ವ್ಯಾಪಾರ ಸ್ಥಿರತೆ ಮರಳಿ ತರಲು ಬದ್ಧ : ಚೀನಾ

ಬೀಜಿಂಗ್, ಫೆ 24, ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿರುವ ಪರಿಣಾಮ ಚೀನಾದ ವ್ಯಾಪಾರ ವಹಿವಾಟು ಬಹುವಾಗಿ ಬಾಧಿತವಾಗಿದ್ದು ಅದನ್ನು ತಹಬದಿಗೆ ತರಲು ಬದ್ಧ ಎಂದು ಚೀನಾ ಹೇಳಿದೆ.  ಹುಬೈ ಪ್ರಾಂತ್ಯ ಮತ್ತದರ ರಾಜಧಾನಿ ವುಹಾನ್ ಸೇರಿದಂತೆ ಒಂಭತ್ತು ಪ್ರಾಂತ್ಯಗಳಾದ್ಯಂತ ದೈನಂದಿನ ಅಗತ್ಯ ವಸ್ತುಗಳ ಪೂರೈಕೆಗೆ ಸ್ಥಳೀಯ ವಾಣಿಜ್ಯ ಸಂಸ್ಥೆಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಅಲ್ಲಿನ ವಾಣಿಜ್ಯ ಸಚಿವಾಲಯದ ಸುತ್ತೋಲೆ ತಿಳಿಸಿದೆ.  ದೈನಂದಿನ ಅಗತ್ಯಗಳಾದ ಹಣ್ಣು – ತರಕಾರಿ, ಮೊಟ್ಟೆ, ಮಾಂಸ, ಡೈರಿ ಪದಾರ್ಥ, ಅಕ್ಕಿ, ಹಿಟ್ಟು, ಎಣ್ಣೆ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಪೂರೈಕೆ ಖಾತರಿಪಡಿಸುವಂತೆ ಸೂತ್ತೋಲೆಯಲ್ಲಿ ಹೇಳಲಾಗಿದೆ. 

ನವೀನ ಸಾಗಾಟ ಮಾರ್ಗಗಳನ್ನು ಅಳವಡಿಸಿಕೊಳ್ಳುವಂತೆಯೂ ಸೂಚಿಸಲಾಗಿದೆ. ಈ ಮೂಲಕ ಕೊರೊನಾ ಪೀಡಿತ ಪ್ರದೇಶಗಳಲ್ಲಿರುವ ನಾಗರಿಕರು ಹೆಚ್ಚು ಶ್ರಮ ಪಡದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ.  ದೈನಂದಿನ ಅಗತ್ಯಗಳನ್ನು ಪೂರೈಸು ಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ಪುನರಾರಂಭಿಸುವಂತೆಯೂ ಸೂಚಿಸಲಾಗಿದೆ. ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿ ದೈನಂದಿನ ಕಾರ್ಯ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.