ ಪ್ರಿಯಾಂಕ್ ಖರ್ಗೆ, ಕೇಂದ್ರ ಸರ್ಕಾರ ಈಗಾಗಲೇ ಬಜೆಟ್ ನಲ್ಲಿ ಕೂಡ ಖರೀದಿ ಮಿತಿ ಹೆಚ್ಚಳ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಮುಖ್ಯಮಂತ್ರಿಗಳು ಮಾತ್ರ ತಪ್ಪು ಹೇಳಿಕೆ ನೀಡಿ ಜನರ ದಾರಿ ತಪ್ಪಿಸುತ್ತಿರುವುದೇಕೆ. ಈ ಕುರಿತು ಅವರು ಸ್ಪಷ್ಟನೆ ನೀಡಲೇಬೇಕು ಎಂದು ಒತ್ತಾಯಿಸಿದರು.
ಈ ನಡುವೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು, ಭತ್ತ, ರಾಗಿ ಹಾಗೂ ಜೋಳದ ಬೆಳೆ ಖರೀದಿಯಲ್ಲಿ ಕೂಡ ರೈತರು ಡಿಜಟಲೀಕರಣದ ಸಮಸ್ಯೆ ಎದುರಿಸುತ್ತಿದ್ದಾರೆ. ರೈತರು ತಮ್ಮ ಜಮೀನಿನ ಜಿಪಿಎಸ್ ವಿವರಗಳನ್ನು ನೀಡಬೇಕಾಗುತ್ತದೆ. ಇದರಿಂದ ರೈತರು ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಮುಖ್ಯಮಂತ್ರಿಗಳು ತಮ್ಮ ಉತ್ತರದಲ್ಲಿ ಸಮರ್ಥನೆ ನೀಡುತ್ತಾರೆ ಎಂದು ಸ್ಪೀಕರ್ ಸಮಜಾಯಿಸಿ ನೀಡಿದರು. ಆಗ ಸಿದ್ದರಾಮಯ್ಯ, ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದಲ್ಲಿ ರಾಮರಾಜ್ಯ ಮಾಡಬಹುದು ಎಂದು ಬಿಜೆಪಿಯವರು ಹೇಳಿಕೆ ನೀಡುತ್ತಿದ್ದರು. ಈಗ ಎರಡೂ ಕಡೆ ನಿಮ್ಮದೇ ಸರ್ಕಾರವಿದೆ. ರಾಮರಾಜ್ಯ ಮಾಡಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.