ಬೆಂಗಳೂರು, ಫೆ 20-ವಿಧಾನಸಭೆಯಲ್ಲಿ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಪರೇಷನ್ ಕಮಲದಿಂದ ಹಲವರು ಅಸಮಾಧಾನಗೊಂಡಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿಯ ಶಾಸಕರ ಕಾಲೆಳೆದರು.
ಗುರುವಾರ ಬೆಳಗ್ಗೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ರಾಜ್ಯಪಾಲರ ಚರ್ಚೆಯ ವಂದನಾ ನಿರ್ಣಯದ ಮೇಲಿನ ಚರ್ಚೆಗಾಗಿ ನಾಲ್ಕು ದಿನಗಳ ಪೈಕಿ ಮೂರು ದಿನಗಳ ನಿಲುವಳಿ ಸೂಚನೆ ಮೇಲಿನ ಚರ್ಚೆಯಲ್ಲಿಯೇ ಕಳೆಯಿತು. ಈಗ ಉಳಿದಿರುವ ಒಂದು ದಿನದಲ್ಲಿ ಭಾಷಣದ ಮೇಲಿನ ಚರ್ಚೆ ನಡೆಸಲು ಸಾಧ್ಯವಿಲ್ಲ. ಚರ್ಚೆಯಲ್ಲಿ ಪಾಲ್ಗೊಳ್ಳಲು ಎಲ್ಲಾ ಶಾಸಕರಿಗೂ ಅವಕಾಶ ಕಲ್ಪಿಸಬೇಕು.ಸೋಮವಾರ ಹಾಗೂ ಮಂಗಳವಾರಕ್ಕೂ ಈ ಚರ್ಚೆಯನ್ನು ಮುಂದುವರಿಸಲು ಆದೇಶ ನೀಡಬೇಕು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಮನವಿ ಮಾಡಿದರು.
ಇದಕ್ಕೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಅದು ಸಾಧ್ಯವಿಲ್ಲ. ಬಜೆಟ್ ತಯಾರಿಗೆ ಸಮಯ ಬೇಕು ಎಂದರು. ಆಗ ಸ್ಪೀಕರ್, ಈ ಕುರಿತು ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಆಗ ಮಧ್ಯಪ್ವೇಶಿಸಿದ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ, ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಹಾಗೂ ಆಡಳಿತ ಪಕ್ಷದ ಮೊದಲ ಸಾಲಿನಲ್ಲಿ ಕುಳಿತವರು ಕಡಿಮೆ ಮಾತನಾಡಿದರೆ ಹಿಂದೆ ಕುಳಿತ ನಮಗೆ ಅವಕಾಶ ಸಿಗುತ್ತದೆ ಎಂದರು. ಆಗ ಸಿದ್ದರಾಮಯ್ಯ, ನೀವು ಕೂಡ ಹಿರಿಯ ಶಾಸಕರಲ್ಲವೇ? ಎಂದು ಪ್ರಶ್ನಿಸಿದರು.
ಆದರೆ ನಮಗೆ ಏನೂ ಕೊಟ್ಟಿಲ್ಲ ಎಂದು ಯತ್ನಾಳ ಹಾಸ್ಯಮಯವಾಗಿ ಹೇಳಿದರು. ಹಾಗೆಂದರೆ, ನೀವು ಹೇಳುತ್ತಿರುವ ಮಾತಿನ ಅರ್ಥ, ಮುಂದಿನ ಸಾಲಿನಲ್ಲಿದ್ದವರು ತ್ಯಾಗ ಮಾಡಿ ಹಿಂದಕ್ಕೆ ಹೋದರೆ ನೀವು ಮುಂದೆ ಬಂದು ಮಂತ್ರಿಯಾಗಬಹುದು ಎಂದರ್ಥವೇ ಎಂದು ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ ಕಿಚಾಯಿಸಿದರು. ಸದನದಲ್ಲಿ ನಗುವಿನ ಅಲೆ ಎದ್ದಿತು.
