ಲೋಕದರ್ಶನ ವರದಿ
ಕೊಪ್ಪಳ 28: ಸಮಾಜದಲ್ಲಿ ಇಂದು ಮನುಷ್ಯರು ದುಃಖ, ಅಶಾಂತಿ, ಚಿಂತೆಯಿಂದ ದೂರವಾಗಲು ಸುಖ, ಶಾಂತಿಯ ಸಾಗರನಾದ ಪರಮಾತ್ಮನ ಕಡೆಗೆ ಮನಸ್ಸು ಬುದ್ಧಿಯನ್ನು ಏಕಾಗ್ರಗೊಳಿಸುವುದು ಅತ್ಯಂತ ಅಗತ್ಯವಿದೆ ಎಂದು ಬ್ರಹ್ಮಕುಮಾರಿ ಯೋಗಿನಿ ಅಕ್ಕನವರು ಹೇಳಿದರು.
ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ಪ್ರಯುಕ್ತ ವಿಶ್ವ ಶಾಂತಿಗಾಗಿ "ಓಂ ನಮಃ ಶಿವಾಯ ಪಾದಯಾತ್ರೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
"ಓಂ" ಎಂದರೆ ಈ ಶರೀರದ ಮಾಲೀಕನಾದ ಆತ್ಮ ನಾನು ಜ್ಯೋತಿ ಸ್ವರೂಪನಾಗಿದ್ದೇನೆ. ಜನನ ಮರಣ ಚಕ್ರದಲ್ಲಿ ಬರುವ ಆತ್ಮ ನಾನು ಈ ಶರೀರದ ಮೂಲಕ ಕೆಲಸ ಮಾಡಿಸುವವನಾಗಿದ್ದೇನೆ.
"ನಮಃ" ಎಂದರೆ ನಮಸ್ಕರಿಸುತ್ತಿದ್ದೇನೆ, "ಶುಭಂ ಕರೋತಿ ಇತಿ ಶಿವಃ" ಸರ್ವ ಆತ್ಮರಿಗೂ ಶುಭವನ್ನು ಮಂಗಳವನ್ನು ಮಾಡುವ ಪರಮಾತ್ಮ ಶಿವನಿಗೆ ನಮಸ್ಕರಿಸುತ್ತಿದ್ದೇನೆ ಎಂದರ್ಥ ಎಂದರು.
ಬ್ರಹ್ಮಕುಮಾರ ಬ್ರಹ್ಮಕುಮಾರಿಯರು ಶ್ವೇತವಸ್ತ್ರಧಾರಿಗಳಾಗಿ ಶಿವ ಧ್ವಜವನ್ನು ಹಿಡಿದು ಸಾಗಿದ ದೃಶ್ಯ ಎಲ್ಲರ ಮನಸ್ಸನ್ನು ಪರಮಾತ್ಮನ ಕಡೆಗೆ ಕರೆದೊಯ್ದಿತು. ಈ ಪಾದಯಾತ್ರೆ ಅಶೋಕ ವೃತ್ತ, ಗಡಿಯಾರಕಂಬ, ಗವಿಮಠ ಗಂಜ್ ಸರ್ಕಲ್ನ ಮೂಲಕ ಈಶ್ವರೀಯ ವಿಶ್ವವಿದ್ಯಾಲಯವನ್ನು ತಲಿಪಿತು. ಈ ಪಾದಯಾತ್ರೆಯಲ್ಲಿ ನೂರಾರು ಜನ ಉತ್ಸಾಹದಿಂದ ಪಾಲ್ಗೊಂಡಿದ್ದರು.