ಬೆಂಗಳೂರು, ಮಾ.19, ಕಳೆದ ಎಂಟು ದಿನಗಳಿಂದ ವಿಧಾನ ಪರಿಷತ್ ನಲ್ಲಿ ನಡೆಯುತ್ತಿದ್ದ ಭಾರತ ಸಂವಿಧಾನದ ಮೇಲಿನ ಚರ್ಚೆ ಇಂದು ಮುಕ್ತಾಯಗೊಂಡಿದೆ, ಒಟ್ಟು 36 ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದು 25.33 ಗಂಟೆಗಳ ಕಾಲ ಚರ್ಚೆ ನಡೆಯಿತು.ವಿಧಾನ ಪರಿಷತ್ ನಲ್ಲಿ ನಡೆದ ಸಂವಿಧಾನದ ಮೇಲಿನ ಚರ್ಚೆಗೆ ಸರ್ಕಾರದ ಪರವಾಗಿ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಉತ್ತರ ನೀಡಿದರು.
ನಂತರ ಸಂವಿಧಾನ ಕುರಿತು ನಡೆದ ಚರ್ಚೆಗೆ ಸಮಾರೋಪ ಭಾಷಣ ಮಾಡಿದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಭಾರತದ ಸಂವಿಧಾನವನ್ನು ನಾವುಗಳು ಸಮರ್ಪಿಸಿಕೊಂಡು 70 ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿರುವ ಸಂವಿಧಾನ ದಿವಸದ ಪ್ರಯುಕ್ತ ವಿಧಾನ ಮಂಡಲದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಹಮ್ಮಿಕೊಂಡಿದ್ದ ಸಂವಿಧಾನ ಕುರಿತಾದ ವಿಶೇಷ ಚರ್ಚೆಯನ್ನುಅವಿಸ್ಮರಣೀಯಗೊಳಿಸಿ ಯಶಸ್ವಿಯಾಗಿ ಪೂರ್ಣಗೊಳ್ಳಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.ಭಾರತವು ಸೇರಿದಂತೆ ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ಪಡೆದ ಸುಮಾರು 63 ದೇಶಗಳ ಪೈಕಿ ಮೂಲ ಸಂವಿಧಾನದೊಂದಿಗೆ 70 ವರ್ಷಗಳನ್ನು ಪೂರೈಸಿರುವ ಏಕೈಕ ದೇಶವೆಂದರೆ, ಅದು ಭಾರತ. ಇದರ ಸಂಪೂರ್ಣ ಶ್ರೇಯಸ್ಸು ಡಾ. ಬಿ.ಆರ್.ಅಂಬೇಡ್ಕರ್ ರವರು ರಚಿಸಿರುವ ಸಂವೇದನಾಶೀಲ ಮತ್ತು ಜೀವಂತ ದಾಖಲೆಯಾದ ನಮ್ಮ ಸಂವಿಧಾನಕ್ಕೆ ಸಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಮೇಲ್ಮನೆಯು ಇಡೀ ದೇಶದ ಸಂಸದೀಯ ವ್ಯವಸ್ಥೆಗಳಲ್ಲಿಯೇ ಬಹಳ ಉತ್ತಮ ಹೆಸರನ್ನು ಹೊಂದಿದ್ದು, ಅದಕ್ಕೆ ಮತ್ತಷ್ಟು ಮೆರುಗು ನೀಡುವ ರೀತಿ ತಾವೆಲ್ಲರೂ ಸಕ್ರೀಯವಾಗಿ ಭಾಗವಹಿಸಿರುವುದು ಶ್ಲಾಘನೀಯವಾಗಿದೆ, ಈ ವಿಶೇಷ ಚರ್ಚೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ 36 ಸದಸ್ಯರು ಪಾಲ್ಗೊಂಡು 8 ದಿನಗಳಿಂದ 25:33 ಗಂಟೆಗಳ ಕಾಲ ಭಾಗವಹಿಸಿ ಪಕ್ಷಾತೀತವಾಗಿ ತಮ್ಮ ವಿಚಾರಧಾರೆಗಳನ್ನು ಮಂಡಿಸಿರುವುದು ತುಂಬಾ ಸಂತೋಷವುಂಟು ಮಾಡಿದೆ, ಎಲ್ಲರೂ ಹಲವಾರು ಮಹತ್ವಪೂರ್ಣ ವಿಚಾರಗಳ ಮೇಲೆ ಬೆಳಕು ಚೆಲ್ಲಿದ್ದು,ಈಗಿನ ವಿಶೇಷ ಚರ್ಚೆ ಯಿಂದ ಪ್ರೇರೇಪಿತಗೊಂಡಿರುವ ನಾವುಗಳು ಮುಂದಿನ ದಿನಗಳಲ್ಲಿ ಸಂವಿಧಾನದ ಚರ್ಚೆ ರೀತಿಯಲ್ಲಿಯೇ ಪ್ರತೀ ವರ್ಷದ ಅಧಿವೇಶನದಲ್ಲಿ ಕನಿಷ್ಠ ಒಂದು ದಿನವಾದರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಬಸವಣ್ಣರವರು ಸೇರಿದಂತೆ ಇತರೆ ಸ್ಫೂರ್ತಿದಾಯಕ ಮಹನೀಯರ ವಿಚಾರ ಧಾರೆಗಳ ಕುರಿತಾದ ವಿಶೇಷ ಚರ್ಚೆಗೆ ಸಮಯ ನಿಗದಿಪಡಿಸುವುದು ಸೂಕ್ತ ಎಂದರು.
