ಅಂಗನವಾಡಿ ಕಟ್ಟಡ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ: ಡಾ.ಕೆ.ರಾಕೇಶ್‌ಕುಮಾರ್

ತುಮಕೂರು, ಜೂ.3,ಅಂಗನವಾಡಿ ಕಟ್ಟಡಗಳ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ಇಲಾಖಾ ವಶಕ್ಕೆ ನೀಡುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಸೂಚಿಸಿದ್ದಾರೆ.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪಂಚಾಯತ್ ರಾಜ್‌ಯಡಿಯಲ್ಲಿ 56 ಗ್ರಾಮ ಪಂಚಾಯಿತಿ 130 ಹಾಗೂ ನಿರ್ಮಿತಿ ಕೇಂದ್ರದ 26 ಕಟ್ಟಡಗಳು ಪ್ರಗತಿಯಲ್ಲಿದ್ದು, ಪೂರ್ಣಗೊಳಿಸಬೇಕೆಂದು ಅವರು ಸೂಚಿಸಿದರು.ಕಾಪೌಂಡ್ ಹೊಂದಿರುವ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಕೈತೋಟವನ್ನು ನಿರ್ಮಿಸುವಂತೆ ತೋಟಗಾರಿಕಾ ಇಲಾಖೆಯವರಿಗೆ ಸೂಚಿಸಿದರಲ್ಲದೇ ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿರುವ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಮನೆಗೆ ಆಹಾರ ಪದಾರ್ಥಗಳನ್ನು ನಿಗಧಿತ ಸಮಯಕ್ಕೆ ವಿತರಣೆ ಮಾಡುವಂತೆ ಸಿಡಿಪಿಒಗಳಿಗೆ ಅವರು ಸೂಚಿಸಿದರು.

ಅಂಗನವಾಡಿ ಕೇಂದ್ರಗಳಿಗೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಅನುದಾನದಲ್ಲಿ ಕಾಪೌಂಡ್ ಮತ್ತು ನೀರಿನ ಸೌಲಭ್ಯ ಹಾಗೂ ಅಗತ್ಯವಿರುವ ಮೂಲಭೂತ ಸೌಲಭ್ಯವನ್ನು ಕಲ್ಪಿಸುವಂತೆ ತಿಳಿಸಿದರು.ಮುಂದುವರೆದು ವರದಕ್ಷಿಣೆ ನಿಷೇಧ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಮಹಿಳೆಯ ಮೇಲೆ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರೆ ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಠಾಣೆಗೆ ದೂರು ನೀಡಿ ಎಂದರಲ್ಲದೇ ಕೌಟುಂಬಿಕ ಕಲಹದಂತಹ ಪ್ರಕರಣಗಳಲ್ಲಿ  ದೂರುದಾರರನ್ನು ಕರೆಸಿ ಸಮಾಲೋಚನೆ ನಡೆಸಿ ಇತ್ಯರ್ಥಗೊಳಿಸಬೇಕೆಂದು ಅವರು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್  ಮಾತನಾಡಿ, ಸಾಂತ್ವನ ಯೋಜನೆಯಡಿ ಕೌಟುಂಬಿಕ ಕಲಹದಲ್ಲಿ 1049 ಪ್ರಕರಣಗಳು ದಾಖಲಾಗಿದ್ದು, 757 ಪ್ರಕರಣಗಳು ಇತ್ಯರ್ಥಗೊಂಡಿದ್ದು, 292 ಪ್ರಕರಣಗಳು ಬಾಕಿ ಇರುತ್ತವೆ ಎಂದು ಸಭೆಗೆ ಮಾಹಿತಿ ನೀಡಿದರು.ಸಖಿ ‘ಒನ್ ಸ್ಟಾಪ್ ಸೆಂಟರ್’ಯೋಜನೆಯಡಿ ಅತ್ಯಾಚಾರ/ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಒಂದೇ ಸೂರಿನಡಿ ಸಮಾಲೋಚನೆ, ವೈದ್ಯಕೀಯ, ಕಾನೂನು ಸಲಹೆ, ಪೊಲೀಸ್ ನೆರವನ್ನು ಒದಗಿಸಲಾಗುತ್ತಿದೆ. ಸ್ಥೈರ್ಯ ನಿಧಿ ಯೋಜನೆಯಡಿ ಅತ್ಯಾಚಾರ/ದೌರ್ಜನ್ಯ ಹಾಗೂ ಇತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ತುರ್ತು ವೈದ್ಯಕೀಯ ಪರಿಹಾರವಾಗಿ 25 ಸಾವಿರ ರೂ. ನೀಡಲಾಗುತ್ತಿದೆ. ವಿಧವಾಕೋಶಕ್ಕೆ ಸಂಬಂಧಪಟ್ಟಂತೆ ಸರ್ವೇ ಮಾಡಿಲಾಗಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ 63640 ವಿಧವೆಯರು ಇರುವ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ಸಿಡಿಪಿಒ ಶ್ರೀಧರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.