ಡಾ. ಫ. ಗು. ಹಳಕಟ್ಟಿಯವರು ಬಿಂದುವಿನಲ್ಲಿ ಸಿಂಧು ಪ್ರಥಕ್ಕರಿಸಿದವರು: ಪ್ರೊ. ಸಿದ್ದಣ್ಣ ಲಂಗೋಟಿ

ಡಾ. ಫ. ಗು. ಹಳಕಟ್ಟಿಯವರು ಬಿಂದುವಿನಲ್ಲಿ ಸಿಂಧು ಪ್ರಥಕ್ಕರಿಸಿದವರು: ಪ್ರೊ. ಸಿದ್ದಣ್ಣ ಲಂಗೋಟಿ Commemoration program of Dr. F.G. Halakatti

ವಿಜಯಪುರ 02: ಡಾ. ಫ.ಗು.ಹಳಕಟ್ಟಿಯವರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಸಾಹಿತ್ಯಿಕ ಮೌಲ್ಯಗಳನ್ನು ಎತ್ತಿ ತೋರಿಸಿದ ಮಹಾತ್ಮರು. ವಕೀಲವೃತ್ತಿ - ನ್ಯಾಯಾದೀಶರ ಸ್ಥಾನಕ್ಕೆ ರಾಜೀನಾಮೆ ನೀಡಿ, ವಚನ ಸಾಹಿತ್ಯದ ತಾಡೋಲೆಗಳನ್ನು ಮಠ-ಮಂದಿರಗಳಲ್ಲಿ, ಮನೆಯ ಜಗುಲಿಯ ಮೇಲೆ ಪೂಜೆಗೊಳ್ಳುತ್ತಿರುವ, ಅವಶ್ಯವಿದ್ದಾಗ ಜನರಿಗೆ ಹಣ ನೀಡಿ ತಾಡೋಲೆಗಳನ್ನು ಸಂಗ್ರಹಿಸಿ ಮತ್ತು ಅವುಗಳನ್ನು ಪರಿಷ್ಕರಿಸಿ, ವಿಮರ್ಶಿಸಿ ವಚನ ಸಾಹಿತ್ಯವನ್ನು ಬಿಂದುವಿನಲ್ಲಿ ಸಿಂಧುವಾಗಿ ಪ್ರಥಕ್ಕರಿಸಿದರು. ವಚನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೀರ್ತಿ ವಚನಪಿತಾಮಹ ಡಾ. ಫ.ಗು.ಹಳಕಟ್ಟಿಯವರಿಗೆ ಸಲ್ಲುತ್ತದೆಂದು ಮತ್ತು ಹರ್ಡೇಕರ ಮಂಜಪ್ಪನವರು, ಬಂಥನಾಳ ಶಿವಯೋಗಿಗಳು ಕೂಡಾ ವಚನ ಸಾಹಿತ್ಯ ಪ್ರಚಾರಗೊಳಿಸುವಲ್ಲಿ ಅಹರ್ನಿಶಿ ದುಡಿದವರು ಎಂದು ಹಿರಿಯ ಸಾಹಿತಿ ಪ್ರೊ. ಸಿದ್ದಣ್ಣ ಲಂಗೋಟಿ ಹೇಳಿದರು.  

ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಹಮ್ಮಿಕೊಂಡ ಡಾ. ಫ.ಗು.ಹಳಕಟ್ಟಿಯವರ ಪುಣ್ಯಸ್ಮರಣೆ ಕಾರ‌್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.  

ಪ್ರೊ. ಸಿದ್ದಣ್ಣ ಲಂಗೋಟಿ ರಚಿಸಿದ ‘ಶರಣರು ಹಾಗೂ ಸಂತರ ದರ್ಶನ’ ಗ್ರಂಥವನ್ನು ಬಿಡುಗಡೆ ಮಾಡಿ ಹಿರಿಯ ಸಂಶೋಧಕ ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ಮಾತನಾಡಿ ಈ ಪುಸ್ತಕದಲ್ಲಿ ಮಹಾನ್ ವ್ಯಕ್ತಿಗಳ ಚರಿತ್ರಾರ್ಹ ಸಂಗತಿಗಳನ್ನು ದಾಖಲಿಸಿದ್ದಾರೆ. ಮುಂದಿನವರಿಗೆ ಇದು ಮಾರ್ಗದರ್ಶಿಯಾಗಲಿದೆ. ಶರಣರ ಸಂತರ ಆದರ್ಶಗಳು ಇಗಿನ ಬದುಕಿನ ಪಾಠವಾಗಬೇಕು ಎಂದರು.  

ಡಾ. ಎಂ.ಎಸ್‌.ಮದಭಾವಿಯವರು ಅಧ್ಯಕ್ಷತೆ ವಹಿಸಿದ್ದರು. ಶರಣ ದಂಪತಿಗಳಾದ ಪ್ರೊ. ಸಿದ್ದಣ್ಣ ಮತ್ತು ಕಲ್ಯಾಣಮ್ಮನವರನ್ನು ಆಡಳಿತಾಧಿಕಾರಿ ಪ್ರೊ. ವಿ.ಎಸ್‌.ಬಗಲಿ ಮತ್ತು ಪ್ರೊ. ಆಯ್‌.ಎಸ್‌.ಕಾಳಪ್ಪನವರ ಸನ್ಮಾನಿಸಿದರು. ಡಾ. ಸುಭಾಸ ಕನ್ನೂರ ನಿರೂಪಿಸಿದರು. ಡಾ. ವಿ.ಡಿ.ಐಹೊಳ್ಳಿ ಸ್ವಾಗತಿಸಿ ಪರಿಚಯಿಸಿದರು. ಬಿ.ಕೆ.ಗೋಟ್ಯಾಳ ವಂದಿಸಿದರು.  

ಎಸ್‌.ವಾಯ್‌.ಗದಗ, ಎಸ್‌.ಬಿ.ದೊಡಮನಿ ದಂಪತಿ, ಸುರೇಶ ಚುಳಕೆ,    ಡಾ. ಎಂ.ಎಸ್‌.ಚಾಂದಕವಠೆ, ಈರಣ್ಣ ತೊಂಡಿಕಟ್ಟಿ, ಬಿ.ಟಿ.ಈಶ್ವರಗೊಂಡ, ವಿಠಲ ತೇಲಿ, ಶಶಿಧರ ಸಾತಿಹಾಳ, ಶ್ಯಾಮಲಾ ಗಣ್ಣೂರ, ಎ.ಎಸ್‌.ಪಾಟೀಲ ಮುಂತಾದವರು ಉಪಸ್ಥಿತರಿದ್ದರು.