ಸಭಾಪತಿ ಹುದ್ದೆ ಅಲಂಕರಿಸುವ ಪೂರ್ವದಲ್ಲಿ ಮಾಡಿದ್ದ ಒಂದು ಸಣ್ಣ ಪ್ರಯೋಗಾತ್ಮಕ ಪ್ರಯತ್ನವನ್ನು ಸದನದ ಗಮನಕ್ಕೆ ತರಲು ಇಚ್ಛಿಸಿದ ಪ್ರತಾಪ್ ಚಂದ್ರ ಶೆಟ್ಟಿ, 2018ರ ಅಕ್ಟೋಬರ್ ತಿಂಗಳಿನಲ್ಲಿ ಮಹಾತ್ಮ ಗಾಂಧೀಜಿಯವರ 125ನೇ ಜಯಂತಿ ಪ್ರಯುಕ್ತ ಮಹಾತ್ಮ ಗಾಂಧಿಯವರ ಜೀವನ ಚರಿತ್ರ ಕುರಿತಾದ 'ನನ್ನ ಸತ್ಯಾನ್ವೇಷಣೆ' ಪುಸ್ತಕಗಳ ತಲಾ 50 ಪ್ರತಿಗಳನ್ನು ಉಡುಪಿ ಜಿಲ್ಲೆಯ ನನ್ನ ಭಾಗದ ಕೆಲವು ಪ್ರೌಢಶಾಲೆಗಳಿಗೆ ನೀಡುವ ಮೂಲಕ ಸೂಕ್ತ ಸಮಯಾವಕಾಶ ನೀಡಿ, ಅಲ್ಲಿನ ಶಿಕ್ಷಕರ ಮೂಲಕ ಪ್ರಶ್ನೆ ಪತ್ರಿಕೆಯೊಂದನ್ನು ಸಿದ್ಧಪಡಿಸಿ ಪ್ರೌಢಶಾಲಾ ಮಕ್ಕಳಿಗೆ ಪರೀಕ್ಷೆ ಏರ್ಪಡಿಸಿ, ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವ ಕೆಲಸ ಮಾಡುವುದರೊಂದಿಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಗಾಂಧೀಜಿಯವರ ವಿಚಾರಧಾರೆಗಳನ್ನು ಅರ್ಥಮಾಡಿಸಲು ಪ್ರಯತ್ನಿಸಿದ್ದೇನೆ, ಜನಪ್ರತಿನಿಧಿಗಳಾದ ನಾವುಗಳು, ಸಂವಿಧಾನದ ಕುರಿತು ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ ಇದೇ ಮಾದರಿಯನ್ನು ಅಳವಡಿಸಿಕೊಂಡಲ್ಲಿ ಶಿಕ್ಷಕರು ಸೇರಿದಂತೆ ಮುಂದಿನ ಯುವ ಪೀಳಿಗೆಗೆ ಸರಳ ರೀತಿಯಲ್ಲಿ ಸಂವಿಧಾನವನ್ನು ಮತ್ತು ಸಂವಿಧಾನ ರಚನೆಯಲ್ಲಿ ತೊಡಗಿದ್ದ ಡಾ. ಬಿ.ಆರ್.ಅಂಬೇಡ್ಕರ್ ಸೇರಿದಂತೆ ಇತರೆ ಎಲ್ಲಾ ಮಹನೀಯರ ವಿಚಾರಧಾರೆಗಳನ್ನು ಅರ್ಥ ಮಾಡಿಸಬಹುದು ಎಂದು ಸಲಹೆ ನೀಡಿದರು.
ಭಾರತ ಸಂವಿಧಾನದ ಮೂಲ ಆಶಯ ಮತ್ತು ಮೌಲ್ಯಗಳನ್ನು ರಾಜ್ಯದ ಜನರಿಗೆ ಈ ಸದನದ ಮೂಲಕ ತಿಳಿಸಿರುವುದು ಎಷ್ಟು ಮುಖ್ಯವೋ, ಅದರ ಆಶಯ ಮತ್ತು ಮೌಲ್ಯಗಳನ್ನು ನಮ್ಮ
ರಾಜಕೀಯ,ಸಾರ್ವಜನಿಕ ಜೀವನದಲ್ಲಿ ಸಹ ಅಳವಡಿಸಿಕೊಳ್ಳುವುದು ಅಷ್ಟೇ ಮುಖ್ಯ. ಆಗ ಮಾತ್ರ ಈ ಚರ್ಚೆ ಮತ್ತಷ್ಟು ಅರ್ಥಪೂರ್ಣವಾಗುತ್ತದೆ. ನಮ್ಮ ದೇಶದ ಮೇಲೆ ನಮಗೆ ಎಷ್ಟು ಹೆಮ್ಮೆ ಇದೆಯೋ ಅಷ್ಟೇ ಗೌರವ ನಮ್ಮೆಲ್ಲರಿಗೂ ನಮ್ಮ ಸಂವಿಧಾನದ ಮೇಲೆ ಇರಬೇಕು. ಆಗ ಮಾತ್ರ ಬಲಿಷ್ಠ ಭಾರತ ನಿರ್ಮಾಣದ ಕನಸು ಸಾಕಾರಗೊಳ್ಳುತ್ತದೆ. ಜೊತೆಗೆ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹನೀಯರು, ಪ್ರಜಾತಂತ್ರ ವ್ಯವಸ್ಥೆಗೆ ಅಡಿಪಾಯವಾಗಿ ಸಂವಿಧಾನವನ್ನು ರಚಿಸಿದ ಮಹನೀಯರಿಗೆ ಗೌರವ ನೀಡಿದಂತಾಗುತ್ತದೆ.ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡೋಣ ಮತ್ತು ಹೆಚ್ಚು ಸರಳ ರೀತಿಯಲ್ಲಿ ಮುಂದಿನ ಪೀಳಿಗೆಗೆ ಸಂವಿಧಾನದ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸೋಣ ಎಂದು ಕರೆ ನೀಡಿದರು.