ಚಾಮರಾಜನಗರ, ಸೆ 8 ಬಂಡೀಪುರ ಹುಲಿ ಮೀಸಲು ಪ್ರದೇಶದಲ್ಲಿ ಹಸಿರು ಪರಿಸರ ಹೆಚ್ಚಿಸಲು ಮತ್ತು ನಶಿಸುತ್ತಿರುವ ಪರಿಸರವನ್ನು ಸಂರಕ್ಷಿಸಲು ಅರಣ್ಯ ಇಲಾಖೆ ಬಿದಿರು ಸೇರಿದಂತೆ ವಿವಿಧ ಬಗೆಯ ಬೀಜಗಳ ಬಿತ್ತನೆ ಕಾರ್ಯ ಪೂರ್ಣಗೊಳಿಸಿದೆ. ಬಂಡೀಪುರ ಆವರಿಸಿರುವ ಲಂಟಾನಾ ಮತ್ತು ಇಪಟೋರಿಯಂ ಕಳೆಗಿಡಗಳಿಂದ ಮುಕ್ತಿ ನೀಡಲು ಉದ್ಯಾನವನದ ಶೇ. 60 ರಷ್ಟು ಭಾಗದಲ್ಲಿ ಸಸಿ ನೆಡಲಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಟಿ. ಬಾಲಚಂದ್ರ ಹೇಳಿದ್ದಾರೆ. ಸುಮಾರು 10 ಮೆಟ್ರಿಕ್ ಟನ್ ವಿವಿಧ ತಳಿಗಳ ಹುಲ್ಲು ಮತ್ತು ಬಿದಿರು ಸಸಿಗಳನ್ನು ನೆಡಲಾಗಿದ್ದು ಶನಿವಾರ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಅರಣ್ಯ ಪ್ರದೇಶದ ಸುಮಾರು 3000 ಎಕರೆ ಪ್ರದೇಶವನ್ನು ಮುಖ್ಯವಾಗಿ ಹಿಮವದ್ ಗೋಪಾಲಸ್ವಾಮಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬಿತ್ತನೆ ಕಾರ್ಯ ನಡೆದಿದ್ದು ಹೆಚ್ಚುವರಿ 10 ಮೆಟ್ರಿಕ್ ಟನ್ ಬೀಜಗಳಿಗಾಗಿ ಇಂಟೆಂಡ್ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ವರ್ಷದ ಕಾಡ್ಗಿಚ್ಚಿಗೆ ಈ ಪ್ರದೇಶ ಬಹುವಾಗಿ ಪೀಡಿವಾಗಿದ್ದು ಸುಮಾರು 4 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶಕ್ಕೆ ಹಾನಿಯಾಗಿತ್ತು. ಕಾಡ್ಗಿಚ್ಚು ಗುಡ್ಡ ಪ್ರದೇಶದಲ್ಲಿ ಹಬ್ಬಿದ್ದು ಸಸ್ಯಸಂಕುಲಕ್ಕೆ ಪೂರಕ ವಾತಾವರಣವಿರುವೆಡೆ ಬಿತ್ತನೆ ಕಾರ್ಯ ಮಾಡಲಾಗಿದೆ ಎಂದು ಬಾಲಚಂದ್ರ ವಿವರಿಸಿದ್ದಾರೆ. ಮುಂಗಾರು ಪೂರ್ವ ಮಳೆಗಾಲ ಆರಂಭವಾಗುವ ಕಾಲದಲ್ಲಿ ಈ ಬಿತ್ತನೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಮಣ್ಣಿಗೆ ಅಗತ್ಯ ತೇವಾಂಶ ದೊರೆತು ಬಿತ್ತನೆ ಕಾರ್ಯಕ್ಕೆ ಅನುಕೂಲಕರವಾಗಿತ್ತು. ಮುಂಗಾರು ಪೂರ್ವ ಮತ್ತು ಮಳೆಗಾಲದ ಅವಧಿ ಬಿತ್ತನೆ ಕಾರ್ಯಕ್ಕೆ ಸೂಕ್ತ ಎಂದು ಅವರು ಸವಿವರ ಮಾಹಿತಿ ನೀಡಿದರು. ಈ ಬಿತ್ತನೆ ಕಾರ್ಯ ನಿರಂತರ ಪ್ರಕ್ರಿಯೆಯಾಗಿರಲಿದ್ದು ಇದು ಅರಣ್ಯ ಪುನರುಜ್ಜೀವನವನ್ನು ಖಾತರಿಪಡಿಸುತ್ತದೆ ಮತ್ತು ಸಸ್ಯಾಹಾರಿ ಜೀವಿಗಳಿಗೆ ಅಗತ್ಯ ಆಹಾರ ಒದಗಿಸಲು ನೆರವಾಗಲಿದೆ. 10 - 15 ಕಿಲೋ ವಿವಿಧ ಹುಲ್ಲು ತಳಿಗಳ ಬೀಜಗಳನ್ನು ಸಂಗ್ರಹಿಸಿ ಈ ವ್ಯಾಪ್ತಿಯಲ್ಲಿ ಬಿತ್ತನೆ ಕಾರ್ಯ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಬಾಲಚಂದ್ರ ತಿಳಿಸಿದ್ದಾರೆ.