ಅನೀರೀಕ್ಷಿತ ಆಲಿಕಲ್ಲು ಮಳೆಯಿಂದ ಬೆಳೆ ಹಾನಿ ಸಮೀಕ್ಷೆ ಪೂರ್ಣಗೊಳಿಸಿ: ಸಚಿವ ಸಂತೋಷ ಲಾಡ್
Complete survey of crop damage due to unexpected hailstorm: Minister Santosh Lad
ಲೋಕದರ್ಶನ ವರದಿ
ಧಾರವಾಡ ಏ.1: ಮಾರ್ಚ ಮೂರನೇ ವಾರದಲ್ಲಿ ಕಲಘಟಗಿ ಹಾಗೂ ವಿವಿಧ ತಾಲೂಕುಗಳ ಗ್ರಾಮಗಳಲ್ಲಿ ಆಗಿರುವ ಅನೀರೀಕ್ಷಿತ ಆಲ್ಲಿಕಲ್ಲು ಮಳೆಯಿಂದ ಉಂಟಾಗಿರುವ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಪರಿಹಾರ ನೀಡಲು ಸಂಬಂಧಿಸಿದ ಅಧಿಕಾರಿಗಳು ಶೀಘ್ರವಾಗಿ ಸಮೀಕ್ಷೆ ಪೂರ್ಣಗೊಳಿಸಿ, ವರದಿ ಸಲ್ಲಿಸಬೇಕು. ಮತ್ತು ನಿಯಮಾನುಸಾರ ರೈತರಿಗೆ ಪರಿಹಾರ ನೀಡಲು ಕ್ರಮವಹಿಸಬೇಕೆಂದು ಕಾರ್ಮಿಕ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್. ಲಾಡ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ಅವರು ಇಂದು (ಏ.01) ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಭವನದಲ್ಲಿ ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರದ ಸಭೆ ಜರುಗಿಸಿ, ಮಾತನಾಡಿದರು.
2015 ರಲ್ಲಿ ಇದೇ ರೀತಿ ಆಕಸ್ಮಿಕವಾಗಿ ಜಿಲ್ಲೆಯಲ್ಲಿ ಮಾರ್ಚ ತಿಂಗಳಲ್ಲಿ ಆಲಿಕಲ್ಲು ಮಳೆಯಾದ ವರದಿ ಇದೆ. ಈಗ ಹತ್ತು ವರ್ಷಗಳ ನಂತರ ಜಿಲ್ಲೆಯ ಕಲಘಟಗಿ ಹಾಗೂ ಬೇರೆ ತಾಲೂಕುಗಳಲ್ಲಿ ಆಲಿಕಲ್ಲು ಮಳೆಯಾಗಿ ಮಾವು, ಕಬ್ಬು, ವಿವಿಧ ರೀತಿಯ ಕೃಷಿ, ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳು ಸೇರಿದಂತೆ ಹಿಂಗಾರು ಹಾಗೂ ಬೇಸಿಗೆ ಅವಧಿಯ ಬೆಳೆಗಳು ಹಾನಿಯಾಗಿವೆ. ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ, ಶೀಘ್ರವಾಗಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲು ಸಚಿವರು ನಿರ್ದೇಶಿಸಿದರು.