ಈ ಸರ್ಕಾರ ಆಪರೇಷನ್ ಕಮಲದ ಮೂಲಕ ಅನೈತಿಕವಾಗಿ ಅಧಿಕಾರಕ್ಕೆ ಬಂದು ಎಂದು ಆರೋಪಿಸಿದ ಸಿದ್ದರಾಮಯ್ಯ, ಅದರಲ್ಲಿ ನಿಮ್ಮದು ಪ್ರಮುಖ ಪಾತ್ರವಿತ್ತು ಅಲ್ಲವೇ ಎಂದು ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ಪ್ರಶ್ನಿಸಿದರು. ನಂತರ, ಆದರೂ ಅಶ್ವತ್ಥನಾರಾಯಣ ನನ್ನ ಉತ್ತಮ ಗೆಳೆಯ ಎಂದರು.
ನಂತರ, ಮುಂದಿನ ಸಾಲಿನಲ್ಲಿ ಕುಳಿತಿದ್ದ ರಾಮಲಿಂಗಾ ರೆಡ್ಡಿ ಅವರನ್ನು ಉದ್ದೇಶಿಸಿ, ರೆಡ್ಡಿ ಅವರಿಗೆ ಬೆಂಗಳೂರಿನ ಎಲ್ಲ ಶಾಸಕರು ಉತ್ತಮ ಗೆಳೆಯರು. ಅವರು ಬೆಂಗಳೂರಿನ ಪಿತಾಮಹ ಎಂದು ಬಣ್ಣಿಸಿದರು. ಆಗ ಬಿಜೆಪಿಯ ಸೋಮಶೇಖರ್, ರೆಡ್ಡಿ ಹಾಗೂ ಆರ್.ಅಶೋಕ್ ಬೆಂಗಳೂರಿನ ಪಿತಾಮಹರು ಇದ್ದಂತೆ. ಅವರ ನಡುವೆ ನೀವು ಕೆ.ಜೆ.ಜಾರ್ಜ್ ಅವರನ್ನು ಬೆಳೆಸಿದಿರಿ ಎಂದು ಕಾಲೇಳೆದರು. ಆಗ ಸಿದ್ದರಾಮಯ್ಯ ಜಾರ್ಜ್ ಸಹ ಸೀನಿಯರೇ ಎಂದು ಸಮರ್ಥಿಸಿಕೊಂಡರು.
ಯತ್ನಾಳ ಮಧ್ಯಪ್ರವೇಶಿಸಿ, ನಿಮ್ಮ ಅರ್ಧ ಕ್ಯಾಬಿನೆಟ್ ನಮ್ಮಲ್ಲೇ ಇದೆ ಮಾರ್ಮಿಕವಾಗಿ ನುಡಿದರು. ಇದಕ್ಕೆ ತಪ್ಪಾಗಿ ತಿಳಿದ ಸಿದ್ದರಾಮಯ್ಯ ಕೋಪಗೊಂಡರು. ಆಗ ಬಿಜೆಪಿಯ ಇತರರು ಅವರನ್ನು ಸಮಾಧಾನಗೊಳಿಸಿ, ಇದು ನಿಮಗೆ ಸೋಮಶೇಖರ್ ನೀಡಿದ ಹೊಗಳಿಕೆ ಎಂದರು.
ನಂತರ, ನಿಮ್ಮ ಪಕ್ಷದ ಬೆಳವಣಿಗೆಯನ್ನು ನಿತ್ಯ ನೋಡುತ್ತಾ ಇದ್ದೇವಲ್ಲ. ಅಲ್ಲವೇ ಯತ್ನಾಳ್ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಅದಕ್ಕೆ ಯತ್ನಾಳ್, ನಿಮ್ಮ ಸಹಾಯ, ಸಹಕಾರ ಬಹಳವೇ ಇದೆ. ಧನ್ಯವಾದ ಎಂದು ಹೇಳಿ ಚರ್ಚೆಗೆ ಅಂತ್ಯ ಹಾಡಿದರು.