ಕಲಘಟಗಿ ತಾಲೂಕಿನಲ್ಲಿ ಮಾವು ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಮಾವು ಸೇರಿದಂತೆ ವಿವಿಧ ಬೆಳೆಗಳಿಗೆ ರೈತರು ಈಗಾಗಲೇ ಬೆಳೆ ವಿಮೆ ಮಾಡಿಸಿದ್ದಾರೆ. ಅಂತಹ ರೈತರಿಗೆ ವಿಮೆ ಪರಿಹಾರ ದೊರಕುತ್ತದೆ. ಮತ್ತು ಸರ್ಕಾರದಿಂದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಹಾಗೂ ರಾಜ್ಯ ವಿಪತ್ತು ಪರಿಹಾರ (ಎಸ್‌ಡಿಆರ್‌ಎಫ್) ನಿಧಿಯಿಂದ ನಿಯಮಾನುಸಾರ ಪರಿಹಾರವನ್ನು ನೀಡಲಾಗುತ್ತಿದೆ. ಇದರೊಂದಿಗೆ ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆಯಿಂದ ಉಂಟಾಗಿರುವ ಹಾನಿಗೆ ಸಂಬಂಧಿಸಿದಂತೆ ಪರಿಹಾರ ನೀಡಲು ಸರ್ಕಾರಕ್ಕೆ ವಿಶೇಷ ಅನುದಾನ ಕೋರಿ ಪ್ರಸ್ತಾವನೆಯನ್ನು ಸಲ್ಲಿಸಲು ಜಿಲ್ಲಾಡಳಿತ ಕ್ರಮವಹಿಸಬೇಕೆಂದು ಸಚಿವ ಸಂತೋಷ ಲಾಡ್ ಅವರು ತಿಳಿಸಿದರು.
ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾನಿಯಾಗಿರುವ ಪ್ರತಿ ಕ್ಷೇತ್ರಕ್ಕೆ ಖುದ್ದು ಭೇಟಿ ನೀಡಿ, ವಿವರಗಳನ್ನು ದಾಖಲಿಸಬೇಕು. ಯಾವುದೇ ರೈತರು ಸಮೀಕ್ಷೆಯಿಂದ ಹೊರಗುಳಿಯದಂತೆ ಹಾಗೂ ಪರಿಹಾರದಿಂದ ವಂಚಿತರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಸಚಿವ ಸಂತೋಷ ಲಾಡ್ ಅವರು ಎಚ್ಚರಿಸಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಶಾಶ್ವತ ಪರಿಹಾರ ಗುರುತಿಸಬೇಕಿದೆ. ಪ್ರತಿ ಬೇಸಿಗೆ ಅವಧಿಯಲ್ಲಿ ಕೆಲವು ಗ್ರಾಮಗಳಿಗೆ ಹಾಗೂ ನಗರದ ವಾರ್ಡ್‌ಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ. ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಬೇಗನೆ ಪೂರ್ಣಗೊಳಿಸಿ, ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸುವ ಅಗತ್ಯವಿದೆ. ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಸರಿಯಾದ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ ನೀಡಿ, ಕಾಲಮಿತಿಯಲ್ಲಿ ಕಾಮಗಾರಿಗಳು ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸಚಿವ ಸಂತೋಷ ಲಾಡ್ ಸೂಚಿಸಿದರು.
ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಮಾತನಾಡಿ, ಬೆಳೆಹಾನಿ ಸಮೀಕ್ಷೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲಿ ವರದಿ ಸಲ್ಲಿಸಲಾಗುವುದು. ಮತ್ತು ಬೆಳೆ ವಿಮೆ ಪರಿಹಾರ ವಿತರಿಸಲು ಕ್ರಮವಹಿಸುವಂತೆ ವಿಮೆ ಕಂಪನಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಅಕಾಲಿಕ ಮಳೆಯಿಂದ ಹಾನಿಯಾಗಿರುವ ಹೆಸ್ಕಾಂ ವಿದ್ಯುತ್ ಪರಿಕರಗಳ ಮರುಸ್ಥಾಪನೆಗೆ ಸೂಚಿಸಲಾಗಿದೆ. ಮತ್ತು 14 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಕಂಡುಬಂದಿದ್ದು, ತಕ್ಷಣ ಸ್ಥಳೀಯವಾಗಿರುವ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯ ಜನರಿಗೆ ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲಸೌಕರ್ಯಗಳ ತೊಂದರೆ ಉಂಟಾಗದಂತೆ ಮುನ್ನೆಚರಿಕೆ ವಹಿಸಿ, ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಮಳೆ ವಿವರ: ಪ್ರಸಕ್ತ ಸಾಲಿನ ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ 5 ಮೀ.ಮೀ ಸಾಮಾನ್ಯ ಮಳೆ ಇದ್ದು, ವಾಸ್ತವಿಕವಾಗಿ 2.1 ಮೀ.ಮೀ. ಮಳೆಯಾಗಿ, ಶೇ. -58 ಮೀ.ಮೀ. ಮಳೆ ಕೊರತೆಯಾಗಿತ್ತು. ಮಾರ್ಚ 1 ರಿಂದ 31 ವರೆಗೆ 9.8 ಮೀ.ಮೀ. ಸಾಮಾನ್ಯ ಮಳೆ ಇದ್ದು, ವಾಸ್ತವಿಕವಾಗಿ 67.1 ಮೀ.ಮೀ. ಮಳೆಯಾಗಿದೆ. ಶೇ. 585 ಮೀ.ಮೀ. ಹೆಚ್ಚುವರಿ ಮಳೆಯಾಗಿದ್ದು, ಒಟ್ಟಾರೆಯಾಗಿ ಜನವರಿಯಿಂದ ಮಾರ್ಚ 31 ವರೆಗೆ 14.8 ಮೀ.ಮೀ. ಸಾಮಾನ್ಯ ಮಳೆ ಆಗಬೇಕಿತ್ತು. ವಾಸ್ತವಿಕವಾಗಿ 69.2 ಮೀ.ಮೀ. ಮಳೆಯಾಗಿದೆ. ಒಟ್ಟಾರೆ ಶೇ. 368 ಮೀ.ಮೀ. ಮಳೆ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದರು.
ಜಾನುವಾರು ಹಾನಿ: ಧಾರವಾಡ ತಾಲೂಕಿನ ಹಳೆತೆಗೂರು ಗ್ರಾಮದಲ್ಲಿ ಸಿಡಿಲು ಬಡಿದು ಒಂದು ಎಮ್ಮೆ ಸಾವನ್ನಪ್ಪಿದೆ. ರೂ. 37,500 ಪರಿಹಾರವನ್ನು ನೀಡಲಾಗಿದೆ. ಅದೇ ರೀತಿಯಾಗಿ ನವಲಗುಂದ ತಾಲೂಕಿನ ದಾಟ್ನಾಳ ಗ್ರಾಮದಲ್ಲಿ ಸಿಡಿಲು ಬಡಿದು ಒಂದು ಎಮ್ಮೆ ಸಾವನ್ನಪ್ಪಿದೆ. ರೂ. 37,500 ಪರಿಹಾರವನ್ನು ನೀಡಲಾಗಿದೆ.
ಹುಬ್ಬಳ್ಳಿ ತಾಲೂಕಿನ ಗೋಕುಲ ಗ್ರಾಮದಲ್ಲಿ ಸಿಡಿಲು ಬಡಿದು ಒಂದು ಕುದುರೆ ಸಾವನ್ನಪ್ಪಿದ್ದು, ರೂ.20,000 ಪರಿಹಾರವನ್ನು ನೀಡಲಾಗಿದೆ. ಕಲಘಟಗಿ ತಾಲೂಕಿನ ಮಾಚಾಪುರ ಗ್ರಾಮದಲ್ಲಿ ಆಲಿಕಲ್ಲು ಮಳೆಯಿಂದಾಗಿ ಮೂರು ಕರುಗಳ ಜೀವಹಾನಿಯಾಗಿದೆ. ಇವುಗಳಿಗೆ ರೂ.60,000 ಪರಿಹಾರವನ್ನು ನೀಡಲಾಗಿದೆ.
ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ 31 ಮೇಕೆಗಳು ಮತ್ತು ಕುರಿಗಳು ಸಾವನ್ನಪ್ಪಿದೆ. ರೂ. 1,28,000 ಪರಿಹಾರವನ್ನು ನೀಡಲಾಗಿದೆ. ಅಣ್ಣಿಗೇರಿ ತಾಲೂಕಿನ ಮನಕವಾಡ ಗ್ರಾಮದಲ್ಲಿ 9 ಮೇಕೆಗಳು ಮತ್ತು ಕುರಿಗಳು ಸಾವನ್ನಪ್ಪಿದ್ದು, ರೂ. 36,000 ಪರಿಹಾರವನ್ನು ನೀಡಲಾಗಿದೆ.
ಮನೆ ಹಾನಿ: ಅಕಾಲಿಕ ಮಳೆ ಹಾಗೂ ಆಲಿಕಲ್ಲು ಮಳೆಯಿಂದಾಗಿ ಕಲಘಟಗಿ ತಾಲೂಕಿನಲ್ಲಿ 184 ಮನೆಗಳು ಭಾಗಶಃ ಹಾನಿಯಾಗಿದ್ದು, ಕುಂದಗೋಳ ತಾಲೂಕಿನಲ್ಲಿ ಒಂದು ಮನೆ, ನವಲಗುಂದ ತಾಲೂಕಿನಲ್ಲಿ ಮೂರು ಮನೆಗಳು ಸೇರಿ ಒಟ್ಟು 188 ಮನೆಗಳು ಭಾಗಶಃ ಹಾನಿಯಾಗಿವೆ ಎಂದು ಪ್ರಾಥಮಿಕ ವರದಿಯನ್ನು ತಾಲೂಕಾ ಆಡಳಿತದಿಂದ ಸಲ್ಲಿಕೆಯಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ವಿದ್ಯುತ್ ಪರಿಕರ ಹಾನಿ: ಭಾರಿ ಮಳೆ, ಗಾಳಿ ಹಾಗೂ ಸಿಡಿಲಿನಿಂದ ಜಿಲ್ಲೆಯಲ್ಲಿ ಒಟ್ಟು 201 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಈ ಪೈಕಿ 201 ವಿದ್ಯುತ್ ಕಂಬಗಳನ್ನು ಮರುಸ್ಥಾಪಿಸಲಾಗಿದ್ದು, 43 ಕಂಬಗಳ ಸ್ಥಾಪನಾ ಕಾರ್ಯ ಪ್ರಗತಿಯಲ್ಲಿದೆ. ಮತ್ತು 26 ವಿದ್ಯುತ್ (ಟಿಸಿ) ಪರಿವರ್ತಕಗಳು ಹಾನಿಯಾಗಿದ್ದು, ಎಲ್ಲ 26 ಟಿಸಿಗಳನ್ನು ಬದಲಾಯಿಸಲಾಗಿದೆ. ಹೆಸ್ಕಾಂ ಇಲಾಖೆಗೆ ಸಂಬಂಧಪಟ್ಟಂತೆ ಒಟ್ಟು 119.55 ಲಕ್ಷ ರೂ.ಗಳ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಬೆಳೆ ಹಾನಿ: ಅಕಾಲಿಕ ಮಳೆ ಹಾಗೂ ಆಲಿಕಲ್ಲು ಮಳೆಯಿಂದಾಗಿ ಕಲಘಟಗಿ ತಾಲೂಕಿನಲ್ಲಿ 1315.70 ಹೆಕ್ಟೇರ್ ಪ್ರದೇಶದ ಕಬ್ಬು, 149.64 ಹೆಕ್ಟೇರ್ ಪ್ರದೇಶ ಸೋಯಾಬಿನ್, 243.18 ಹೆಕ್ಟೇರ್ ಪ್ರದೇಶ ಮುಸುಕಿನ ಜೋಳ, 66.20 ಹೆಕ್ಟೇರ್ ಪ್ರದೇಶ ಜೋಳ ಮತ್ತು 5.02 ಹೆಕ್ಟೇರ್ ಪ್ರದೇಶದಲ್ಲಿ ಮಡಕಿ ಬೆಳೆ ಹಾನಿಯಾಗಿದೆ.
18.21 ಹೆಕ್ಟೇರ್ ಪ್ರದೇಶ ಹೆಸರು, 121.85 ಹೆಕ್ಟೇರ್ ಪ್ರದೇಶ ಮಾವು, 20.31 ಹೆಕ್ಟೇರ್ ಪ್ರದೇಶ ಬಾಳೆ, 3.68 ಹೆಕ್ಟೇರ್ ಪ್ರದೇಶದಲ್ಲಿ ಬದನೆ ಬೆಳೆ ಹಾನಿಯಾಗಿದೆ.
5.21 ಹೆಕ್ಟೇರ್ ಪ್ರದೇಶ ಟೊಮೇಟೊ, 1.77 ಹೆಕ್ಟೇರ್ ಪ್ರದೇಶದಲ್ಲಿ ಹಸಿ ಮೆಣಸಿನಕಾಯಿ, 0.53 ಹೆಕ್ಟೇರ್ ಪ್ರದೇಶ ಬೆಂಡೆಕಾಯಿ, 0.56 ಹೆಕ್ಟೇರ್ ಪ್ರದೇಶ ಸೌತೆಕಾಯಿ, 0.49 ಹೆಕ್ಟೇರ್ ಪ್ರದೇಶ ಹಾಗಲಕಾಯಿ, 0.81 ಹೆಕ್ಟೇರ್ ಪ್ರದೇಶ ಚಿಕ್ಕು, 3.32 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ, 7.33 ಹೆಕ್ಟೇರ್ ಪ್ರದೇಶ ಕಲ್ಲಂಗಡಿ, 0.40 ಹೆಕ್ಟೇರ್ ಪ್ರದೇಶದಲ್ಲಿ ಕಾಳುಮೆಣಸು ಬೆಳೆ ಹಾನಿಯಾಗಿದೆ.
ಹುಬ್ಬಳ್ಳಿ ತಾಲೂಕಿನಲ್ಲಿ 1.74 ಹೆಕ್ಟೇರ್ ಪ್ರದೇಶ ಬಾಳೆ, 1.98 ಹೆಕ್ಟೇರ್ ಪ್ರದೇಶ ಬದನೆ, 1.53 ಹೆಕ್ಟೇರ್ ಪ್ರದೇಶ ಟೊಮೇಟೊ, 0.40 ಹೆಕ್ಟೇರ್ ಪ್ರದೇಶ ಸೌತೆಕಾಯಿ, 1.20 ಹೆಕ್ಟೇರ್ ಪ್ರದೇಶ ಪಪಾಯ, 0.40 ಹೆಕ್ಟೇರ್ ಪ್ರದೇಶ ಹೂಕೋಸು, 0.20 ಹೆಕ್ಟೇರ್ ಪ್ರದೇಶದಲ್ಲಿ ಅವರೆ ಬೆಳೆ ಹಾನಿಯಾಗಿದೆ.
ಕುಂದಗೋಳ ತಾಲೂಕಿನಲ್ಲಿ 8.39 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಹಾನಿಯಾಗಿದೆ. ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು 1980.05 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಸಭೆಯಲ್ಲಿ ವಿವರಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಎಸ್.ಘಾಳಿ ಅವರು ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ವಿಶೇಷ ಭೂಸ್ವಾಧೀನ ಅಧಿಕಾರಿ ಕವಿತಾ ಯೋಗಪ್ಪನವರ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಹೆಸ್ಕಾಂ ಅಧೀಕ್ಷಕ ಅಭಿಯಂತರ ಕೆ.ವಿ.ಪಾಗಿ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ. ಎಸ್.ವಿ.ಸಂತಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕೆ.ಸಿ.ಭದ್ರಣನವರ ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳ ತಹಶೀಲ್ದಾರರು, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಕಂದಾಯ, ಪೊಲೀಸ್, ಅಗ್ನಿಶಾಮಕ, ಹೆಸ್ಕಾಂ, ಭೂಸ್ವಾಧೀನ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 